ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೌದು… ಅವರು ಜಿಲ್ಲಾ ಬಿಜೆಪಿಯಲ್ಲಿನ ನಗುಮೊಗದ ವ್ಯಕ್ತಿ. ಎಲ್ಲರನ್ನೂ ಅಣ್ಣಾ ಎಂದು ಆತ್ಮೀಯತೆಯಿಂದ ಸಂಬೋಧಿಸುತ್ತಾ, ಸಮಷ್ಠಿ ಪ್ರಜ್ಞೆ ಸಂಘಟನೆಯ ಚಾಣಾಕ್ಷ ವ್ಯಕ್ತಿತ್ವದ ಬಿ.ಆರ್. ಮಧುಸೂಧನ್. ಬಹುಷಃ ‘ಬಿಜೆಪಿ ಮಧು’ ಎಂದರೆ ತತಕ್ಷಣ ಸ್ಮೃತಿಪಟಲ ಜಾಗೃತವಾಗಬಹುದು.
ಇಂತಹ ವ್ಯಕ್ತಿಯನ್ನು ಈಗ ಶಿವಮೊಗ್ಗದ ಮಟ್ಟಿಗೆ ಒಂದು ಜವಾಬ್ದಾರಿ ತಾನಾಗಿಯೇ ಅರಸಿ ಬಂದಿದೆ. ಅದೇ, ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿಗೆ ಅಧ್ಯಕ್ಷ ಸ್ಥಾನ.
ವಾಸ್ತವವಾಗಿ ಈ ಸಮಿತಿಗೆ ಶಾಸಕರು ಅಧ್ಯಕ್ಷರಾಗಿರಬೇಕು. ಆದರೆ, ಶಿವಮೊಗ್ಗ ಶಾಸಕ ಶ್ರೀ ಕೆ.ಎಸ್. ಈಶ್ವರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಆಗಿರುವುದರಿಂದ ತಮ್ಮ ಈ ಸ್ಥಾನವನ್ನು ಮಧುಸೂಧನ್ ಅವರಿಗೆ ವಹಿಸುವಂತೆ ಶಿಫಾರಸ್ಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಧು ಅವರನ್ನು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಮೂಲತಃ ಹಾಲಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದ ಮಧುಸೂಧನ್ ಅವರ ತಂದೆ ದಿ.ಬಿ. ರಾಮು. ಇವರು ಓದಿದ್ದು ಎಸ್’ಎಸ್’ಎಲ್’ಸಿ ಆದರೂ ಶಿವಮೊಗ್ಗದ ಬಹಳಷ್ಟು ಕ್ಷೇತ್ರಗಳಲ್ಲಿ ಇವರ ಸಾಧನೆ ಹಾಗೂ ಸೇವೆ ಇವರ ಸಾಮರ್ಥ್ಯವನ್ನು ಬಿಂಬಿಸುತ್ತದೆ.
ಬಾಲ್ಯದಿಂದಲೂ ಬಡತನವನ್ನೇ ಕಂಡ ಇವರ ಮೊಗದಲ್ಲಿ ನಗು ಎಂಬುದು ಮಾತ್ರ ಎಂದಿಗೂ ಬತ್ತಿಲ್ಲ. ತಮ್ಮ ಬಾಲ್ಯದ ಕಷ್ಟದ ದಿನಗಳಲ್ಲಿ ಬೆಂಗಳೂರಿನಲ್ಲಿ ಹೊಟೇಲ್ ಕಾರ್ಮಿಕನಾಗಿ ಜೀವನ ಸಾಗಿಸಿದ ಮಧು, ಲಾಟರಿ ಮಾರಾಟ, ಪುಸ್ತಕ-ಪತ್ರಿಕೆ-ಕ್ಯಾಸೆಟ್ ಮಾರಾಟ ಮಾಡುತ್ತಾ ಬದುಕಿನ ಬಂಡಿ ಸಾಗಿಸುತ್ತಾ ಬದುಕು ಗೆದ್ದ ಶ್ರಮಜೀವಿ.
ಶಿವಮೊಗ್ಗದಲ್ಲಿ ಇವರ ಆರಂಭದ ದಿನಗಳಿಂದಲೂ ಇಂದಿನ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೆ.ಎಸ್. ಈಶ್ವರಪ್ಪ ಅವರ ಕುಟುಂಬದ ಆಪ್ತರು. ಒಂದು ಹಂತದಲ್ಲಿ ಈಶ್ವರಪ್ಪನವರೇ ಇವರ ಕೈ ಹಿಡಿದು ನಡೆಸಿದ ಕಾರಣ, ವಿಶ್ವಂಭರ ಏಜೆನ್ಸೀಸ್ ಎಂಬ ತಂಪು ಪಾನೀಯಗಳ ವಿತರಕರಾದರು.

ಮಧು ಅವರು ಪಕ್ಷದಲ್ಲಿ ವಿವಿಧ ಜವಾಬ್ದಾರಿಯಲ್ಲಿದ್ದ ವೇಳೆ ಜಿಲ್ಲೆಯಲ್ಲಿ ನಡೆದ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ದೊರೆತ ವಿಜಯದಲ್ಲಿ ಇವರ ಕಾರ್ಯಕ್ಷಮತೆಯ ಛಾಪು ಇದೆ.

ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಾಧನೆಗಳು:
ಮಲೆನಾಡಿನ ಸಾಂಸ್ಕೃತಿಕತೆ ಹೆಬ್ಬಾಗಿಲಾಗಿರುವ ಶಿವಮೊಗ್ಗದ ನೆಲೆಯಲ್ಲಿ ಮಧುಸೂಧನ್ ಬೀರಿದ ಕಂಪು ಹೆಜ್ಜೆ ಹೆಜ್ಜೆಯಲ್ಲಿಯೂ ಇದೆ. ಹವ್ಯಾಸಿ ಪತ್ರಕರ್ತರಾದ ಮಧುಸೂಧನ್, ಸಮಾಜ ಸೇವೆ, ಸಾಂಸ್ಕೃತಿಕ ರಂಗದಲ್ಲಿ ಕ್ರಿಯಾಶೀಲರಾಗಿದ್ದು, ಶಿವಮೊಗ್ಗದ ಪ್ರತಿಷ್ಠಿತ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯ ಸಂಚಾಲಕರಾಗಿದ್ದಾರೆ. ಅಲ್ಲದೇ, ನಿನಾದ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರು, ಸಂಗಮ ಕಲಾಕ್ಷೇತ್ರದ ಸ್ಥಾಪಕ ಸಂಚಾಲಕರೂ ಆಗಿರುವ ಇವರು, ಶಿವಮೊಗ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರೂ ಹಾಗೂ ಟಿಎಸಿ ಸದಸ್ಯರೂ ಸಹ ಆಗಿ ಕಾರ್ಯನಿರ್ವಹಿಸಿದ ಅನುಭವವುಳ್ಳವರು.

ನಾಡಿನ ಪ್ರಸಿದ್ಧ ಗಾಯಕರು, ಸಂಗೀತ ತಜ್ಞರು, ಶ್ರೇಷ್ಠ ಕಲಾವಿದರು, ಖ್ಯಾತ ಸಾಹಿತಿಗಳೊಂದಿಗೆ ಒಡನಾಟ ಹೊಂದಿರುವ ಮಧು, ಹಿನ್ನೆಲೆ ಗಾಯಕ, ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ರಮೇಶ್ ಚಂದ್ರ ಅವರ ಸಾರಥ್ಯದಲ್ಲಿ ಸಂಗಮ ಕಲಾಕ್ಷೇತ್ರವನ್ನು ಜಿಲ್ಲೆಯಲ್ಲಿ ಸ್ಥಾಪಿಸಿ, ಉದಯೋನ್ಮುಖ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ನಿರ್ಮಿಸಿದ್ದಾರೆ.
ನಿನಾದ ಸಾಂಸ್ಕೃತಿಕ ಸಂಸ್ಥೆ
ನಗರದ ಸಾಂಸ್ಕೃತಿಕ ಕಲಾ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸಂಸ್ಥೆ ನಿನಾದ. ಕಳೆದ 12 ವರ್ಷಗಳಿಂದ ಈ ಸಂಸ್ಥೆ ಮುಖೇನ ಬಹಳಷ್ಟು ವೈವಿಧ್ಯಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ, ಇಡಿಯ ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಈ ಸಂಸ್ಥೆ ಮೂಲಕ ನಾಡಿನ ಶ್ರೇಷ್ಠ ವಾಗ್ಮಿಗಳನ್ನು, ಆಧ್ಯಾತ್ಮ ಲೋಕದ ಚಿಂತಕರು, ಉಪನ್ಯಾಸಕರು, ವಿದ್ವಾಂಸರುಗಳನ್ನು ಪರಿಚಯಿಸುವ ಕಾರ್ಯವನ್ನು ಮಾಡುತ್ತಿದೆ. ಮತ್ತೆ ಇದರ ಯಶಸ್ಸಿನ ಹಿಂದಿರುವ ಶಕ್ತಿ ಮಧುಸೂಧನ್ ಅವರೇ.

ಮಧುಸೂಧನ್ ಅವರ ಕುರಿತಾಗಿ ಹೇಳುವಾಗ ಈ ವಿಚಾರವನ್ನು ಪ್ರಸ್ತಾಪಿಸಲೇಬೇಕು. ತಮ್ಮ ವ್ಯಕ್ತಿಗತ ಸ್ವಭಾವದಲ್ಲಿಯೇ ಇವರಿಗೆ ಸಾಮಾಜಿಕ ಕಳಕಳಿ ಎಂಬುದು ಮಿಳಿತವಾಗಿದೆ. ನಂದ ಗೋಕುಲ ಗೋಶಾಲೆ, ಬಡವಿದ್ಯಾರ್ಥಿ ದತ್ತು ಯೋಜನೆ, ನಿರಾಶ್ರಿತರ ಆರೋಗ್ಯ ತಪಾಸಣಾ ಶಿಬಿರಗಳು, ರಕ್ತದಾನ, ಸ್ವಚ್ಛತಾ ಕಾರ್ಯಕ್ರಮಗಳು ಸೇರಿದಂತೆ ಬಹಳಷ್ಟು ಆಯಾಮದಲ್ಲಿ ಸೇವೆ ಸಲ್ಲಿಸಿದ್ದಾರೆ.


-ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
Get In Touch With Us info@kalpa.news Whatsapp: 9481252093









Discussion about this post