ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಸಕ್ತ ಕಾಲಘಟ್ಟಕ್ಕೆ ಶೈಕ್ಷಣಿಕ ಕ್ಷೇತ್ರದಲ್ಲಿ ತಾರ್ಕಿಕತೆ ಹಾಗೂ ಪ್ರಾಯೋಗಿಕ ಚಾಕಚಕ್ಯತೆಯನ್ನು ಅಳವಡಿಸಿಕೊಳ್ಳುವುದು ಬಹು ಮುಖ್ಯವಾಗಿದೆ ಎಂದು ‘ಟೆಕ್ ಮಂತ್ರ’ ಸಂಸ್ಥೆಯ ಮುಖ್ಯಸ್ಥ ವಿಜಯ್ ಕುಮಾರ್ ರೇವಣಕರ್ ಹೇಳಿದರು.
ನಗರದ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಐದು ದಿನಗಳ ಅಧ್ಯಾಪಕ ಅಭಿವೃದ್ಧಿ ಕಾರ್ಯಾಗಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಜ್ಞಾನಾರ್ಜನೆ ಎಂಬುದು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಅತಿ ಸುಲಭದ ರೀತಿಯಲ್ಲಿ ದೊರೆಯುವ ಒಂದು ಮಾರ್ಗವಾಗಿ ಮತ್ತು ಔದ್ಯೋಗಿಕ ಕ್ಷೇತ್ರವು ಅನುಭವಿಸುತ್ತಿರುವ ದೈನಂದಿನ ಪ್ರಾಯೋಗಿಕ ವೈಚಾರಿಕತೆಗಳ ಅಳವಡಿಕೆಯನ್ನು ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕವೃಂದಕ್ಕೆ ಚಾಣಾಕ್ಷ ರೀತಿಯಲ್ಲಿ ತಲುಪಿಸುವಂತೆ ನಡೆಸುವ ಪ್ರಯತ್ನಗಳ ಪ್ರಸ್ತುತತೆಯನ್ನು ಈ ಬಗೆಗಿನ ಶಿಬಿರಗಳು ಸೂಚಿಸುತ್ತದೆ ಎಂದರು.
ಇಂಜಿನಿಯರಿಂಗ್ ಶೈಕ್ಷಣಿಕ ಕ್ಷೇತ್ರದಲ್ಲಿ ತಿಳಿಸಿಕೊಡಲಾಗುವ ಅನೇಕ ಬಗೆಯ ವಿಷಯಗಳ ಚರ್ಚೆಯು ಪ್ರಾಯೋಗಿಕತ್ವವನ್ನು ಹೊಂದಿರುವುದು ಬಹು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಅಧ್ಯಾಪಕ ವೃಂದವು ದೈನಂದಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಕೈಗಾರಿಕಾ ಕ್ಷೇತ್ರವು ಅನುಭವಿಸುತ್ತಿರುವ ಹೊಸ ಹೊಸ ಬಗೆಯ ವಿನೂತನ ಅನ್ವೇಷಣೆಗಳ ರೂಪರೇಷೆಗಳು, ಸಾಮಾಜಿಕ ಮಟ್ಟದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ಬಗೆಗಳು ಹಾಗೂ ತನ್ಮೂಲಕ ಉದ್ಭವ ವಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಬಗೆಗೆ ಸೃಜನಶೀಲ ಅನ್ವೇಷಣೆಯು ಬಹುಮುಖ್ಯ ಎಂದರು.
ಆಗಿಂದಾಗ್ಗೆ ಅಧ್ಯಾಪಕವೃಂದವು ವಿದ್ಯಾರ್ಥಿಗಳನ್ನು ತಮ್ಮ ಸುತ್ತಮುತ್ತಲಿರುವ ವೈವಿಧ್ಯತೆಯುಳ್ಳ ಕಾರ್ಖಾನೆಗಳ ಕೆಲಸ ಮಾಡುವ ಪರಿಗಳನ್ನು ಅರ್ಥೈಸಿಕೊಳ್ಳುವಲ್ಲಿ ಇಂಡಸ್ಟ್ರಿಯಲ್ ವಿಸಿಟ್ ಕಾರ್ಯಕ್ರಮ, ವಿದ್ಯಾರ್ಥಿ ವಿಕಸನ ಶಿಬಿರ ಮುಂತಾದ ಬಗೆಯ ಕಾರ್ಯಕ್ರಮಗಳನ್ನು ನಡೆಸುವಂತೆ ಪ್ರೇರಣಪೂರ್ವಕ ಅಭಿಪ್ರಾಯವನ್ನು ಪ್ರಖರವಾಗಿ ಮಂಡಿಸಿದರು.
ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲ ಡಾ. ಸ್ವಾಮಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ವಿದ್ಯಾರ್ಥಿಗಳು ಕಲಿಕಾ ಮನೋಭಾವವನ್ನು ಯಾವುದೇ ಸಂದರ್ಭದಲ್ಲೂ ಕಡಿಮೆಗೊಳಿಸದೆ ತಮ್ಮ ದೈನಂದಿನ ಶೈಕ್ಷಣಿಕ ಜೀವನದಲ್ಲಿ ಔದ್ಯೋಗಿಕ ಕ್ಷೇತ್ರವು ಅಭ್ಯಾಸಿಸುತ್ತಿರುವ ಅನೇಕ ಬಗೆಗಿನ ಪ್ರಾಯೋಗಿಕ ವಿಚಾರಗಳ ವಿಶ್ಲೇಷಣಾತ್ಮಕ ಅಳವಡಿಕೆ ಹಾಗೂ ಪ್ರಸ್ತುತತೆಯನ್ನು ವೈಚಾರಿಕ ದೃಷ್ಟಿಕೋನದಿಂದ ಅರ್ಥೈಸಿಕೊಳ್ಳುವಲ್ಲಿ ಸದಾ ಪ್ರಯತ್ನಪೂರ್ವಕರಾಗಿರಬೇಕೆಂದು ಹಲವು ಪ್ರಾಯೋಗಿಕ ಉದಾಹರಣೆಗಳ ಸಮೇತ ಸಭಿಕರ ಮನಮುಟ್ಟುವಂತೆ ತಿಳಿಸಿದರು.
ಕಾಲಘಟ್ಟದಲ್ಲಿ ಹಲವು ಬಗೆಗಿನ ಹೊಸ ಹೊಸ ವಿಚಾರಗಳ ಅರ್ಥಮಾಡಿಕೊಳ್ಳುವಿಕೆ, ಸಾಮಾಜಿಕ ಮಟ್ಟದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವುದರ ಬಗ್ಗೆ ವಿದ್ಯಾರ್ಥಿಗಳ ಜೊತೆಗೂಡಿ ಅಧ್ಯಾಪಕರು ಸಹ ತಮ್ಮ ಕಲಿಕಾ ಮನೋ ಲಹರಿಯನ್ನು ಸದಾಕಾಲ ವೃದ್ಧಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಸೂಚ್ಯವಾಗಿ ನುಡಿದರು. ಸಾಮಾಜಿಕ ಹಾಗೂ ಔದ್ಯೋಗಿಕ ಕ್ಷೇತ್ರವು ತಂದೊಡ್ಡುವ ಹಲವು ಬಗೆಯ ಸವಾಲುಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಅಧ್ಯಾಪಕ ವೃಂದವು ಮುಂಚಿತವಾಗಿ ಅದರ ಬಗೆಗಿನ ಆಮೂಲಾಗ್ರ ಮಾಹಿತಿಯನ್ನು ಹೊಂದಿರುವಂತೆ ಪ್ರೇರಣಾತ್ಮಕ ನುಡಿಗಳನ್ನು ನುಡಿದರು.
ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ಗಿರೀಶ ಸ್ವಾಗತಿಸಿದರು. ವಿಭಾಗದ ಬೋಧಕ ಸಿಬ್ಬಂದಿ ಪ್ರಸನ್ನ ನಾಯಕ್ ವಂದಿಸಿದರು. ಐದು ದಿನಗಳ ಅಧ್ಯಾಪಕ ಅಭಿವೃದ್ಧಿ ವಿಕಸನ ಶಿಬಿರದ ಪ್ರಸ್ತುತತೆ ಹಾಗೂ ಉದ್ದೇಶಗಳ ಪಕ್ಷಿ ನೋಟ ವಿವರಣೆಯನ್ನು ಮೆಕಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ ಅಶೋಕ್ ಆರ್ ಬಣಗಾರ್ ನೀಡಿದರು. ಉದ್ಘಾಟನಾ ಸಮಾರಂಭವು ಸುಲಲಿತವಾಗಿ ಜರುಗುವಲ್ಲಿ ಮುಖ್ಯ ಸಂಚಾಲಕರಾದ ಡಾ. ಅಶೋಕ್ ಆರ್ ಬಣಗರ್ ಮತ್ತು ಮುಜೀಬೂರ್ ರೆಹಮಾನ್, ಅಧ್ಯಾಪಕ ಸಿಬ್ಬಂದಿ ಮೆಕಾನಿಕಲ್ ವಿಭಾಗ ಇವರುಗಳ ಯಶಸ್ವಿ ಪ್ರಯತ್ನವೂ ಸಹ ಅಡಗಿದೆ. ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ವಿವಿಧ ಕಾಲೇಜುಗಳ ಮೆಕಾನಿಕಲ್ ವಿಭಾಗದ ಅಧ್ಯಾಪಕ ವೃಂದ, ಪಿಇಎಸ್ಐಟಿಎಂನ ವಿವಿಧ ವಿಭಾಗಗಳ ಮುಖ್ಯಸ್ಥರು, ಮೆಕ್ಯಾನಿಕಲ್ ವಿಭಾಗದ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post