ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲೆಯಲ್ಲಿ ಕೋವಿಡ್-19 ಕ್ರೂರ ಸನ್ನಿವೇಶಗಳನ್ನ ಸೃಷ್ಟಿಸಿದೆ. ಮಾರಕ ವೈರಸ್‌ನಿಂದ ಜನರು ತೀವ್ರ ಸಂಕಷ್ಡ ಎದುರಿಸುತ್ತಿದ್ದಾರೆ. ದುರಾದೃಷ್ಟದ ಸಂಗತಿ ಎಂದರೆ, ಜನರ ಕಷ್ಟದ ಮೇಲೆ ಖಾಸಗಿ ಆಸ್ಪತ್ರೆಗಳು ಬರೆ ಹಾಕುತ್ತಿವೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ದೂರಿದ್ಧಾರೆ.
ಕೋವಿಡ್ ರೋಗಿಗಳನ್ನು ತಕ್ಷಣವೇ ದಾಖಲಾತಿ ಮಾಡಿಕೊಳ್ಳುವ ಬದಲು, ಸೋಂಕಿತರ ಉಸಿರಾಟ ಯಾವ ಪ್ರಮಾಣದಲ್ಲಿದೆ, ಅವರ ಆಕ್ಸಿಜನ್ ಲೆವೆಲ್ ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುವುದರಲ್ಲಿಯೆ ಕಾಲ ತಳ್ಳುತ್ತಿದ್ದಾರೆ. ಉಸಿರಾಡಲು ಪರದಾಡುವ ರೋಗಿಗಳನ್ನು ತಕ್ಷಣವೇ ದಾಖಲಾತಿ ಮಾಡಿಕೊಂಡು ಚಿಕಿತ್ಸೆ ನೀಡುವುದು ವೈದ್ಯಕೀಯ ವ್ಯವಸ್ಥೆಯ ಧರ್ಮವಾಗಿದೆ. ಆದರೆ ಖಾಸಗಿ ಆಸ್ಪತ್ರೆಗಳು ನಡೆದುಕೊಳ್ಳುತ್ತಿರುವ ರೀತಿ ಅಮಾನವೀಯವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರೋಗಿಯ ಉಸಿರಾಟದ ಪ್ರಮಾಣ ಎಷ್ಟಿದೆ, ಪರಿಸ್ಥಿತಿ ಹೇಗಿದೆ? ಎಂಬಿತ್ಯಾದಿ ವಿವರಗಳನ್ನು ಜನ ಸಾಮಾನ್ಯರು ಮನೆಯಲ್ಲಿ ನೋಡಿಕೊಳ್ಳಲು ಸಾದ್ಯವೇ? ಅಥವಾ ಆರೊಗ್ಯ ಹದಗೆಟ್ಟಿರುವ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಪ್ರಯತ್ನ ಮಾಡುವುದು ಮುಖ್ಯವೇ? ಅಥವಾ ರೋಗಿಯ ವಿವರಗಳನ್ನು ಕಲೆ ಹಾಕಿ ವೈದ್ಯರಿಗೆ ತಿಳಿಹೇಳುವುದು ಮುಖ್ಯವೊ? ಎನ್ನುವುದನ್ನ ಖಾಸಗಿ ಆಸ್ಪತ್ರೆಗಳೇ ಉತ್ತರಿಸಬೇಕಿದೆ ಎಂದು ಹೇಳಿದ್ದಾರೆ.
ಪ್ರಶ್ನೆಗಳನ್ನು ಕೇಳುತ್ತಾ ಕಾಲಹರಣ ಮಾಡುವಷ್ಟರಲ್ಲಿ ರೋಗಿಯೊಬ್ಬರು ಸಾವನ್ನಪ್ಪಿದರೆ ಅದಕ್ಕೆ ಯಾರು ಹೊಣೆಯಾಗುತ್ತಾರೆ?. ಒಂದು ಕಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ತಕ್ಷಣಕ್ಕೆ ಬೆಡ್ ಸಿಗುತ್ತಿಲ್ಲ. ಒಂದು ಬೆಡ್‌ಗಾಗಿ ಸಿಕ್ಕಸಿಕ್ಕವರಿಗೆಲ್ಲಾ ಜನರು ಫೋನ್ ಹಾಯಿಸಿ ಕಾಡಿ ಬೇಡಿ ಸೋಂಕಿತರಿಗೆ ಚಿಕಿತ್ಸೆ ಕೊಡಿಸಬೇಕಾದ ಅನಿವಾರ್ಯತೆಯಿದೆ. ಸಾಲದ್ದಕ್ಕೆ ಗೊತ್ತಿಲ್ಲದೆ ರೋಗಿಯ ಜೀವ ಉಳಿಸಿಕೊಳ್ಳಲು ಬರುವ ಸೋಂಕಿತರಿಗೆ ಬೆಡ್ ಇಲ್ಲವೆಂದು ಹೇಳಿ ವಾಪಸ್ ಕಳಿಸುವುದು ಧರ್ಮವು ಅಲ್ಲ, ನ್ಯಾಯವೂ ಅಲ್ಲ. ಇನ್ನೂ ಆಕ್ಸಿಜನ್ ಬೆಡ್‌ಗಳಿಗಾಗಿ ಮೆಗ್ಗಾನ್ ಆಸ್ಪತ್ರೆ ಎದುರು ಸಾಲು-ಸಾಲಾಗಿ ನಿಲ್ಲುತ್ತಿರುವ ಆಂಬ್ಯುಲೆನ್ಸ್‌ಗಳು ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸುತ್ತಿದೆ ಎಂದಿದ್ದಾರೆ.
ವಿವಿಐಪಿಗಳಿಗೆ ತತಕ್ಷಣವೇ ಸಿಗಬಹುದಾದ ಚಿಕಿತ್ಸೆಯು, ಜನಸಾಮಾನ್ಯರಿಗೂ ಒದಗಿಸಿಕೊಡುವುದು ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಜವಾಬ್ದಾರಿಯಾಗಿದ್ದು, ಜಿಲ್ಲೆಯ ಜನರ ಒಟ್ಟಾರೆ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post