ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ತ್ರೀ ಸಬಲೀಕರಣಕ್ಕೆ ದಾರಿಯಾಗಬಹುದಾದ ಸಿರಿಧಾನ್ಯಗಳ ಮಹತ್ವದೊಂದಿಗೆ ರಾಗಿ ಬಿಸ್ಕೆಟ್ #Ragi biscuits ತಯಾರಿಕೆಯ ಕುರಿತಾಗಿ ಗ್ರಾಮೀಣ ಮಹಿಳೆಯರಿಗೆ ಕೃಷಿ ವಿವಿ ವಿದ್ಯಾರ್ಥಿಗಳು ತಿಳಿಸಿಕೊಟ್ಟರು.
ಕಲ್ಮನೆ ಗ್ರಾಮದ ಕೃಷಿ ಮಾಹಿತಿ ಕೇಂದ್ರದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, #Keladi Shivappanayaka VV ಇರುವಕ್ಕಿ ಶಿವಮೊಗ್ಗದ ಬಿಎಸ್ಸಿ (ಹಾನರ್ಸ್) ಕೃಷಿ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ರಾಗಿ ಬಿಸ್ಕಟ್ ತಯಾರಿಕೆ ಮತ್ತು ಅದರ ಪೌಷ್ಟಿಕ ಮಹತ್ವ’ ಎಂಬ ವಿಷಯದ ಕುರಿತು ಗುಂಪು ಚರ್ಚೆ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಹಾರ ಮತ್ತು ಪೋಷಣೆ ವಿಭಾಗದ ಡಾ.ಶೃತಿ ನಾಯಕ ಮಾತನಾಡಿ, ಪೌಷ್ಟಿಕಾಂಶಗಳ ಮಹತ್ವವನ್ನು ಸರಳವಾಗಿ, ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸುವ ತನ್ನ ವಿಶಿಷ್ಟ ಶೈಲಿಯಿಂದ ಗ್ರಾಮೀಣ ಮಹಿಳೆಯರ ಮನಸ್ಸಿನಲ್ಲಿ ಅರಿವಿನ ಬೆಳಕು ಮೂಡಿಸಿದರು.
ರಾಗಿಯಲ್ಲಿರುವ ಕ್ಯಾಲ್ಸಿಯಂ, ಐರನ್, ನಾರಿನಾಂಶ, ಖನಿಜಾಂಶ, ಅಮಿನೋ ಆಸಿಡ್’ಗಳು, ಮತ್ತು ಇತರೆ ಮೈಕ್ರೋ ನ್ಯುಟ್ರಿಯೆಂಟ್ಸ್’ಗಳು ಮಕ್ಕಳ ದೈಹಿಕ ಬೆಳವಣಿಗೆ, ಮಹಿಳೆಯರ ಆರೋಗ್ಯ, ಗರ್ಭಿಣಿ ಸ್ತ್ರೀಯರ ಪೌಷ್ಟಿಕತೆ ಮತ್ತು ರಕ್ತಹೀನತೆಗೆ ನೀಡುವ ಪರಿಹಾರಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಿದರು.
ರಾಗಿ ಮಿಲ್ಲೇಟ್’ಗಳ ಬಳಕೆ ಕೇವಲ ಆರೋಗ್ಯಕ್ಕಷ್ಟೇ ಅಲ್ಲ; ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಮುನ್ನಡೆಯ ಹೆಜ್ಜೆಯಾಗಬಹುದು ಎಂಬ ಸಂದೇಶವನ್ನು ಅವರು ಒತ್ತಿ ಹೇಳಿದರು.
ಮನೆಮಟ್ಟದಲ್ಲಿ ರಾಗಿ ಬಿಸ್ಕೆಟ್’ಗಳನ್ನು ತಯಾರಿಸುವುದು ಎಷ್ಟು ಸುಲಭ ಮತ್ತು ಕಡಿಮೆ ವೆಚ್ಚದ ಕೆಲಸ ಎಂಬುದನ್ನೂ, ಅದನ್ನು ಸಣ್ಣ ಉದ್ಯಮವಾಗಿ ಬೆಳೆಸಿಕೊಂಡರೆ ಮಹಿಳೆಯರಿಗೆ ಆದಾಯದ ಮೂಲವಾಗಬಹುದು ಎಂಬುದನ್ನೂ ಅವರು ವಿವರಿಸಿ, ರಾಗಿ ಹಾಗೂ ಇತರೆ ಸಿರಿಧಾನ್ಯಗಳ ಮಹತ್ವವನ್ನು ಕೂಡ ವಿವರಿಸಿ ಮಾತನಾಡಿದರು.
ತೋಟಗಾರಿಕಾ ವಿಭಾಗದ ಡಾ. ಅರ್ಚನಾ ಅವರು ಮಾತನಾಡಿ, ತೋಟಗಾರಿಕಾ ಸಿರಿಧಾನ್ಯ ಬೆಳೆಗಾರಿಕಾ ಹಿನ್ನೆಲೆ ಹಾಗೂ ಮಾರುಕಟ್ಟೆ ಬೇಡಿಕೆಯ ಬಗ್ಗೆ ಮಾಹಿತಿ ನೀಡಿ ಮಹಿಳೆಯರಿಗೆ ಪ್ರೋತ್ಸಾಹ ನೀಡಿದರು.
ನಂತರ ವಿದ್ಯಾರ್ಥಿಗಳು ರಾಗಿ ಬಳಸಿ ಸರಳ ವಿಧಾನದಲ್ಲಿ ರಾಗಿ ಬಿಸ್ಕಟ್ ತಯಾರಿಸುವ ಪ್ರಾತ್ಯಕ್ಷಿಕೆ ನೀಡಿದರು.
ಸಾಮಾನ್ಯ ಮನೆ ಬಳಕೆಯ ಪದಾರ್ಥಗಳಿಂದ, ಕಡಿಮೆ ವೆಚ್ಚದಲ್ಲಿ, ಪೌಷ್ಟಿಕತೆಯಿಂದ ಸಮೃದ್ಧವಾಗಿರುವ ಬಿಸ್ಕಟ್’ಗಳನ್ನು ತಯಾರಿಸುವ ವಿಧಾನವನ್ನು ವಿವರಿಸಿದರು. ಗ್ರಾಮೀಣ ಮಹಿಳೆಯರಲ್ಲಿ ಉದ್ಯಮಶೀಲತೆ ಬೆಳೆಸುವ ಉದ್ದೇಶದಿಂದ ರಾಗಿ ಮೌಲ್ಯವರ್ಧಿತ ಉತ್ಪನ್ನಗಳ ಉದ್ಯಮದ ಅವಕಾಶಗಳು ಕುರಿತು ವಿದ್ಯಾರ್ಥಿಗಳು ಸಮಗ್ರ ಮಾಹಿತಿಯನ್ನು ಹಂಚಿಕೊಂಡರು.
ಮಹಿಳೆಯರು ಇಂತಹ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಗ್ರಾಮೀಣ ಮಹಿಳೆಯರ ಜೀವನ ಮಟ್ಟವನ್ನು ಏರಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಶೈಲಜಾ ಮತ್ತು ನಿರಂಜನ್ ಸೇವಾ ಪ್ರತಿನಿಧಿಗಳು ಮಹಿಳೆಯರು ಸ್ವಯಂ ಉದ್ಯೋಗಕ್ಕೆ ಮುನ್ನಡೆಯುವಂತೆ ಪ್ರೋತ್ಸಾಹಿಸಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮಸ್ಥ ಮಹಿಳೆಯರು ರಾಗಿ ಬಿಸ್ಕಟ್ ತಯಾರಿಕೆ ಕಲಿತು ಸಂತೋಷ ವ್ಯಕ್ತಪಡಿಸಿದರು.
ಮಹಿಳೆಯರು ರಾಗಿ ಉತ್ಪನ್ನಗಳನ್ನು ತಯಾರಿಸಿ ಮನೆಮಾತಾಗಿ, ನಂತರ ಸ್ವಯಂ ಉದ್ಯೋಗ ರೂಪಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಅವಕಾಶವಿದೆ ಎಂದರು.
ಸೇವಾ ಪ್ರತಿನಿಧಿ ಶೈಲಜಾ, ತಾಲೂಕಿನ ಸಮನ್ವಯಾಧಿಕಾರಿ ಮೀನಾಕ್ಷಿ, ಸೇವಾ ಪ್ರತಿನಿಧಿ ನಿರಂಜನ್ ಹಾಗೂ ಗ್ರಾಮಸ್ಥ ಮಹಿಳೆಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















