ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಧುನಿಕ ಭಾರತದ ಪಿತಾಮಹ ರಾಜಾ ರಾಮ್ ಮೋಹನ್ ರಾಯ್ ಅವರ 250 ನೇ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ಇಂದು ನಗರ ಕೇಂದ್ರ ಗ್ರಂಥಾಲಯ ಆವರಣದಿಂದ ಏರ್ಪಡಿಸಲಾಗಿದ್ದ ‘ಮಹಿಳಾ ಸಬಲೀಕರಣ’ ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಪಾಲಿಕೆ ಮೇಯರ್ ಶಿವಕುಮಾರ್ ಮತ್ತು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು, ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯ, ಶಿವಮೊಗ್ಗ, ರಾಜಾ ರಾಮ್‍ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಟಾನ, ಕೋಲ್ಕತ್ತಾ ಇವರ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಲ್ಲಾಧಿಕಾರಿಗಳು ಮಾತನಾಡಿ, ರಾಜಾ ರಾಮ್ ಮೋಹನ್ ರಾಯ್‍ರವರು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಸತಿ ಸಹಗಮನ ಪದ್ದತಿ, ಬಾಲ್ಯ ವಿವಾಹ ಸೇರಿದಂತೆ ಮಹಿಳೆಯರನ್ನು ಧಮನಿಸುವ ಪದ್ದತಿಗಳನ್ನು ತೀವ್ರವಾಗಿ ವಿರೋಧಿಸಿ, ಮಹಿಳಾ ಶಿಕ್ಷಣ ಮತ್ತು ಸಬಲೀಕರಣವನ್ನು ಪ್ರತಿಪಾದಿಸಿದ್ದರು ಎಂದು ತಿಳಿಸಿದರು.

ಇಂದು ಜಾಥಾದಲ್ಲಿ ಪಾಲ್ಗೊಂಡ ಮಕ್ಕಳೆಲ್ಲ ಗ್ರಂಥಾಲಯವನ್ನು ವೀಕ್ಷಣೆ ಮಾಡಬೇಕು. ಪುಸ್ತಕಗಳನ್ನು ಓದಬೇಕೆಂದು ತಿಳಿಸಿ, ಜಾಥಾದಲ್ಲಿ ಪಾಲ್ಗೊಂಡ ಸುಮಾರು 250 ಮಕ್ಕಳಿಗೆ ಗ್ರಂಥಾಲಯದ ಸದ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಿದರು.
ಇದೇ ವೇಳೆ ಮೇಯರ್ ಶಿವಕುಮಾರ್ ಮತ್ತು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಅವರು ನ.14ರಿಂದ ಆರಂಭವಾಗಿರುವ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್‍ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಗ್ರಂಥಾಲಯಾಧಿಕಾರಿ(ಪ್ರ) ಹರೀಶ್.ಎಂ.ಆರ್, ಉಪನಿರ್ದೇಶಕ ತಿಪ್ಪೇಸ್ವಾಮಿ ಪಿ ಆರ್, ನಿವೃತ್ತ ಮುಖ್ಯ ಗ್ರಂಥಾಲಯಾಧಿಕಾರಿ ಚಂದ್ರೇಗೌಡ ಬಿ, ಇತರೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.












Discussion about this post