ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಿಂದ ಹಾನಗಲ್ ಗೆ ಹೋಗುವ ರಾಜ್ಯ ಹೆದ್ದಾರಿ 57ರಲ್ಲಿ ಅನಧಿಕೃತವಾಗಿ ಅಳವಡಿಸಿದ ಎರಡು ಟೋಲ್‍ಗೇಟ್‍ಗಳನ್ನು ತೆರವುಗೊಳಿಸುವಂತೆ ಶಿಕಾರಿಪುರದ ಟೋಲ್‍ಗೇಟ್ ವಿರೋಧಿ ಹೋರಾಟ ಸಮಿತಿ ಲೋಕೋಪಯೋಗಿ ಸಚಿವರಿಗೆ ಒತ್ತಾಯಿಸಿದೆ.
ರಾಜ್ಯ ಸರ್ಕಾರ 2022ರಲ್ಲಿ ಶಿವಮೊಗ್ಗದಿಂದ ಹಾನಗಲ್‍ಗೆ ಹೋಗುವ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಲ್ಲಾಪುರ ಮತ್ತು ಶಿಕಾರಿಪುರ ತಾಲೂಕಿನ ಕುಟ್ರಳ್ಳಿ ಬಳಿ ನಿಯಮಬಾಹಿರವಾಗಿ ಟೋಲ್‍ಗೇಟ್‍ಗಳನ್ನು ಅಳವಡಿಸಿ ಶುಲ್ಕ ಸಂಗ್ರಹಣೆ ಮಾಡುತ್ತಿರುವುದರ ಕುರಿತು ಹಲವಾರು ಹೋರಾಟಗಳನ್ನು ಮಾಡಿ ಸರ್ಕಾರದ ಗಮನಸೆಳೆದರೂ ಸಹ ಟೋಲ್‍ಗೇಟ್‍ಗಳನ್ನು ಇದುವರೆಗೂ ತೆರವುಗೊಳಿಸಿಲ್ಲ ಎಂದು ಇಂದು ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಹಾಗೂ ವಕೀಲ ಶಿವರಾಜ್ ಜಿ.ಪಿ. ಆರೋಪಿಸಿದರು.
ಸದರಿ ಟೋಲ್‍ಗೇಟ್‍ನಿಂದ ಶಿಕಾರಿಪುರ, ಸೊರಬ, ಶಿವಮೊಗ್ಗ ಗ್ರಾಮಾಂತರ ಮತ್ತು ನ್ಯಾಮತಿ, ಹೊನ್ನಾಳಿ ತಾಲೂಕಿನ ಜನರು ತೀವ್ರ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ. ಬಡ ಮಧ್ಯಮವರ್ಗದ ಬಾಡಿಗೆ ವಾಹನದಾರರಿಗೆ ಮತ್ತು ಈ 5 ತಾಲೂಕಿನ ರೈತರಿಗೂ ಸಹ ಆರ್ಥಿಕ ಹೊರೆಯಾಗುತ್ತಿದೆ. ಟೋಲ್‍ಗೇಟ್‍ನಿಂದ ಹಣ ಸಂಗ್ರಹಣೆಯಿಂದಾಗಿ ಈಗಾಗಲೇ ಖಾಸಗಿ ಬಸ್ ಮಾಲೀಕರು ಸಹ ಬಸ್ ದರವನ್ನು ಏರಿಕೆ ಮಾಡಿದ್ದು ಇದರಿಂದ ಪ್ರಯಾಣಿಕರಿಗೆ ಆರ್ಥಿಕ ಹೊರೆಯಾಗಿದೆ ಎಂದರು.
ನಮ್ಮ ಹೋರಾಟದ ಬಳಿಕ ಎರಡು ಬಾರಿ ವಿಧಾನಸಭಾ ಅಧಿವೇಶನ ನಡೆದರೂ ನಮ್ಮ ಶಾಸಕರು ಯಾರೂ ಕೂಡ ಪ್ರಸ್ತಾಪಿಸಿಲ್ಲ. ಅ. 3ರಂದು ಟೋಲ್‍ಗೇಟ್ ವಿರೋಧಿಸಿ 2 ಸಾವಿರಕ್ಕೂ ಹೆಚ್ಚು ಜನ ಪ್ರತಿಭಟನೆ ಮಾಡಿದ್ದರು. ಆ ಸಂದರ್ಭದಲ್ಲಿ ಟೋಲ್ ಅನ್ನು ರದ್ದುಪಡಿಸುವ ಭರವಸೆ ನೀಡಲಾಗಿತ್ತು. ನಂತರ ಜಿಲ್ಲಾಧಿಕಾರಿಗಳು ಅದು ನನ್ನ ವ್ಯಾಪ್ತಿಯಲ್ಲಿ ಬರಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅವೈಜ್ಞಾನಿಕ ಟೋಲ್ ಗೇಟ್ ನಲ್ಲಿ ತಕ್ಷಣ ಟೋಲ್ ಸಂಗ್ರಹ ನಿಲ್ಲಿಸಬೇಕು. ನಾವು ಈಗಾಗಲೇ ಜಿಲ್ಲಾಧಿಕಾರಿ ಮತ್ತು ಸಾಗರ ಉಪ ವಿಭಾಗಾಧಿಕಾರಿಗಳಿಗೆ ಮನವಿ ನೀಡಿದ್ದರೂ ಅವರಿಂದ ನಮಗೆ ಹಿಂಬರಹವಾಗಲೀ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದರು.
ಆಗಸ್ಟ್ 11ರಿಂದ ಆರಂಭವಾಗುವ ಅಧಿವೇಶನದಲ್ಲಿ ಈ ಬಗ್ಗೆ ಜನಪ್ರತಿನಿಧಿಗಳು ಪ್ರಸ್ತಾಪ ಮಾಡಿ ಈ ಟೋಲ್‍ಗೇಟ್ ಅನ್ನು ತೆರವುಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಇದಕ್ಕೆ ಅವಕಾಶ ನೀಡಬಾರದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸಂಚಾಲಕ ಹಾಗೂ ವಕೀಲ ವಿನಯ್ ಪಾಟೀಲ್, ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ಪುಟ್ಟಣ್ಣ ಬಳ್ಳಿಗಾವಿ, ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ, ಪ್ರಮುಖರಾದ ಚಂದ್ರಣ್ಣ ನಂದಿಹಳ್ಳಿ, ಈರಣ್ಣ ಪ್ಯಾಟಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post