ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಬಿ.ಎಸ್ಸಿ. ಅರಣ್ಯ ಶಾಸ್ತ್ರ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡುವ ಕುರಿತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಚಿವ ಮಧು ಬಂಗಾರಪ್ಪ #Minister Madhu Bangarappa ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ #MLA Beluru Gopalakrishna ಅವರಿಗೆ ಕರ್ನಾಟಕ ಅರಣ್ಯ ವಿದ್ಯಾರ್ಥಿಗಳ ಪದವೀಧರರ ಸಂಘದಿಂದ ಮನವಿ ಸಲ್ಲಿಸಲಾಯಿತು.
ವೃತ್ತಿಪರ(ಅರಣ್ಯಶಾಸ್ತ್ರ) ಪದವೀಧರರ ಸಾಮಥ್ರ್ಯ ಮತ್ತು ಅಗತ್ಯವನ್ನು ಅರಿತುಕೊಂಡ ಕರ್ನಾಟಕ ಸರ್ಕಾರವು 2003 ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿ ಹುದ್ದೆಗೆ ಶೇಕಡ 50 ರಷ್ಟು ಮೀಸಲಾತಿಯನ್ನು ಒದಗಿಸಿದ ನಂತರ 2012 ರಲ್ಲಿ ವಲಯ ಅರಣ್ಯಾಧಿಕಾರಿ ಹುದ್ದೆಗೆ ಶೇಕಡ 75 ರಷ್ಟು ಹೆಚ್ಚಿಸಲಾಯಿತು ಎಂದು ತಿಳಿಸಿದ್ದಾರೆ.
“ಅರಣ್ಯ ಇಲಾಖೆಯಲ್ಲಿ #Forest Department ವಿವಿಧ ಹುದ್ದೆಗಳಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಬಿ.ಎಸ್ಸಿ ಅರಣ್ಯಶಾಸ್ತ್ರ ಪದವೀಧರರನ್ನೇ ನೇರ ನೇಮಕಾತಿ ಮಾಡುವುದರ ಮೂಲಕ ಅರಣ್ಯಶಾಸ್ತ್ರದಲ್ಲಿ ವಿಷೇಶ ಪರಿಣಿತಿಹೊಂದಿರುವ ಪದವೀಧರರ ಜ್ಞಾನ ಮತ್ತು ಅನುಭವವನ್ನು ರಚನಾತ್ಮಕವಾಗಿ ಬಳಸಿಕೊಳ್ಳಲು ಆಗ್ರಹಿಸಿದರು.
ಅರಣ್ಯಶಾಸ್ತ್ರ ಸೇರುವವರು ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು, ಕರ್ನಾಟಕ ಪರೀಕ್ಷಾ ಪ್ರಾಧೀಕಾರ ನಡೆಸುವ ಸಿ.ಇ.ಟಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಬಂದಿರುತ್ತಾರೆ. ವರ್ಷದಿಂದ ವರ್ಷಕ್ಕೆ ಈ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿ ಪಡೆದ ವಿದ್ಯಾರ್ಥಿಗಳು ಬಿ.ಎಸ್ಸಿ (ಅರಣ್ಯಶಾಸ್ತ್ರ) ಪದವಿಯನ್ನೇ ಬೇರೆ ವಿಷಯಗಳಿಗಿಂತ ಹೆಚ್ಚು ಆಸಕ್ತಿಯಿಂದ ಆಯ್ಕೆ ಮಾಡಿಕೊಳ್ಳುತ್ತಿರುವುದು, ಪ್ರತಿಭಾವಂತ ವಿದ್ಯಾರ್ಥಿಗಳೇ ಈ ಕ್ಷೇತ್ರಕ್ಕೆ ಬರುತ್ತಿರುವುದು ಈ ಪದವಿಯ ವ್ಯಾಸಂಗದ ಮಹತ್ವವನ್ನು ಸೂಚಿಸುತ್ತದೆ. ಅರಣ್ಯಾಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಸದರಿ ಬಿ.ಎಸ್ಸಿ (ಅರಣ್ಯಶಾಸ್ತ್ರ) ಪದವೀಧರರಿಗೆ ಮೊದಲು ನೀಡಿದ್ದ ಶೇ.75 ರಷ್ಟು ಮೀಸಲಾತಿಯನ್ನು ಶೇ.50ಕ್ಕೆ ಕಡಿತಗೊಳಿಸಿರುವುದು ಅನ್ಯಾಯದ ಸಂಗತಿ ಹಾಗೂ ಇದರಿಂದ ಅರಣ್ಯ ನಿರ್ವಹಣೆಗೆ ಬೇಕಾದ ತಾಂತ್ರಿಕ ಪರಿಣಿತಿ ಕ್ಷೀಣಗೊಳ್ಳಲಿದೆ ಎಂದರು.
ಅರಣ್ಯಶಾಸ್ತ್ರವು ಒಂದು ವಿಶೇಷ ಕ್ಷೇತ್ರವಾಗಿದ್ದು, ಅರಣ್ಯ ಪರಿಸರಶಾಸ್ತ್ರ, ಜೀವವೈವಿಧ್ಯ ಸಂರಕ್ಷಣೆ, ವೃಕ್ಷಶಾಸ್ತ್ರ ವಿಧಾನಗಳು, ವನ್ಯಜೀವಿ ನಿರ್ವಹಣೆ, ಹವಾಮಾನ ಬದಲಾವಣೆ ತಡೆಗೆ ಅರಣ್ಯ ನಿರ್ವಹಣೆ, ಅರಣ್ಯ ಸಂಪತ್ತು ಬಳಕೆ ಹಾಗೂ ಸಾಮಾಜಿಕ ಅರಣ್ಯ ನಿರ್ವಹಣೆ ಮುಂತಾದ ವಿವಿಧ ಕರ್ತವ್ಯಗಳನ್ನು ಒಳಗೊಂಡಿರುತ್ತದೆ. ಈ ವಿಭಾಗದ ಜಟಿಲತೆಯನ್ನು ಸಮರ್ಥವಾಗಿ ನಿರ್ವಹಿಸಲು ನಿರ್ದಿಷ್ಟ ಅರಣ್ಯ ಶಿಕ್ಷಣ ಮತ್ತು ತರಬೇತಿ ಹೊಂದಿರುವ ಅಭ್ಯರ್ಥಿಗಳೇ ಅಗತ್ಯ ಹಾಗೂ ರಾಷ್ಟ್ರೀಯ ಅರಣ್ಯ ನೀತಿ (1988) ಕೂಡ ಇದನ್ನು ಶಿಫಾರಸ್ಸು ಮಾಡುತ್ತದೆ ಎಂದರು.
ಕರ್ನಾಟಕ ಸರ್ಕಾರ ಕೃಷಿ ವಿಶ್ವವಿದ್ಯಾಲಯಗಳ ಕೃಷಿ ಮತ್ತು ಸಂಬಂಧಿತ ವಿಜ್ಞಾನಗಳಿಂದ ಪದವಿ ಪಡೆದವರಿಗೆ ಅವರ ಶೈಕ್ಷಣಿಕ ಅರ್ಹತೆಗೆ ನೇರವಾಗಿ ಸಂಬಂಧಿಸಿದ ಇಲಾಖೆಗಳಲ್ಲಿ ನೇರ ನೇಮಕಾತಿಯಲ್ಲಿ ಶೇ. 100 ರಷ್ಟು ಮೀಸಲಾತಿಯನ್ನು ಆಯಾ ಇಲಾಖೆಗಳಲ್ಲಿ ವೃತ್ತಿಪರತೆಯನ್ನು ಹೆಚ್ಚಿಸಲು ಒದಗಿಸಿದೆ. ಉದಾಹರಣೆಗೆ ಸಹಾಯ ಕೃಷಿ ಅಧಿಕಾರಿ (ಬಿ.ಎಸ್ಸ್ಸಿ. ಕೃಷಿ), ಸಹಾಯಕ ತೋಟಗಾರಿಕಾ ಅಧಿಕಾರಿ (ಬಿ.ಎಸ್ಸ್ಸಿ. ತೋಟಗಾರಿಕೆ), ಪಶುವೈದ್ಯ ಅಧಿಕಾರಿ (ಬಿ.ವಿ.ಎಸ್ಸ್ಸಿ) ಹಾಗೂ ಸಹಾಯ ರೇಷ್ಮೆ ಅಧಿಕಾರಿ (ಬಿ.ಎಸ್ಸ್ಸಿ. ರೇಷ್ಮೆ) ಇದೇ ನಿಟ್ಟಿನಲ್ಲಿ ಅರಣ್ಯ ಪದವೀಧರರ ಅವಶ್ಯಕತೆ ಮತ್ತು ಉಪಯುಕ್ತತೆಯನ್ನು ಗುರುತಿಸಿ ತಮಿಳುನಾಡು, ತೆಲಂಗಾಣ, ಕೇರಳ, ಒರಿಸ್ಸಾ, ಜಮ್ಮು ಮತ್ತು ಕಾಶ್ಮೀರ ಹಾಗೂ ಜಾರ್ಕಂಡ್ ನಂತಹ ಇತರೆ ರಾಜ್ಯಗಳು ಸಹ ತಮ್ಮ ಅರಣ್ಯ ಇಲಾಖೆಗಳಲ್ಲಿ ಮೀಸಲಾತಿಯನ್ನು ಒದಗಿಸಿದೆ ಎಂದರು.
ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ, ಸದರಿ ಅರಣ್ಯ ಪದವೀಧರ ವಿದ್ಯಾರ್ಥಿಗಳ ವೃತ್ತಿ ಜೀವನದ ಹಿತದೃಷ್ಟಿಯಿಂದ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಗಳಲ್ಲಿ ಬಿ.ಎಸ್ಸಿ (ಅರಣ್ಯಶಾಸ್ತ್ರ)ವನ್ನು ಕನಿಷ್ಟ ವಿದ್ಯಾರ್ಹತೆಯನ್ನಾಗಿ ಮಾಡಿ ಬಿ.ಎಸ್ಸಿ (ಅರಣ್ಯಶಾಸ್ತ್ರ) ಪದವೀಧರರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆಯಲ್ಲಿ ಆನಂದಪುರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಪ್ರವೀಣ, ನಾಡಕಛೇರಿ ಉಪತಹಶೀಲ್ದಾರ್, ಮನವಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಅರಣ್ಯ ವಿದ್ಯಾರ್ಥಿಗಳ ಪದವೀಧರರ ಸಂಘದ ಇಂಚರ, ಮಂಜುನಾಥ್, ಸನ್ನಿಭಾ, ಸಂತೋಷ್, ಮಾರುತಿ ಸಿ.ಎನ್., ಅಮರನಾಥ್, ಲಕ್ಷ್ಮೀ, ಹರ್ಷಿತಾ, ಅನು, ಚೌವ್ಹಾಣ್, ಸಂತೋಷ್ ವಿ. ಸೇರಿದಂತೆ ಸುಮಾರು 140ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post