ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದು ಶಿವಮೊಗ್ಗದ ವಿನಾಯಕ ನಗರದಲ್ಲಿರುವ ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ರೋಟರಿ ಕ್ಲಬ್ ಆಫ್ ಶಿವಮೊಗ್ಗ ಮಿಡ್‌ಟೌನ್ ವತಿಯಿಂದ ಈ ವರ್ಷದ ಪೈಲೆಟ್ ಪ್ರಾಜೆಕ್ಟ್ ಆಗಿ ಆಯೋಜಿಸಲಾಗಿದ್ದ ‘ಗೋವರ್ಷ’ ಸೇವಾ ಯೋಜನೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಡಿ.ಎಸ್. ಅರುಣ್ ಅವರು ಮಾತನಾಡಿ, ರೋಟರಿ ಕ್ಲಬ್ ಮಿಡ್‌ಟೌನ್‌ನ ಪ್ರಸ್ತುತ ಅಧ್ಯಕ್ಷರಾದ ಹರ್ಷ ಬಿ. ಕಾಮತ್ ಹಾಗೂ ಅವರ ತಂಡವು ಸಮುದಾಯ ಅಭಿವೃದ್ಧಿಯ ಉದ್ದೇಶದಿಂದ ಅನುಷ್ಠಾನಗೊಳಿಸುತ್ತಿರುವ ಗೋವರ್ಷ ಯೋಜನೆ ಜಿಲ್ಲೆಗೆ ವಿಶೇಷ ಕೀರ್ತಿಯನ್ನು ತಂದಿರುವ ಅತ್ಯುತ್ತಮ ಕಮ್ಯುನಿಟಿ ಪ್ರಾಜೆಕ್ಟ್ ಆಗಿದೆ. ಒಟ್ಟು 173 ಕಾರ್ಯಕ್ರಮವನ್ನು ರೋಟರಿ ಮಿಡ್‌ಟೌನ್ ವತಿಯಿಂದ ಮಾಡಿದ್ದು, 47,53,000 ರೂ.ಗಳನ್ನು ವಿನಿಯೋಗಿಸಲಾಗಿದೆ. ೫ ವಿವಿಧ ಪ್ರಾಜೆಕ್ಟ್‌ಗಳಲ್ಲಿ ಗೋವರ್ಷವೂ ಕೂಡ ಒಂದಾಗಿದ್ದು, ದಾನಿಗಳ ಸಹಾಯದಿಂದ ಇಂದು ಬಡವರಿಗೆ ಗೋಪಾಲನೆ ಮಾಡಲು ಗೋವನ್ನು ನೀಡಿದ್ದು, ಇದು 15ನೇ ಗೋವಾಗಿದೆ. ಅವರಿಗೆ ಗೋವವನ್ನು ನೀಡುವುದಲ್ಲದೆ ಪಾಲನೆಯ ಬಗ್ಗೆಯೂ ಮಾಹಿತಿ ನೀಡಿ ಅವರು ಸ್ವ-ಉದ್ಯೋಗಿಯಾಗಲು ಪ್ರೇರೇಪಿಸಲಾಗುವುದು ಎಂದರು.
ರೋಟರಿ ಮಿಡ್‌ಟೌನ್ ಅಧ್ಯಕ್ಷ ಹರ್ಷಾ ಬಿ. ಕಾಮತ್ ಮಾತನಾಡಿ, ಸಮಾಜದ ಕೊನೆಯ ಹಂತದ ಜನರಿಗೆ ಈ ಸೇವಾ ಯೋಜನೆಯ ಲಾಭ ತಲುಪುವಂತೆ ಯೋಜನೆ ರೂಪಿಸಲಾಗಿದ್ದು, ಫಲಾನುಭವಿಗಳಿಗೆ ಮಾರ್ಗದರ್ಶನ ನೀಡುವ ಜೊತೆಗೆ ಮುಂದಿನ ವರ್ಷಗಳಲ್ಲೂ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ವ್ಯವಸ್ಥೆಯನ್ನು ರೂಪಿಸಿರುವ ಸಂಪೂರ್ಣ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯ ಕೋರಿದರು.
ಈ ಕಾರ್ಯಕ್ರಮದ ಗೋದಾನಿಗಳಾಗಿ ಕೆನಡಾದಲ್ಲಿ ವಾಸವಿರುವ ಅನಿತಾ ಮತ್ತು ಅರುಣ್ ಪ್ರಕಾಶ್ ಅವರು ಬೆಂಬಲ ನೀಡಿರುವುದಕ್ಕೆ ಡಿ.ಎಸ್. ಅರುಣ್ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಕಮ್ಯುನಿಟಿ ಡೈರೆಕ್ಟರ್ ಭಾಸ್ಕರ್ ಶೆಟ್ಟಿ, ಪ್ರತಿಭಾ ಅರುಣ್, ಡಿ.ಎಂ. ಜಗನಾಥ್ ಹಾಗೂ ಅನೇಕ ರೋಟರಿ ಸ್ನೇಹಿತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















