ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿವಿಧ ಇಲಾಖೆಗಳಲ್ಲಿನ ಕೇಂದ್ರ ಪುರಸ್ಕೃತ ಹಲವು ಯೋಜನೆಗಳಲ್ಲಿ ನಾಡಿನ ಯುವಜನರು ಸಾಲಸೌಲಭ್ಯ ಪಡೆದು ಸ್ವಯಂ ಉದ್ಯೋಗ ಆರಂಭಿಸಿ, ನೆಮ್ಮದಿಯ ಜೀವನ ಕಂಡುಕೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ #MP B Y Raghavendra ಅವರು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ #Marghadarshi Bank ವಿವಿಧ ಬ್ಯಾಂಕುಗಳ ಮೂಲಕ ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿ ಸಾಲಸೌಲಭ್ಯ ಪಡೆದ ಅರ್ಹ ಫಲಾನುಭವಿಗಳಿಗೆ ಸಾಲದ ಚೆಕ್ಕನ್ನು ವಿತರಿಸುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಉನ್ನತ ವ್ಯಾಸಂಗ ಮಾಡಿದ ಎಲ್ಲರಿಗೂ ಸರ್ಕಾರಿ ಉದ್ಯೋಗ ಲಭಿಸುವುದು ಸಾಧ್ಯವಿಲ್ಲ. ವಿದ್ಯಾವಂತರಾದ ಯುವಜನರು ಸ್ವಯಂ ಉದ್ಯೋಗ ಆರಂಭಿಸಲು ಆರ್ಥಿಕ ಶಕ್ತಿಯ ಅಗತ್ಯವಿರುವುದನ್ನು ಮನಗಂಡು ಹಲವು ಯೋಜನೆಗಳನ್ನು ರೂಪಿಸಿ, ಅವುಗಳನ್ನು ಅನುಷ್ಟಾನಗೊಳಿಸಿ, ಸಾಲಸಾಲಭ್ಯಗಳನ್ನು ಒದಗಿಸುತ್ತಿದೆ. ಇಂತಹ ಯೋಜನೆಗಳಲ್ಲಿ ಇರುವ ಅವಕಾಶಗಳನ್ನು ಬಳಸಿಕೊಂಡು ಸ್ವಯಂ ಉದ್ಯೋಗ ಆರಂಭಿಸಿ, ಸ್ವಾಭಿಮಾನದ ಹಾಗೂ ನೆಮ್ಮದಿಯ ಬದುಕನ್ನು ರೂಪಿಸಿಕೊಳ್ಳುವಂತೆ ಅವರು ಯುವಕರಿಗೆ ಸಲಹೆ ನೀಡಿದರು.
Also read: ಜಿಲ್ಲೆಯಲ್ಲಿ ಇನ್ನೂ 19 ಡಿಸಿಸಿ ಬ್ಯಾಂಕ್ ಹೊಸ ಶಾಖೆ: ಆರ್.ಎಂ. ಮಂಜುನಾಥ ಗೌಡ
ಶೇ.3.5ರಷ್ಟು ಜನ ಮಾತ್ರ ಸರ್ಕಾರಿ ಸೇವೆಯಲ್ಲಿ, ಶೇ. 17 ರಿಂದ 18ರಷ್ಟು ಮಂದಿ ಖಾಸಗಿ ವಲಯದಲ್ಲಿ ಹಾಗೂ ಶೇ.70ಕ್ಕೂ ಹೆಚ್ಚಿನ ಜನ ಕೃಷಿಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಾ ಬದುಕನ್ನು ಕಟ್ಟಿಕೊಂಡಿದ್ದಾರೆ. ಕೆಲವೇ ಜನರಿಗೆ ಸೀಮಿತವಾಗಿ ಕಾರ್ಯನಿರ್ವಹಿಸುತ್ತಿದ್ದ ಬ್ಯಾಂಕುಗಳು ಇಂದು ಜನಸಾಮಾನ್ಯರ ಮನೆಬಾಗಿಲಿಗೆ ಬಂದು ತಲುಪಿದ್ದು, ಅರ್ಹರಾದ ಎಲ್ಲರಿಗೂ ಆರ್ಥಿಕ ನೆರವನ್ನು ಒದಗಿಸಲು ಧಾವಿಸುತ್ತಿವೆ. ಬ್ಯಾಂಕುಗಳಲ್ಲಿ ಸಿಬ್ಬಂಧಿಗಳ ಸಂಖ್ಯೆ ಕಡಿಮೆ ಇದೆ. ಆದರೆ ಸರ್ಕಾರಿ ಸೇವಾ ಯೋಜನೆಗಳ ಸಂಖ್ಯೆ ಇತ್ತೀಚೆಗೆ ಇನ್ನೂ ಹೆಚ್ಚಾಗಿರುವುದನ್ನು ಗಮನಿಸಬಹುದಾಗಿದೆ ಎಂದ ಅವರು, ವಿವಿಧ ಯೋಜನೆಗಳಡಿಯಲ್ಲಿ ಸೌಲಭ್ಯ ಪಡೆಯಲಿಚ್ಚಿಸುವ ಫಲಾನುಭವಿಗಳು ತಮ್ಮ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಒದಗಿಸಿದಲ್ಲಿ ಆರ್ಥಿಕ ಸೌಲಭ್ಯ ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಪಿ.ಎಂ.ಜೆ.ಜೆ.ಬಿ.ವೈ., ಪಿ.ಎಂ.ಮುದ್ರಾ, ಪಿ.ಎಂ.ಎಫ್.ಎಂ..ಇ., ಪಿ.ಎಂ.ವಿಶ್ವಕರ್ಮ, ಪಿ.ಎಂ.ಸ್ವನಿಧಿ, ಪಿ.ಎಂ.ಇ.ಜಿ.ಪಿ., ಪಿ.ಎಂ.ಸೂರ್ಯಘರ್, ಎನ್.ಯು.ಎಲ್.ಎಂ. ಸ್ವಸಹಾಯ ಸಂಘಗಳ ಗುಂಪು ಮತ್ತು ವೈಯಕ್ತಿಕ ಸಾಲ ಮತ್ತಿತರ ಯೋಜನೆಗಳ ಅರ್ಹರಾದ 140ಫಲಾನುಭವಿಗಳಿಗೆ ಸಾಲಸೌಲಭ್ಯದ ಚೆಕ್ಕುಗಳನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ವಿತರಿಸಿದರು.
- ಪಿ.ಎಂ.ಸ್ವನಿಧಿ ಯೋಜನೆಯಡಿ ಯಾವುದೇ ಜಾಮೀನಿಲ್ಲದೇ ಹಲವು ಹಂತಗಳಲ್ಲಿ ಸಾಲಸೌಲಭ್ಯ ಪಡೆದು ಸ್ವಯಂ ಉದ್ಯೋಗ ನಡೆಸಲು ಸಹಕಾರಿಯಾಗಿದೆ. – ದಿನೇಶ್ ಭದ್ರಾವತಿ.
- ಕೇಂದ್ರ ಪುರಸ್ಕೃತ ಪಿ.ಎಂ.ಮುದ್ರಾ ಯೋಜನೆಯಡಿ ವಿಜಯ ಬ್ಯಾಂಕಿನಿಂದ 10,000/-ರೂ.ಗಳ ಸಾಲ ಸೌಲಭ್ಯ ಪಡೆದು ಟೈಲರಿಂಗ್ ವೃತ್ತಿ ಆರಂಬಿಸಿ, ನೆಮ್ಮದಿಯ ಜೀವನ ನಿರ್ವಹಿಸುತ್ತಿದ್ದೇನೆ. ಸಕಾಲದಲ್ಲಿ ಸಾಲಸೌಲಭ್ಯ ಒದಗಿಸಿದ ಬ್ಯಾಂಕಿನ ವ್ಯವಸ್ಥಾಪಕರಿಗೆ ಧನ್ಯವಾದಗಳು. – ಶ್ರೀಮತಿ ಶಾಂತಾಕುಮಾರಿ, ಶಿವಮೊಗ್ಗ.
- ವಯಸ್ಕರಾದ ನಮಗೆ ಯಾವುದೇ ಕಾರಣ ಹೇಳದೆ ಸಕಾಲದಲ್ಲಿ ಆರ್ಥಿಕ ನೆರವು ಒದಗಿಸಿ, ಬೀದಿಬದಿ ವ್ಯಾಪಾರ ನಡೆಸಲು ಸಹಕಾರಿಯಾಗಿದೆ. ಇದರಿಂದಾಗಿ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ನೀಡಲು ಸಾಧ್ಯವಾಗಿದೆ. -ಶ್ರೀಮತಿ ಮಂಗಳಮ್ಮ, ಬೇಡರಹೊಸಳ್ಳಿ.
ಫಲಾನುಭವಿಗಳಿಗೆ ಸಾಲದ ಸೌಲಭ್ಯ ವಿತರಿಸುವ ಈ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ವಿಭಾಗೀಯ ವ್ಯವಸ್ಥಾಪಕ ದೇವರಾಜ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಚಂದ್ರಶೇಖರ್, ಎಸ್.ಬಿ.ಐ. ವಿಭಾಗೀಯ ಅಧಿಕಾರಿ ವಿಜಯ್‌ಸಾಯಿ, ಆರ್.ಬಿ.ಐ.ನ ವೆಂಕಟರಾಮಯ್ಯ, ಯೂನಿಯನ್ ಬ್ಯಾಂಕಿನ ವ್ಯವಸ್ಥಾಪಕ ವಿಶುಕುಮಾರ್, ಶ್ರೀಮತಿ ಶಾರದಮ್ಮ, ನಾಗಭೂಷಣ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post