ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈಗಾಗಲೇ ಹತ್ತು-ಹಲವಾರು ಮಾರಕ ಯೋಜನೆಗಳಿಂದ ತತ್ತರಿಸಿ ಹೋಗಿರುವ ಪಶ್ಚಿಮಘಟ್ಟದಲ್ಲಿ ಪ್ರಸ್ತಾವಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಂತಹ ಪರಿಸರ ಮಾರಕ ಯೋಜನೆಗಳು ಬೇಡವೇ ಬೇಡ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಜಗದ್ಗುರು ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು #Swarnavalli Shri ತಾಕೀತು ಮಾಡಿದರು.
ಅವರು ಇಂದು ನಗರದ ಶ್ರೀ ಶೃಂಗೇರಿ ಶಂಕರಮಠದಲ್ಲಿ #Shringeri Shankaramutt ಪರ್ಯಾವರಣ ಟ್ರಸ್ಟ್, ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಮತ್ತು ನಿರ್ಮಲ ತುಂಗಾಭದ್ರಾ ಅಭಿಯಾನದ ಪದಾಧಿಕಾರಿಗಳೊಡನೆ ಶರಾವತಿ ಪಂಪ್ಡ್ ಸ್ಟೋರೇಜ್ #Sharavathi Pumped Storage ವಿರುದ್ಧದ ಚಿಂತನಾ ಸಭೆಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಈಗಾಗಲೇ ಸರ್ಕಾರಗಳು ಲೆಕ್ಕಾಚಾರಗಳಿಲ್ಲದೆ ಜಾರಿಗೆ ತಂದಿರುವ ವಿನಾಶಕಾರಿ ಯೋಜನೆಯಿಂದ ಪಶ್ಚಿಮಘಟ್ಟದಲ್ಲಿ ಭೂಕುಸಿತ, ಅರಣ್ಯನಾಶಗಳಂತಹ ಅಪಾಯಕಾರಿ ಘಟನೆಗಳು ಜರುಗುತ್ತಿವೆ. ಉತ್ತರಕನ್ನಡ, ಮಡಿಕೇರಿ, ಮೊದಲಾದ ಪಶ್ಚಿಮಘಟ್ಟಗಳ ಸೆರಗಿನಲ್ಲಿರುವ ಪ್ರದೇಶಗಳಲ್ಲಿ ಹಲವೆಡೆ ಸರಣಿ ಭೂಕುಸಿತಗಳಾಗಿವೆ. ಈಗ ಮತ್ತೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾದರೆ ನೆಲದೊಳಗೆ ಸುರಂಗಮಾರ್ಗ ತೋಡುವುದರಿಂದ ಅಪಾಯ ತಪ್ಪಿದ್ದಲ್ಲ ಎಂದ ಅವರು, ಈ ಯೋಜನೆಗಳಿಂದ ಅಗತ್ಯ ಇದ್ದವರಿಗೆ ಪ್ರಯೋಜನವಾಗುತ್ತಿಲ್ಲ. ಬದಲಾಗಿ ಈ ಯೋಜನೆಗಳ ಜಾರಿಯಲ್ಲಿ ಬೇರೆ ಯಾವುದೋ ಆರ್ಥಿಕ ಯೋಚನೆಗಳೂ ಇರುತ್ತವೆ. ಲೆಕ್ಕಾಚಾರಗಳಿಲ್ಲದ ಯೋಜನೆಗಳು ಇವಾಗಿವೆ ಎಂದರು.
ವಿಶೇಷವಾಗಿ ಬೇಡ್ತಿ-ಅಘನಾಶಿನಿ, ಅಘನಾಶಿನಿ-ವೇದಾವತಿ ಯೋಜನೆಗಳಲ್ಲಿ ಈ ಲೆಕ್ಕಾಚಾರಗಳಿಲ್ಲದ ಯೋಚನೆಯನ್ನು ಕಾಣಬಹುದು. ಉದಾಹರಣೆಗೆ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯಲ್ಲಿ ಇಂತಹುದೇ ಲೆಕ್ಕಾಚಾರಗಳಿಲ್ಲದ ಕೆಲಸಗಳು ನಡೆದಿದ್ದು, ಯಾರಿಗೆ ನೀರು ಮುಟ್ಟಬೇಕಾಗಿತ್ತೋ ಅವರಿಗೆ ನೀರು ಮುಟ್ಟಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ ಅವರು, ಅಡಿಕೆ ಬೆಳೆಯುವಲ್ಲಿಯೂ ಈಗ ಆಯಾ ತಪ್ಪಲಾಗಿದೆ. ಆಹಾರ ಬೆಳೆ ಬೆಳೆಯುವ ಜಾಗದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಭವಿಷ್ಯದಲ್ಲಿ ಇದು ಮನುಕುಲದ ಆಹಾರ ವ್ಯವಸ್ಥೆಗೆ ಪೆಟ್ಟುಬೀಳುವ ಸಂಭವವಿದೆ. ಅಡಿಕೆ ಆಹಾರಬೆಳೆಯಲ್ಲ, ಅದಕ್ಕೆ ನೀರಿನ ಬಳಕೆ ಹೆಚ್ಚಿದೆ. ಈ ಹಿನ್ನಲೆಯಲ್ಲಿಯೂ ಅಂತರ್‍ಜಲಮಟ್ಟ ಕುಸಿಯುತ್ತಿದೆ ಎಂದರು.
ಪಂಪ್ಡ್ ಸ್ಟೋರೇಜ್, ನದಿ ಜೋಡಣೆಗಳಿಂದ ಸಹಸ್ರಾರು ಮೀನುಗಾರರಿಗೆ ತೊಂದರೆಯಾಗಲಿದೆ. ಘಜನಿ ಭೂಮಿಗೆ ಹೊಡೆತ ಬೀಳಲಿದೆ. ಭೂಕುಸಿತದಂತಹ ದುಷ್ಪರಿಣಾಮಗಳು ಎದುರಾಗಲಿವೆ. ಪಶ್ಚಿಮಘಟ್ಟದಲ್ಲಿ ಈ ಯೋಜನೆಗಳನ್ನು ಜಾರಿ ಮಾಡಲೇಬೇಡಿ. ನವೆಂಬರ್ 23ರಂದು ಶಿರಸಿಯಲ್ಲಿ, ನ.25ರಂದು ಅಘನಾಶಿನಿ ಮೂಲದ ಮಂಜಗುಣಿಯಲ್ಲಿ, ಜನವರಿ 11ರಂದು ಶಿರಸಿಯಲ್ಲಿ ಯುವ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪರಸರ ಮನುಷ್ಯನ ಆದ್ಯತೆಯ ವಿಷಯವಾಗಿದೆ. ಸರ್ಕಾರಗಳು ಈ ನಿಟ್ಟಿನಲ್ಲಿ ಗಂಭೀರವಾಗಿ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಸರ ಹೋರಾಟಗಾರ ಡಾ.ಶ್ರೀಪತಿ ಎಲ್.ಕೆ. ಮಾತನಾಡಿ, ವಿಜ್ಞಾನಿಗಳ ಪ್ರಕಾರ ಶರಾವತಿ ಕಣಿವೆಯಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆ ಪರಿಸರಕ್ಕೆ ಮಾರಕವಾಗಿದೆ. ಇಂತಹ 2000 ಮೇಗಾವ್ಯಾಟ್ ವಿದ್ಯತ್ ಶಕ್ತಿಯ ಉತ್ಪಾದನೆ ಜಗತ್ತಿನ ಬೇರ್ಯಾವ ಭಾಗದಲ್ಲೂ ಸ್ಥಾಪನೆಯಾಗಿಲ್ಲ. ಈಗಾಗಲೇ ಈ ಮಾರಕ ಯೋಜನೆಗೆ ಟೆಂಡರ್ ಕರೆಯಲಾಗಿದೆ. ಆದರೆ ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಇತ್ತೀಚೆಗೆ ಸಮೀಕ್ಷೆಗೆ ಬಂದವರನ್ನು ಬಂಗಾರಮಕ್ಕಿಯ ಶ್ರೀಮಾರುತಿ ಗುರೂಜಿ ಮತ್ತಿತರರು ವಿರೋಧ ಮಾಡಿ, ಅವರನ್ನು ವಾಪಾಸ್ ಕಳುಹಿಸಿದ್ದಾರೆ. ಈ ಯೋಜನೆಯಿಂದ ಉತ್ಪಾದನೆಯಾಗುವ ವಿದ್ಯುತ್‍ಗಿಂತ ಶೇ.25ರಷ್ಟು ಹೆಚ್ಚಿನ ವಿದ್ಯುತ್ ಈ ಉತ್ಪಾದನೆಗೆ ಬೇಕಾಗಿದೆ ಎಂದರು.
ಈ ಯೋಜನೆಯ ಮಾಹಿತಿ ಕೇಳಿದರೆ ರಾಷ್ಟ್ರೀಯ ಹಿತಾಸಕ್ತಿಯ ಹಿನ್ನಲೆಯಲ್ಲಿ ಮಾಹಿತಿ ನೀಡಲಾಗುವುದಿಲ್ಲ ಎಂಬ ಉಡಾಫೆ ಉತ್ತರ ಇಲಾಖೆಯಿಂದ ಬರುತ್ತಿದೆ. ಫ್ರೀಫೀಜಿಬಿಲಿಟಿ ವರದಿಯಲ್ಲಿ ವಿದ್ಯುತ್ ಉತ್ಪಾದನೆಗೆ ತಗುಲುವ ವೆಚ್ಚದ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಆರ್ಥಿಕವಾಗಿಯೂ ಈ ಯೋಜನೆಯಿಂದ ಯಾವ ಪ್ರಯೋಜನವೂ ಇಲ್ಲ. ಜಗತ್ತಿನ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಶರಾವತಿ ಕೊಳ್ಳದಲ್ಲಿ ಅಳಿವಿನಂಚಿಗಿರುವ ಸಿಂಗಳಿಕ, ಮಂಗಟ್ಟೆ ಹಕ್ಕಿಗಳ ಆವಾಸಸ್ಥಾನ ಬರಿದಾಗಲಿದೆ. ಇಲಾಖೆಯ ವರದಿ ಸುಳ್ಳಿನ ಕಂತೆಯಾಗಿದೆ. ಸಂಪೂರ್ಣ ವಿರೋಧಾಭಾಸದಿಂದ ತುಂಬಿದೆ. ರಾಜಸ್ತಾನ, ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡುಗಳಲ್ಲಿ ಪರಿಸರ ಸ್ನೇಹಿಯಾಗಿರುವ ಬ್ಯಾಟರಿ ಎನರ್ಜಿ ಸ್ಟೋರೇಜ್ ಪದ್ಧತಿ ಜಾರಿಯಲ್ಲಿದೆ. ಅಂತಹುಗಳನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಿರ್ಮಲತುಂಗಾಭದ್ರಾ ಅಭಿಯಾನ ಸಂಚಾಲಕ ಎಂ. ಶಂಕರ್, ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ದಕ್ಷಿಣ ಭಾರತದ ಪ್ರಮುಖ ವಿ.ಪಿ. ಮಾಧವನ್, ಪರ್ಯಾವರಣ ಟ್ರಸ್ಟಿನ ಬಾಲಕೃಷ್ಣ ನಾಯ್ಡು, ಡಾ.ಬಾಲಕೃಷ್ಣ ಹೆಗಡೆ, ಮಹಿಮಾ ಪಟೇಲ್, ಡಾ. ವರದರಾಜ್, ದಿನೇಶ್‍ಕುಮಾರ್, ಲೋಕೇಶ್ವರಪ್ಪ, ಭಾಗೀರಥಿಬಾಯಿ, ಭಾರತೀಯ ಕೃಷಿಕ ಸಮಾಜದ ವಾಸುದೇವ್, ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post