ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸಮರ್ಪಕ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂದು ಬೃಹತ್ ಪ್ರತಿಭಟನೆ ನಡೆಸಿತು.
ಕೋವಿಡ್-19 ಲಾಕ್‌ಡೌನ್ ನಂತರ ಶಾಲಾ-ಕಾಲೇಜುಗಳು ಶುರುವಾಗಿ ತಿಂಗಳುಗಳು ಕಳೆದಿವೆ. ತರಗತಿಗಳೂ ಸರಾಗವಾಗಿ ನಡೆಯುತ್ತಿದೆ. ಆದರೂ ಇನ್ನೂ ಅನೇಕ ಮಾರ್ಗಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ತೀವ್ರವಾಗಿ ಪರದಾಡುತ್ತಿದ್ದಾರೆ. ಕೆಲವು ಕಡೆ ಬಸ್ ಸಂಚಾರವಿದ್ದರೂ ಅಗತ್ಯವಿರುವ ಕಡೆ ಬಸ್ ನಿಲುಗಡೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ ಎಂದರು.
ಸರ್ಕಾರಿ ವಿದಾರ್ಥಿ ವಸತಿ ನಿಲಯಗಳು ಬಹುತೇಕ ನಗರದಿಂದ ಹೊರಗಡೆ ಇದ್ದು, ಮಲ್ಲಿಗೆನಹಳ್ಳಿ (ವಾಜಪೇಯಿ ಬಡಾವಣೆ) ಮತ್ತು ನವುಲೆ ಹಾಸ್ಟೆಲ್‌ನ ವಿದ್ಯಾರ್ಥಿಗಳು ತುಂಬಾ ತೊಂದರೆ ಎದುರಿಸುತ್ತಿದ್ದಾರೆ. ಈ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್‌ಗಳ ಕೊರತೆ ಇದೆ. ಈ ನಿಟ್ಟಿನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಸಮಯದ ಅನುಕೂಲಕ್ಕೆ ಅನುಗುಣವಾಗಿ ಬಸ್ ವ್ಯವಸ್ಥೆ ಮಾಡಬೇಕಿದೆ ಎಂದು ಮನವಿ ಮಾಡಿದರು.
ಕುವೆಂಪು ವಿವಿಗೆ ಸರ್ಕಾರಿ ಬಸ್‌ಗಳ ಕೊರತೆ ಇದ್ದು, ವಿವಿಗೆ ಹೋಗುವ ಬಸ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ಅಗತ್ಯವಿದೆ. ಇದರ ಜೊತೆಗೆ ಕೋವಿಡ್-19 ಲಾಕ್‌ಡೌನ್‌ಗೆ ಮುನ್ನ ಇದ್ದ ಹಲವು ಮಾರ್ಗಗಳ ಬಸ್‌ಗಳು ಇನ್ನೂ ಓಡಾಟ ಶುರು ಮಾಡಿರುವುದಿಲ್ಲ. ಎಲ್ಲಾ ಬಸ್‌ಗಳ ಓಡಾಟ ಪುನರ್ ಆರಂಭಿಸಬೇಕು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಇರುವಲ್ಲಿ ಹೆಚ್ಚಿನ ಬಸ್‌ಗಳ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post