ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ಮೇಲ್ ಹ್ಯಾಕ್ ಮಾಡಿದ ಸೈಬರ್ ವಂಚಕರು, #Cyber fraudster ಕಚ್ಚಾವಸ್ತುಗಳ ಪೂರೈಕೆದಾರರ ಸೋಗಿನಲ್ಲಿ ಶಿವಮೊಗ್ಗದ ಕಾರ್ಖಾನೆಯೊಂದಕ್ಕೆ 78 ಲಕ್ಷ ರೂ ವಂಚಿಸಿರುವ ಘಟನೆ ವರದಿಯಾಗಿದೆ.
ಪೂರೈಕೆದಾರರ ಬ್ಯಾಂಕ್ ಖಾತೆ ಬದಲಾಗಿದೆ ಎಂದು ನಕಲಿ ಇಮೇಲ್ ಕಳುಹಿಸಿ ಶಿವಮೊಗ್ಗದ ಕಾರ್ಖಾನೆಯೊಂದರಿಂದ 78,89,950 ಹಣ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚನೆ ಎಸಗಿದ್ದಾರೆ.
ಶಿವಮೊಗ್ಗದ ಆಟೋಮೊಬೈಲ್ ಬಿಡಿಭಾಗಗಳ ತಯಾರಿಕೆ ಕಾರ್ಖಾನೆಗೆ ಬೆಂಗಳೂರಿನ ಪೂರೈಕೆದಾರ ಕಂಪನಿಯಿಂದ ಕಚ್ಚಾ ಸಾಮಗ್ರಿ ತರಿಸಿಕೊಳ್ಳ ಲಾಗುತ್ತಿತ್ತು. ಜನವರಿ 27 ರಂದು ಪೂರೈಕೆದಾರರ ಹೆಸರಿನಲ್ಲಿ ಈ ಮೇಲ್ ಬಂದಿತ್ತು. ನಮ್ಮ ಬ್ಯಾಂಕ್ ಖಾತೆ ಎಸ್‌ಬಿಐನಿಂದ ಸೌತ್ ಇಂಡಿಯನ್ ಬ್ಯಾಂಕಿಗೆ ಬದಲಾಯಿಸಿದ್ದೇವೆ, ಇನ್ನು ಮುಂದೆ ಇದೇ ಖಾತೆಗೆ ಹಣ ವರ್ಗಾಯಿಸಿ ಎಂದು ತಿಳಿಸಲಾಗಿತ್ತು. ಇದನ್ನು ನಂಬಿದ ಶಿವಮೊಗ್ಗದ ಕಾರ್ಖಾನೆ ಮ್ಯಾನೇಜರ್, ಜನವರಿ ೨೮ ರಂದು ಹೊಸ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ನಂತರ ಪರಿಶೀಲಿಸಿದಾಗ, ಅನಾಮಧೇಯ ವ್ಯಕ್ತಿಗಳು ಪೂರೈಕೆದಾರ ಕಂಪನಿಯ ಇಮೇಲ್ ಐಡಿಯನ್ನು ಹ್ಯಾಕ್ ಮಾಡಿ ಈ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ವಂಚಕರು ನಕಲಿ ಬ್ಯಾಂಕ್ ವಿವರಗಳನ್ನು ನೀಡಿ ಕಾರ್ಖಾನೆಯ ಹಣ ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ.
ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















