ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ #CJI Gavayi ಅವರ ಮೇಲೆ ಶೂ ಎಸೆದ ಘಟನೆಯನ್ನು ಖಂಡಿಸಿ ಇಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘಟನೆ (ಎಪಿಸಿಆರ್) ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿತು.
ಸಂವಿಧಾನದ ಅಡಿಯಲ್ಲಿ ರಚನೆಯಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಮತ್ತು ಸರ್ವಜನ ಹಿತರಕ್ಷಣೆ ಪ್ರಮುಖವಾಗಿದೆ. ಸಮಾಜ ವಿರೋಧಿ, ದೇಶ ವಿರೋಧಿ, ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿಯವರಿಂದ ಈ ಘಟನೆ ನಡೆದಿದೆ. ಹಿರಿಯ ವಕೀಲರೊಬ್ಬರು ನ್ಯಾಯಮೂರ್ತಿಗಳಿಗೆ ಚಪ್ಪಲಿ ಎಸೆದಿರುವುದು ನ್ಯಾಯಾಂಗ ವ್ಯವಸ್ಥೆ ಮತ್ತು ವಕೀಲ ವೃತ್ತಿಗೆ ದೊಡ್ಡ ಅವಮಾನವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಚಪ್ಪಲಿ ಎಂಬ ವಸ್ತುವನ್ನು ಮನೆಯಿಂದ ಹೊರಗಿಟ್ಟು ಮನೆ ಹಾಗೂ ದೇವಸ್ಥಾನದೊಳಗೆ ಪ್ರವೇಶಿಸುತ್ತೇವೆ. ಚಪ್ಪಲಿ ಹಾಕಿಕೊಂಡು ದೇವರಿಗೆ ಹಾರವನ್ನು ಕೂಡ ಹಾಕುವುದಿಲ್ಲ. ಅಂತಹದರಲ್ಲಿ ಕರ್ತವ್ಯ ನಿರತ ಮುಖ್ಯ ನ್ಯಾಯಮೂರ್ತಿಗಳಿಗೆ ಶೂ ಎಸೆದಿರುವುದು ಭಾರತದ ಸಂಸ್ಕೃತಿಗೆ ಬಗೆದ ದ್ರೋಹವಾಗಿದೆ. ಇದೊಂದು ಸನಾತನ ಮನಸ್ಥಿತಿ ಹೊಂದಿರುವ ವ್ಯಕ್ತಿಯ ಹೇಯ ಕೃತ್ಯವಾಗಿದ್ದು, ಇದೊಂದು ಅಕ್ಷಮ್ಯ ಅಪರಾಧ. ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮವನ್ನು ಕೇಂದ್ರ ಸರ್ಕಾರ ಮತ್ತು ಭಾರತೀಯ ವಕೀಲರ ಪರಿಷತ್ತು ಕೈಗೊಳ್ಳಬೇಕೆಂದು ಮನವಿದಾರರು ಆಗ್ರಹಿಸಿದರು.
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೂರದೃಷ್ಟಿ ಹಾಗೂ ದೇಶಪ್ರೇಮದ ಫಲವಾದ ಈ ಬೃಹತ್ ಸಂವಿಧಾನದ ಪ್ರಮುಖ ಆಶಯವಾದ ಎಲ್ಲರ ಹಕ್ಕುಗಳ ಹಾಗೂ ಕರ್ತವ್ಯಗಳ ರಕ್ಷಣೆ ಮಾಡುವ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ನಡೆದ ಈ ಹೇಯ ಕೃತ್ಯ ಇಡೀ ದೇಶವೇ ತಲೆತಗ್ಗಿಸುವ ಘಟನೆಯಾಗಿದೆ. ಅಪರಾಧಿಗಳಿಗೆ ಶಿಕ್ಷೆಯಾಗುವ ತನಕ ಎಪಿಸಿಆರ್ ಕಾನೂನು ಹೋರಾಟ ಮಾಡಲು ಬದ್ಧವಾಗಿದೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಮತ್ತು ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಎಪಿಸಿಆರ್ ಜಿಲ್ಲಾ ಜಿಲ್ಲಾಧ್ಯಕ್ಷೆ ಸರೋಜಾ ಪಿ. ಚಂಗೊಳ್ಳಿ, ಗೌರವಾಧ್ಯಕ್ಷ ಆರ್.ಟಿ. ನಟರಾಜ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಫೀ, ದೇವೇಂದ್ರಪ್ಪ ಕೆ., ರಾಜಮ್ಮ, ಚನ್ನವೀರಪ್ಪ ಗಾಮನಗಟ್ಟಿ, ರಾಚಪ್ಪ, ಸುಲೋಚನ, ಅಬೀಬುಲ್ಲಾ, ಪಾಂಡುರಂಗಪ್ಪ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post