ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ ಏನನ್ನೂ ಮಾಡಿಲ್ಲ ಎಂದು ಕಾಂಗ್ರೆಸ್‍ನ ಹಿರಿಯ ನಾಯಕರೇ ಈಗ ಒಪ್ಪಿಕೊಂಡಿದ್ದಾರೆ ಎಂದು ರಾಷ್ಟ್ರಭಕ್ತರ ಬಳದ ಸಂಚಾಲಕ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿಯವರು #Rahul Gandhi ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ನಾವೂ ಏನೂ ಮಾಡಲಿಲ್ಲ, ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಅರ್ಥಮಾಡಿಕೊಂಡಿದ್ದರೆ ಮತ್ತಷ್ಟು ಅಭಿವೃದ್ಧಿಯನ್ನು ಹಿಂದುಳಿದ ವರ್ಗಗಳಿಗಾಗಿ ಮಾಡಬಹುದಿತ್ತು ಎಂದಿದ್ದಾರೆ. ಈಗಲಾದರೂ ಅವರಿಗೆ ಜ್ಞಾನೋದಯವಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ರಾಹುಲ್‍ರವರು ಹಿಂದುಳಿದ ವರ್ಗಗಳ ಹರಿಕಾರ ಎಂದು ಹೇಳುವುದನ್ನು ನೋಡಿದರೆ, ಆಶ್ಚರ್ಯವಾಗುತ್ತದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬ ಕಾರಣಕ್ಕಾಗಿ ಒಂದು ರೀತಿಯಲ್ಲಿ ಬಕೇಟ್ ಹಿಡಿಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಒಂದು ರೀತಿಯಲ್ಲಿ ದ್ವಂದ್ವಗಳಲ್ಲಿದೆ. ಒಬೊಬ್ಬರು ಒಂದೊಂದು ರೀತಿಯ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ವಿರೋಧಾಬಾಸ ಹೇಳಿಕೆಗಳು ಜನರಲ್ಲಿ ಗೊಂದಲಹುಟ್ಟಿಸುತ್ತಿವೆ. ಮನಸ್ಸಿಗೆ ಬಂದಂತೆ ಆಡಳಿತ ನಡೆಸುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ಅವರು, ಪರಿಶಿಷ್ಟರಿಗೂ ದ್ರೋಹ ಬಗೆಯುತ್ತಿದ್ದಾರೆ. ಎಂದಿನಂತೆ ಪರಿಶಿಷ್ಟರಿಗಾಗಿ ಮೀಸಲಿಟ್ಟಿದ್ದ ಸಾವಿರಾರು ಕೋಟಿ ರೂ.ಗಳನ್ನು ಗ್ಯಾರಂಟಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಪರಿಶಿಷ್ಟರಿಗಾಗಿ ಮೀಸಲಿಟ್ಟಿದ್ದ 37 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ಪರಿಶಿಷ್ಟರಿಗೆ ಮಾಡಿದ ದ್ರೋಹವಲ್ಲದೆ ಮತ್ತೇನೂ ಅಲ್ಲ, ಆ.5ರಂದು ಇದಕ್ಕಾಗಿ ಒಂದು ವಿಶೇಷ ಸಭೆ ಕೂಡ ಕರೆದಿದ್ದಾರೆ. ಈಗ ಈ ಹಣವನ್ನು ಎಲ್ಲಿಂದ ಹೇಗೆ ತುಂಬಿಕೊಡುತ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ ಎಂದರು.
ಹಿಂದುಳಿದ ವರ್ಗಗಳ ಹಿತವನ್ನೇ ಮರೆತ ಸಿದ್ಧರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣವನ್ನೇ ಬಯಸದ ಇವರನ್ನು ಅದು ಹೇಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೋ ಗೊತ್ತಿಲ್ಲ, ಕೇಂದ್ರ ಸಮಿತಿ ಅವರನ್ನು ಆ ಸ್ಥಾನದಿಂದ ಕಿತ್ತುಬಿಸಾಕಬೇಕು. ಮುಖ್ಯಮಂತ್ರಿಗಳ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದರು.
ರಸಗೊಬ್ಬರ ಸಮಸ್ಯೆ ಪರಿಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಪತ್ರ ಬರೆಯುತ್ತಾರೆ. ಆದರೆ ಕೃಷಿ ಸಚಿವ ಚೆಲುವರಾಯ ಸ್ವಾಮಿಯವರು ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ ಇಲ್ಲ ಎನ್ನುತ್ತಾರೆ. ಏಕೆ ಈ ವಿರೋಧಬಾಸ ಹೇಳಿಕೆಗಳು ಅರ್ಥವಾಗುತ್ತಿಲ್ಲ. ಕೇಂದ್ರ ಸರ್ಕಾರದ ಮೇಲೆ ವಿನಾಕಾರಣ ದೂರು ಕೊಡುವ ಬದಲು ಕೇಂದ್ರವೇ ಹೇಳಿದಂತೆ, ರಸಗೊಬ್ಬರವನ್ನು ದಾಸ್ತಾನು ಮಾಡಬಹುದಾಗಿತ್ತಲ್ಲವೇ ಎಂದು ಪ್ರಶ್ನೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈ. ವಿಶ್ವಾಸ್, ಬಾಲು, ಮೋಹನ್ ಜಾದವ್, ಶಿವಾಜಿ, ಕುಬೇರಪ್ಪ, ವಿನಯ್, ಕಾಚಿನಕಟ್ಟೆ ಸತ್ಯನಾರಾಯಣ್, ಗುರುರಾಜ್ ಎಂ. ಶೇಟ್ ಇದ್ದರು.
ಸಚಿವ ಮಧುಬಂಗಾರಪ್ಪರಿಗೆ ಅಭಿನಂದನೆ
ದೈವಜ್ಞ ಬ್ರಾಹ್ಮಣ ಸಮುದಾಯದ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ತಕ್ಷಣವೇ ಬಗೆಹರಿಸಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದನೆ ಎಂದು ಈಶ್ವರಪ್ಪ ಹೇಳಿದರು.
ದೈವಜ್ಞ ಬ್ರಾಹ್ಮಣ ಸಮುದಾಯದವರು 2ಎನಲ್ಲಿ ಮೊದಲಿನಿಂದಲೂ ಇದ್ದರು. ಆದರೆ ಅವರನ್ನು ಸಾಮಾನ್ಯವರ್ಗಕ್ಕೆ ಸೇರಿಸಲಾಗಿತ್ತು. ಇದರಿಂದ ಆ ಸಮುದಾಯದ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಆ ಸಮುದಾಯದ ಮುಖಂಡರು ಬಂದು ನನಗೆ ತಿಳಿಸಿದರು. ನಾನು ತಕ್ಷಣವೇ ಸಂಬಂಧಪಟ್ಟ ಡಿಡಿಪಿಐ ಮತ್ತು ಇತರೆ ಅಧಿಕಾರಿಗಳಿಗೆ ತಿಳಿಸಿದೆ. ಮತ್ತು ಶಿಕ್ಷಣ ಸಚಿವ ಮಧುಬಂಗಾರಪ್ಪನವರಿಗೂ ಕೂಡ ವಿಷಯ ತಿಳಿಸಿದೆ. ಅವರು ನನಗೆ ತಕ್ಷಣವೇ ಸ್ಪಂಧಿಸಿ, ಶಿಕ್ಷಣ ಆಯುಕ್ತರಿಗೆ ಹೇಳಿ, ಎರಡೇ ದಿನದಲ್ಲಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಅವರಿಗೆ ಅಭಿನಂದನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿದ್ದ ದೈವಜ್ಞ ಸಮಾಜದ ಮುಖಂಡ ಗುರುರಾಜ್ ಎಂ. ಶೇಟ್ ಕೂಡ ಶಿಕ್ಷಣ ಸಚಿವರಿಗೆ ಅಭಿನಂದನೆ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post