ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ರಾಜ್ಯಾದ್ಯಂತ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸ್ಮಾರ್ಟ್‍ಕ್ಲಾಸ್ ರೂಂ ಆರಂಭ ಮತ್ತು ಟ್ಯಾಬ್ ಪಿ.ಸಿ ವಿತರಣೆ ಮಾಡುತ್ತಿರುವುದು ವಿದ್ಯಾರ್ಥಿಗಳ ಕಲಿಕೆಗೆ ಅತ್ಯಂತ ಅನುಕೂಲವಾಗಲಿದೆ ಹಾಗೂ ಇದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಭದ್ರ ಬುನಾದಿಯಾಗುವಂತಹ ಹೆಜ್ಜೆಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಆಂತರಿಕ ಗುಣಮಟ್ಟ ಭರವಸಾ ಕೋಶ, ಶಿವಮೊಗ್ಗ ಇವರ ಸಹಯೋಗದೊಂದಿಗೆ ಇಂದು ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಸ್ಮಾರ್ಟ್ ಕಾಸ್‍ರೂಂ ಉದ್ಘಾಟನೆ ಹಾಗೂ ಟ್ಯಾಬ್ ಪಿ.ಸಿ. ವಿತರಣಾ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಟ್ಯಾಬ್ ಪಿ.ಸಿ ವಿತರಣೆ ಮಾಡಿ ಅವರು ಮಾತನಾಡಿದರು.
ಸುಮಾರು ರೂ.163 ಕೋಟಿ ವೆಚ್ಚದಲ್ಲಿ 436 ಪ್ರಥಮ ದರ್ಜೆ ಕಾಲೇಜುಗಳು, 14 ಇಂಜಿನಿಯರಿಂಗ್ ಕಾಲೇಜುಗಳು, 82 ಪಾಲಿಟೆಕ್ನಿಕ್ ಸೇರಿದಂತೆ 550 ಸಂಸ್ಥೆಗಳಲ್ಲಿ 1.55 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ಪಿ.ಸಿ ವಿತರಣೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸ್ಮಾರ್ಟ್‍ಕ್ಲಾಸ್ ರೂಂಗಳಿಗೆ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರು ಇಂದು ವರ್ಚುಯಲ್ ಕಾರ್ಯಕ್ರಮದ ಮೂಲಕ ಚಾಲನೆ ನೀಡುತ್ತಿರುವುದು ಅಭಿನಂದನಾರ್ಹವಾಗಿದೆ ಎಂದರು.
ಹಿಂದಿನ ಸರ್ಕಾರ ಎಸ್.ಸಿ.ಎಸ್.ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವ ಯೋಜನೆ ಹಮ್ಮಿಕೊಂಡಿತ್ತು. ಆದರೆ ಎಲ್ಲ ವಿದ್ಯಾರ್ಥಿಗಳಿಗೆ ಇಂತಹ ತಂತ್ರಜ್ಞಾನ ಅವಶ್ಯಕತೆ ಇರುವ ಹಿನ್ನೆಲೆ ಪ್ರಸ್ತುತ ಸರ್ಕಾರ ಅದೇ ಬಜೆಟ್‍ನಲ್ಲಿ ಪದವಿಯ ಪ್ರಥಮ ವರ್ಷದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಟ್ಯಾಬ್ ಪಿ.ಸಿ. ವಿತರಣೆ ಮಾಡುತ್ತಿರುವುದು ಸ್ತುತ್ಯಾರ್ಹವಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಟ್ಯಾಬ್ ಸಹಾಯದಿಂದ ಆನ್‍ಲೈನ್ ತರಗತಿಗಳು ಹಾಗೂ ಪಿಪಿಟಿ, ಇಮೇಜಸ್, ಆಡಿಯೋ ಇತರೆ ಆಧುನಿತ ತಂತ್ರಜ್ಞಾನದಿಂದ ಕಲಿಕೆ ಸುಲಭವಾಗಲಿದ್ದು, ಶೈಕ್ಷಣಿಕ ಉನ್ನತೀಕರಣಕ್ಕೆ ಅನುಕೂಲವಾಗಲಿದೆ. ಹಾಗೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಭದ್ರ ಬುನಾದಿ ಹಾಕಲು ಇದು ಮೊದಲ ಹೆಜ್ಜೆಯಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ ಹಲವಾರು ಚಿಂತನೆಗಳನ್ನು ಮಾಡುತ್ತಾ ಅಪ್‍ಡೇಟ್ ಮಾಡುತ್ತಾ ಬಂದಿದೆ. ಹಿಂದಿನ ಶಿಕ್ಷಣಕ್ಕಿಂತ ಇಂದು ಭಿನ್ನವಾಗಿದ್ದು ಅಪ್‍ಡೇಟ್ ಆಗುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಇಂತಹ ಯೋಜನೆಗಳು ಒಂದು ಸುಯೋಗ ಎನ್ನಬಹುದು. ಶಿಕ್ಷಣ, ಮೂಲಭೂತ ಸೌಕರ್ಯಗಳು, ಕೈಗಾರಿಕೆ, ಉತ್ತಮ ರಸ್ತೆ, ಏರ್‍ಪೋರ್ಟ್ ಸೇರಿದಂತೆ ಅಭಿವೃದ್ದಿ ಕಾರ್ಯಗಳನ್ನು ಅನುಷ್ಟಾನಗೊಳಿಸುವ ಮೂಲಕ ಇನ್ನು ಎರಡು ಮೂರು ವರ್ಷಗಳಲ್ಲಿ ಶಿವಮೊಗ್ಗ ಮಾದರಿ ಜಿಲ್ಲೆಯಾಗಲಿದೆ ಎಂಬ ನಂಬಿಕೆ ಇದೆ ಎಂದ ಅವರು ಶಿಕ್ಷಣ ಸೇರಿದಂತೆ ಎಲ್ಲ ರೀತಿಯ ಅಭಿವೃದ್ದಿಗಾಗಿ ಸರ್ಕಾರ ಸದಾ ನಿಮ್ಮ ಜೊತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಪ್ರತಿನಿಧಿ ಹಾಗೂ ಫಲಾನುಭವಿ ಸಿಂಚನಾ ಸಾಗರ್ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವಿದ್ಯಾರ್ಥಿಗಳಿಗೆ ಕೊರೋನಾದಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಟ್ಯಾಬ್.ಪಿ.ಸಿ ಯಿಂದ ಕಲಿಕೆಗೆ ಅನುಕೂಲವಾಗಲಿದೆ. ಸರ್ಕಾದ ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ನಾವು ಕೂಡ ನಮ್ಮ ನಾಡಿಗೆ ಉತ್ತಮ ಕೊಡುಗೆ ನೀಡುತ್ತೇವೆ ಎಂದು ಹೇಳಿದರು.
ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಕಾಲೇಜು ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಡಿ.ಎಸ್.ಅರುಣ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯಾದ್ಯಂತ ಮೊದಲನೇ ವರ್ಷದ ಪದವಿ ಓದುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್.ಪಿ.ಸಿ ನೀಡುವ ಹಾಗು ಸ್ಮಾಟ್‍ಕ್ಲಾಸ್ ರೂಂ ಸ್ಥಾಪಿಸುವ ಕಾರ್ಯಕ್ರಮಕ್ಕೆ ಇಂದು ಮುಖ್ಯಮಂತ್ರಿಗಳು ಚಾಲನೆ ನೀಡಿದ್ದು, ಒಟ್ಟು 1.55 ವಿದ್ಯಾರ್ಥಿಗಳಿಗೆ ಟ್ಯಾಬ್.ಪಿ.ಸಿ ನೀಡಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ 872 ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು, ಕೊರೊನಾ ಹಿನ್ನೆಲೆ ಇಂದು ಸಾಂಕೇತಿಕವಾಗಿ 12 ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಸರ್ಕಾರದ ಇಂತಹ ಸೌಲಭ್ಯಗಳನ್ನು ಪಡೆದ ನಮ್ಮ ಕಾಲೇಜು ಪ್ರತಿಷ್ಟಿತ ಕಾಲೇಜಾಗಿ ಬೆಳವಣಿಗೆ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಧನಂಜಯ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿದ್ದು ಇಂತಹ ಸೌಲಭ್ಯ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯ. ಈ ಯೋಜನೆಯ ಸದುಪಯೋಗ ಪಡೆದು ಶೈಕ್ಷಣಿಕ ಉನ್ನತೀಕರಣದೆಡೆ ಹೆಜ್ಜೆ ಹಾಕಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸ್ಮಾರ್ಟ್‍ಕ್ಲಾಸ್ ರೂಂ ಉದ್ಘಾಟನೆ :
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರು ಹಾಗೂ ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಕೆ.ಎಸ್.ಈಶ್ವರಪ್ಪ ಇವರು ಸ್ಮಾರ್ಟ್ ಕ್ಲಾಸ್ ರೂಂ ಉದ್ಘಾಟನೆ ನೆರವೇರಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶೈಕ್ಷಣಿಕ ಕೊಡುಗೆ ನೀಡಬೇಕೆಂದರು.
ವಿಧಾನ ಪರಿಷತ್ ಶಾಸಕರಾದ ರುದ್ರೇಗೌಡ, ಪ್ರಸನ್ನಕುಮಾರ್.ಆರ್, ಮಹಾಪೌರರಾದ ಸುನೀತಾ ಅಣ್ಣಪ್ಪ, ಸದಸ್ಯರಾದ ಸುರೇಖಾ ಮುರಳೀಧರ, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಧನಂಜಯ ಬಿ.ಆರ್, ಮಹಿಳಾ ಕಾಲೇಜಿನ ಪ್ರಾಂಶುಪಾಲ ದುಗ್ಗಪ್ಪ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post