ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರಂಗಭೂಮಿ ಕೇವಲ ಮನರಂಜನೆಗಷ್ಟೇ ಇರುವ ಕಲೆಯಲ್ಲ, ರಂಗಭೂಮಿಯಿಂದ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ರಂಗ ಕಲಾವಿದೆ ವಿದ್ಯಾ ಹೆಗ್ಡೆ ಹೇಳಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಶಿವಮೊಗ್ಗ ರಂಗಾಯಣ ಆಯೋಜನೆ ಮಾಡಿದ್ದ ಜೀವನ್ಮುಖಿ ವನಿತೆಯರಿಗೊಂದು ನಾಟಕೋತ್ಸವ ಹೆಸರಿನ ಮಹಿಳಾ ನಾಟಕೋತ್ಸವದ ಮೂರನೇ ದಿನವಾದ ಇಂದು ನಡೆದ ಕನ್ನಡ ರಂಗಭೂಮಿಯಲ್ಲಿ ಮಹಿಳೆಯರು: ಅಂದು, ಇಂದು? ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ವಿಷಯ ಮಂಡನೆ ಮಾಡಿ ಅವರು ಮಾತನಾಡಿದರು.
ರಂಗಭೂಮಿ ಒಂದು ಸಮುದ್ರದಂತೆ, ಅದಕ್ಕೆ ಮಹಿಳೆ ಎಂಬ ಇನ್ನೊಂದು ಸಮುದ್ರ ಸೇರಿ ಈಗ ರಂಗಭೂಮಿ ಒಂದು ಮಹಾಸಾಗರವಾಗಿದೆ. ರಂಗಭೂಮಿ ಕ್ಷೇತ್ರದಲ್ಲಿ ಮಹಿಳೆ ಒಂದೊಂದೇ ಹೆಜ್ಜೆ ಮುಂದಡಿಯಿಡುತ್ತಾ ಸಮಾಜಕ್ಕೆ ತನ್ನನ್ನು ತಾನು ತೆರೆದುಕೊಳ್ಳುತ್ತಿದ್ದಾಳೆ. ಹಿಂದೆಯೂ ಮಹಿಳೆ ರಂಗಭೂಮಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾಳೆ. ಆದರೆ ಆ ಕೆಲಸಗಳಿಗೆ ಅಂದು ಆಕೆಗೆ ಯಾವುದೇ ಮನ್ನಣೆ ದೊರೆತಿಲ್ಲ, ಪ್ರೋತ್ಸಾಹವೂ ಸಿಗಲಿಲ್ಲ. ನಂತರದ ದಿನಗಳಲ್ಲಿ ಶಿಕ್ಷಣ ಆಕೆಯಲ್ಲಿ ಆತ್ಮಸ್ಥೈರ್ಯ ತುಂಬಿತು. ಇದರಿಂದಾಗಿ ಮಹಿಳೆಗೆ ರಂಗಭೂಮಿಯಲ್ಲಿ ತನ್ನನ್ನು ತಾನು ಕಂಡುಕೊಳ್ಳಲು ಸಾಧ್ಯವಾಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಿಷಯದ ಕುರಿತು ಪ್ರತಿಕ್ರಿಯೆ ನೀಡಿದ ಮನೋವೈದ್ಯೆ ಡಾ. ಕೆ.ಎಸ್. ಪವಿತ್ರ, ಮಹಿಳೆ ರಂಗಭೂಮಿಯಲ್ಲಿ ಪ್ರೇಕ್ಷಕಳಾಗಿ, ಕಲಾವಿದೆಯಾಗಿ, ನಿರ್ದೇಶಕಿಯಾಗಿ ವಿವಿಧ ರೀತಿಯ ಸವಾಲುಗಳನ್ನು ಎದುರಿಸುತ್ತಲೇ ಬಂದಿದ್ದಾಳೆ. ವಿಪರ್ಯಾಸವೆಂದರೆ ಇಂದಿಗೂ ಆಕೆಯ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿಲ್ಲ. ರಂಗಭೂಮಿ ಕ್ಷೇತ್ರದಲ್ಲಿ ಮಾತ್ರವಲ್ಲದೇ ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆ ಕ್ರಮಿಸಬೇಕಾದ ದಾರಿ ಇನ್ನೂ ದೂರವಿದೆ ಎಂದರು.
ಹಿರಿಯ ಬರಹಗಾರ್ತಿ ವೈದೇಹಿ ಅವರ ಕಥೆ ಆಧರಿಸಿದ ದಾಳಿ ಕಿರುಚಿತ್ರವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ರಂಗಕರ್ಮಿ ನಯನ ಸೂಡಾ, ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಸಂದೇಶ್ ಜವಳಿ, ಹಿರಿಯ ರಂಗಕರ್ಮಿಗಳಾದ ವಿಜಯಲಕ್ಷ್ಮೀ, ರಂಗಾಯಣದ ವಿದ್ಯಾರ್ಥಿಗಳು, ವಿವಿಧ ಕಾಲೇಜುಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post