ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಜೀವವೈವಿಧ್ಯ ಮಂಡಳಿ ವತಿಯಿಂದ ಈಗಾಗಲೇ ಜಿಲ್ಲೆಯಕಾನುಅರಣ್ಯ ಪ್ರದೇಶಗಳ ಜೊತೆಗೆಜೀವವೈವಿಧ್ಯತೆಯ ಸಮತೋಲನಕ್ಕೆ ಪೂರಕವಾಗಿ ಅನೇಕ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಪರಿಸರತಜ್ಞರು, ಪರಿಸರಾಸಕ್ತರು ಕೈ ಜೋಡಿಸುವ ಮೂಲಕ ಪರಿಸರ ಜಾಗೃತಿಯತ್ತ ಗಮನಹರಿಸಬೇಕು ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತಹೆಗಡೆ ಅಶಿಸರ ಹೇಳಿದರು.
ಪಕ್ಷಿ ತಜ್ಞರ ತಂಡದೊಂದಿಗೆ ಶಿರಸಿಯ ಅಶಿಸರ ಕೈಲಾಸ ಗುಡ್ಡ ಸಮೀಪದಲ್ಲಿ ಪಕ್ಷಿವೀಕ್ಷಣೆ ಬಳಿಕ, ಬನವಾಸಿ ಗುಡ್ನಾಪುರಕೆರೆಯಲ್ಲಿ ತಂಗುವ ಪಕ್ಷಿ ವೀಕ್ಷಣೆ ನಡೆಸಿ ಸೊರಬ ತಾಲೂಕಿನ ಗುಡವಿಯಲ್ಲಿ ನಡೆದ ಶಿಬಿರವನ್ನುದ್ಧೇಶಿಸಿ ಅವರು ಮಾತನಾಡಿದರು.
ಪಕ್ಷಿ ತಜ್ಞ ಸುಹಾಸ ಹೆಗಡೆ ಮಾತನಾಡಿ, ರಾಜ್ಯದ ಬಹುದೊಡ್ಡ ವಿಸ್ತಾರವುಳ್ಳ ಗುಡವಿ ಪಕ್ಷಿಧಾಮಕ್ಕೆ ಪಕ್ಷಿತಜ್ಞರನ್ನು ಸೆಳೆವ ಮೂಲಕ ಇನ್ನಷ್ಟು ಅಭಿವೃದ್ಧಿಯಾಗಬೇಕು. ಅವುಗಳ ಸಂತಾನ ಪ್ರಕ್ರಿಯೆಗೆ ಇನ್ನಷ್ಟು ಸುಸ್ಥಿರ ಅವಕಾಶ ಮಾಡಿಕೊಡಬೇಕು ಎಂದರು.
ಜೀವವೈವಿಧ್ಯ ಅಧ್ಯಯನಕಾರ ಹೊಸಬಾಳೆ ಮಂಜುನಾಥ ಹೆಗಡೆ, ಇಕೋ ಟೂರಿಸಂ ಸ್ಪಾಟ್ ಆಗಬೇಕಾದ ಇಲ್ಲಿ ಆಗಾಗ್ಗೆ ನೀರಿನ ಗುಣಮಟ್ಟದ ಪರೀಕ್ಷೆ ಆಗಬೇಕು. ಪಕ್ಷಿಗಳು ಬತ್ತದ ಭೂಮಿಯನ್ನು ಹೆಚ್ಚು ಪ್ರೀತಿಸುತ್ತವೆ. ಅಲ್ಲಿನ ಕೀಟಗಳನ್ನು ತಮ್ಮ ಆಹಾರವನ್ನಾಗಿಸಿಕೊಂಡು ಬೆಳೆಯ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ರೈತನ ಮಿತ್ರವಾಗುತ್ತವೆ. ಈ ನಿಟ್ಟಿನಲ್ಲಿ ತಾಲೂಕಿನ ಚಂದ್ರಗುತ್ತಿ, ಕಸಬಾ, ಉಳವಿ, ಆನವಟ್ಟಿ ಹೋಬಳಿಗಳ ತರಿ ಜಮೀನಿನಲ್ಲಿ ಅತಿಯಾದ ರಾಸಾಯನಿಕ ಕೀಟನಾಶಕಗಳನ್ನು ಬಳಸದಂತೆ ಎಚ್ಚರವಹಿಸಬೇಕು. ಸುತ್ತಮತ್ತಲ ಜಲಾನಯನ ಪ್ರದೇಶಗಳಲ್ಲಿ ವಿಷಕಾರಕ ಅಂಶಗಳು ಸೇರದಂತೆ ನಿಗಾವಹಿಸಬೇಕಿದೆ ಎಂದರು.
ಶಿರಸಿ ಅರಣ್ಯ ಕಾಲೇಜು ಪ್ರಾಧ್ಯಾಪಕ ಶ್ರೀಧರ ಭಟ್ ಮಾತನಾಡಿ, ಪಕ್ಷಿ, ಉರಗತಜ್ಞ ಬಾಲಚಂದ್ರ ಸಾಯಿಮನೆ ಪಕ್ಷಿ ವಲಸೆ, ಅವುಗಳ ಚಲನವಲನ, ವಲಸೆ ಸಂದರ್ಭದಲ್ಲಿನ ಜಾಗೃತಿ, ಅವಶ್ಯ ಕಾರ್ಯಚಟುವಟಿಕೆ ಹಾಗೂ ಗುಡವಿಗೆ ಆಗಮಿಸುವ ವಿಶೇಷ ಪಕ್ಷಿ ಸಂಕುಲಗಳ ಕುರಿತಂತೆ ವಿಷಯ ಹಂಚಿಕೊಂಡರು.
ಪಕ್ಷಿಧಾಮದ ಅಭಿವೃದ್ಧಿ, ಇಕೋ ಡೆವಲಪ್‌ಮೆಂಟ್ ಕಮಿಟಿ, ಅಡ್ವೈಸಿಂಗ್ ಕಮಿಟಿ, ಮಂಗಗಳ ಉಪಟಳ, ಇನ್ನಷ್ಟು ವ್ಯವಸ್ಥಿತ ಅಧ್ಯಯನ ನಡೆಸುವ ಬಗ್ಗೆ, ಮುಖ್ಯಮಂತ್ರಿಗಳ ಬಳಿ ತೆರಳಲು ನಿಯೋಗವೊಂದನ್ನು ರಚಿಸುವ ಕುರಿತಂತೆ ಚರ್ಚೆ ನಡೆಯಿತು. ಚರ್ಚೆಯಲ್ಲಿ ಸೊರಬದ ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್. ಪಾಟೀಲ್, ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಪ್ರಧಾನ ಕಾರ್ಯದರ್ಶಿ ಸಿ.ಪಿ. ಈರೇಶಗೌಡ, ವೈದ್ಯ ಡಾ.ಜ್ಞಾನೇಶ್, ಮೋಹನ್ ಸುರಭಿ, ಹಾಲೇಶ್ ನವುಲೆ, ಕೃಷ್ಣಾನಂದ್, ಷಣ್ಮುಖಾಚಾರ್, ಮಂಜಪ್ಪ ಹುಲ್ತಿಕೊಪ್ಪ, ಸ್ಥಳೀಯ ಗ್ರಾಪಂ ಜೀವವೈವಿಧ್ಯ ಸಮಿತಿಯವರು ಇದ್ದರು.
ಗ್ರಾಮ ಪ್ರಮುಖರಾದ ನಾಗರಾಜಗೌಡ, ಯಂಕಪ್ಪ, ವೃಕ್ಷಲಕ್ಷ ಆಂದೋಲನದ ಗಣಪತಿ ಬಿಸಲಕೊಪ್ಪ, ವಿಶ್ವನಾಥ ಹೆಗಡೆ, ಸೋಂದಾ ರತ್ನಾಕರ್, ವನ್ಯಜೀವಿ ವಿಭಾಗದ ಎಸಿಎಫ್ ಶ್ರೀಧರನಾಯ್ಕ್, ಆರ್‌ಎಫ್‌ಒ ಪ್ರೀತಿ ನಾಯ್ಕ್, ಸೊರಬ ಅರಣ್ಯ ಇಲಾಖೆ ಎಸಿಎಫ್ ಪ್ರವೀಣ್ ಬಸ್ರೂರು, ಆರ್‌ಎಫ್‌ಒ ಪ್ರಭುರಾಜ ಪಾಟೀಲ್, ಆನವಟ್ಟಿ ರೇಂಜ್ ಆರ್‌ಎಫ್‌ಒ ಜಾವೀದ್ ಅಂಗಡಿ, ಡಿವೈಆರ್‌ಎಫ್‌ಒ ಮಂಜುನಾಥ್ ದೊಡ್ಡಮನಿ, ಅರಣ್ಯ ಇಲಾಖೆ ಡಿವೈಆರ್‌ಎಫ್‌ಒ ಯುವರಾಜ್, ಗಾರ್ಡ್ ಧನರಾಜ್, ಪಿಡಿಒ ರಾಜಶೇಖರ್, ವಾಚರ್ ರಾಮಪ್ಪ, ಇನ್ನೂ ಅನೇಕ ಅರಣ್ಯಅಧಿಕಾರಿ, ಸಿಬ್ಬಂದಿ ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post