ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿದ 8ನೇ ಬಜೆಟ್‌ಸಮ ಸಮಾಜದ ನಿರ್ಮಾಣಕ್ಕೆ ಸಮನ್ವಯದ ಬಜೆಟ್ ಆಗಿದ್ದು, ಬಹಳ ವಿಶೇಷವಾಗಿ ಜನ ಸಾಮಾನ್ಯರಿಗೆ ಹೊಸ ತೆರಿಗೆ ಹೊರೆಯಿಲ್ಲದ ಬಜೆಟ್ ಮಂಡಿಸಿದ್ದು ಕೊರೋನಾ ನಂತರದ ಸಂದರ್ಭದಲ್ಲಿ ಸಮಯೋಚಿತವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ವಿಶ್ವ ಮಹಿಳಾ ದಿನಾಚರಣೆಯಂದು ಮಹಿಳೆಯರ ಆರ್ಥಿಕ ಅಭಿವೃದ್ಧಿ, ಸುರಕ್ಷೆ, ಸಂರಕ್ಷಣೆ, ಸ್ವಸಹಾಯ ಮಂಡಳಿಗಳಿಗೆ ಧನ ಸಹಾಯ, ಆರೋಗ್ಯ ಸುಧಾರಣೆ, ಮಹಿಳಾ ನೌಕರರಿಗೆ ವಿಶೇಷ ಕೊಡುಗೆ ಮುಂತಾದ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಹಣ ಮೀಸಲಿಟ್ಟು, ಮಹಿಳಾ ಅಭ್ಯುದಯಕ್ಕೆ ನಾಂದಿ ಹಾಡಿದ್ದಾರೆ. ಕೃಷಿಕ್ಷೇತ್ರದಲ್ಲಿ ಎಪಿಎಂಸಿಗಳಲ್ಲಿ ಮಹಿಳಾ ಕೃಷಿಕರಿಗೆ ಶೇ.10ರಷ್ಟು ಮೀಸಲಾತಿ, ಎಪಿಎಂಸಿ ಮೂಲಕ ರೈತರು ನೇರ ಮಾರಾಟ ಮಾಡುವ ಅವಕಾಶ, ಕೆರೆ, ನದಿ ಇತ್ಯಾದಿ ಜಲಮೂಲಗಳ ಅಭಿವೃದ್ಧಿ, ಸಾವಯವ ಕೃಷಿಗೆ ಒತ್ತು, ಸಿರಿಧಾನ್ಯ ಮಾರಾಟ, ಯಂತ್ರೋಪಕರಣ ಖರೀದಿಗೆ ಸಹಾಯ, ಅಡಿಕೆ ಪರ್ಯಾಯ ಬೆಳೆಗೆ ಪ್ರೋತ್ಸಾಹಧನ, ಬೀಜ ಸಂಸ್ಕರಣಾ ಕೇಂದ್ರ, ಶಿಥಿಲೀಕರಣ ಘಟಕ ಮುಂತಾದ ಹಲವು ಯೋಜನೆಗಳ ಮೂಲಕ ಕೃಷಿ ಕ್ಷೇತ್ರಕ್ಕೆ ಒತ್ತು ನೀಡಿ ರೈತಪರವಾದ ಚಿಂತನೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಲಾನಯನ, ಜಲಮೂಲ ಅಭಿವೃದ್ಧಿ, ಏತ ನೀರಾವರಿ ಮುಂತಾದ ಯೋಜನೆಗಳ ಮಂಜುರಾತಿ ಹೀಗೆ ಹಲವಾರು ದಿಸೆಯಲ್ಲಿ ರೈತರಿಗೆ, ಮಹಿಳೆಯರಿಗೆ, ಕಾರ್ಮಿಕರ ಹಿತ ಕಾಪಾಡುವ, ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿ ಶಾಲಾಭಿವೃದ್ಧಿಗೆ ಪ್ರೋತ್ಸಾಹ ಹಾಗೂ ಮಕ್ಕಳ ಆರೋಗ್ಯ ವಿಷಯದಲ್ಲಿ ಸಮಗ್ರ ಆರೋಗ್ಯ ಕಳಕಳಿಗೆ ಅನುದಾನ, ಕಡಲ ತೀರದ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಮನ್ನಣೆ ನೀಡುವ ಬಜೆಜ್ ಮಂಡನೆ ಇದಾಗಿದೆ ಎಂದು ಹೇಳಿದ್ದಾರೆ.
ವಿಶೇಷವಾಗಿ ಶಿವಮೊಗ್ಗ ಜಿಲ್ಲೆಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಅನುದಾನ, ಹೊಸ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ, ಬಹುದಿನದ ಕನಸಾದ ಆಯುಶ್ ವಿಶ್ವವಿದ್ಯಾಲಯ ಸ್ಥಾಪನೆ, ಪಶುವೈದ್ಯಕೀಯ ಕಾಲೇಜಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ, ಶಿವಮೊಗ್ಗ-ಶಿಕಾರಿಪುರ-ಶಿರಾಳಕೊಪ್ಪ ರಸ್ತೆಯಲ್ಲಿ ವೈಜ್ಞಾನಿಕ ಸಂಚಾರ ನಿರ್ವಹಣಾ ವ್ಯವಸ್ಥೆ, ಕಾರ್ಮಿಕರ ವಸತಿಗಾಗಿ ತಾತ್ಕಾಲಿಕ ವಸತಿಗೃಹ ಸೌಲಭ್ಯ, ಮಲೆನಾಡಿನಲ್ಲಿ ಕಾಲುಸಂಕದ ನಿರ್ಮಾಣಕ್ಕೆ ಅನುದಾನ, ಗ್ರಾಮಬಂಧ ಸೇತುವೆಗಳ ನಿರ್ಮಾಣಕ್ಕೆ ಅನುದಾನ ನೀಡಿರುವುದು ಶ್ಲಾಘನೀಯ ಎಂದಿದ್ದಾರೆ.
ಕೊರೋನಾ ಹಾಗೂ ಅತಿವೃಷ್ಠಿಯ ಸಂಕಟಗಳ ಸವಾಲನ್ನೆದುರಿಸಿ ಸವಾಲುಗಳನ್ನೇ ಅವಕಾಶ ಮಾಡಿಕೊಂಡು, ಸಮ ಸಮಾಜದ ಚಿಂತನೆ, ಸಮಾಜದ ಎಲ್ಲಾ ವರ್ಗದ ಜನರಿಗೂ ಆರ್ಥಿಕವಾಗಿ, ನೆಮ್ಮದಿಯ ಜೀವನಕ್ಕೆ ಅವಕಾಶ ನೀಡಿ ಅತ್ಯಂತ ಸಮನ್ವಯದ ಬಜೆಟ್ ಮಂಡಿಸಿದ ರಾಜ್ಯದ ಮುಖ್ಯಮಂತ್ರಿಯವರಿಗೆ ಸಂಸದರು ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post