ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ರೆಮಿಡಿಸ್ವಿಯರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ಎಸ್ಪಿ ಅವರ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದ್ದು, ಅಂತಹ ಪ್ರಕರಣಗಳಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಸ್ತುತ ಸರ್ಕಾರಿ ಆಸ್ಪತ್ರೆಯಲ್ಲಿ 172 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 306 ರೆಮಿಡಿಸ್ವಿಯರ್ ಇಂಜೆಕ್ಷನ್ ಲಭ್ಯವಿದೆ. ಸದರಿ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಕಾಳಸಂತೆಯಲ್ಲಿ ಮಾರಾಟ ಪತ್ತೆ ಹಚ್ಚಲು ಸ್ಟಿಂಗ್ ಆಪರೇಷನ್ ಸಹ ನಡೆಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಆಕ್ಸಿಜನ್ ಬೇಡಿಕೆಯನ್ನು ಪೂರೈಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಮೆಗ್ಗಾನ್‍ನಲ್ಲಿ 20ಕೆಎಲ್ ಸೇರಿದಂತೆ ಒಟ್ಟು 51ಕೆಎಲ್ ಆಕ್ಸಿಜನ್ ಸಂಗ್ರಹಣಾ ಸಾಮಥ್ರ್ಯವಿದೆ. ಭದ್ರಾವತಿಯ ವಿಐಎಸ್‍ಎಲ್‍ನಲ್ಲಿ ಗರಿಷ್ಟ ಸಾಮಥ್ರ್ಯದೊಂದಿಗೆ ಆಕ್ಸಿಜನ್ ಉತ್ಪಾದಿಸಲಾಗುತ್ತಿದ್ದು, ನೆರೆಯ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ಸಹ ಇಲ್ಲಿಂದ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ಒಟ್ಟು 104 ವೆಂಟಿಲೇಟರ್‍ಗಳು ನಮ್ಮಲ್ಲಿ ಲಭ್ಯವಿದೆ. ತಾಲೂಕು ಆಸ್ಪತ್ರೆಗಳಲ್ಲಿರುವ ಕೆಲವು ವೆಂಟಿಲೇಟರ್‌ಗಳನ್ನು ಅವಶ್ಯಕತೆಗಳಿಗೆ ಅನುಗುಣವಾಗಿ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಶಿರಾಳಕೊಪ್ಪ ಮತ್ತು ಸೊರಬದಲ್ಲಿ ಒಂದೆರಡು ದಿನಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಸಿದ್ಧತೆ ಮಾಡಲಾಗಿದೆ. ಜಿಲ್ಲೆಯಲ್ಲಿ 10760 ಕೋವಿಶೀಲ್ಡ್ ಮತ್ತು 320 ಡೋಸ್ ಕೋವ್ಯಾಕ್ಸಿನ್ ಲಭ್ಯವಿದೆ. ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸಾರ್ವಜನಿಕರ ಸಹಕಾರದಿಂದಾಗಿ ಕೊರೋನಾ ಪಾಸಿಟಿವ್ ರೇಟ್ ಕಡಿಮೆಯಾಗಿದೆ. ಶೇ.45ಕ್ಕಿಂತ ಹೆಚ್ಚು ತಲುಪಿದ್ದ ಪಾಸಿಟಿವ್ ರೇಟ್ ಇದೀಗ ಶೇ.40ರ ಆಸುಪಾಸಿಗೆ ಬಂದಿದೆ. ಸಾರ್ವಜನಿಕರ ಸಹಕಾರದಿಂದ ಇದನ್ನು ಇನ್ನಷ್ಟು ಕಡಿಮೆ ಮಾಡಲು ಸಾಧ್ಯವಿದೆ ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news










Discussion about this post