ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೊಗಳೆಬಿಡಿ ಅಭಿವೃದ್ಧಿ ಕುರಿತಂತೆ ಶ್ವೇತಪತ್ರ ಹೊರಡಿಸಿ ಎಂದು ಸಚಿವ ಮಧುಬಂಗಾರಪ್ಪ #Minister Madhu Bangarappa ಅವರಿಗೆ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ #D S Arun ಸವಾಲು ಹಾಕಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಚಿವರಿಗೆ ತಾವೇ ಏನು ಮಾತನಾಡುತ್ತಿದ್ದೇವೆ ಎಂಬುದೇ ಅರಿವಿಲ್ಲ. ಅವರು ಕನ್ನಡದ ಶಬ್ಧಕೋಶವನ್ನೇ ಅರಿತಿಲ್ಲ. ಸಂಸ್ಕøತಿಯೂ ಗೊತ್ತಿಲ್ಲ. ಲೂಸು, ಅಪ್ಪನ ಮನೆಯಿಂದ ತರುತ್ತಾನಾ… ಎಂದೆಲ್ಲಾ ಕೀಳು ಮಟ್ಟದ ಭಾಷೆಯನ್ನು ಬಳಸುತ್ತಾರೆ. ಒಬ್ಬ ಶಿಕ್ಷಣ ಸಚಿವರಾಗಿ ಹೇಗೆ ಮಾತನಾಡಬೇಕೆಂಬ ಅರಿವೇ ಇವರಿಗಿಲ್ಲ. ಇಂತಹ ಶಿಕ್ಷಣ ಸಚಿವರಿಂದ ಮಕ್ಕಳು ಏನು ಕಲಿಯುತ್ತಾರೋ ಎಂದು ಛೇಡಿಸಿದರು.
ವಿರೋಧ ಪಕ್ಷಗಳು ಆರೋಪ ಮಾಡುವುದು ಸಹಜ. ಆ ಆರೋಪಗಳಿಗೆ ತಕ್ಕ ಉತ್ತರ ಕೊಡಬೇಕು. ಒಬ್ಬ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇವರೇನು ಜಿಲ್ಲೆಯ ಅಭಿವೃದ್ಧಿ ಮಾಡಿದ್ದಾರೆ ? ಸಂಸದ ರಾಘವೇಂದ್ರ ಅವರು ಅಭಿವೃದ್ದಿ ಮಾಡಿದ್ದು ಬೇಕಾದಷ್ಟು ಇದೆ. ಶಿವಮೊಗ್ಗ ಅಭಿವೃದ್ಧಿಯ ಬಗ್ಗೆ ಬೇಕಾದರೆ ನಮ್ಮೊಂದಿಗೆ ಚರ್ಚೆಗೆ ಬರಲಿ. ಯಾರ ಕಾಲದಲ್ಲಿ ಹೆಚ್ಚು ಅಭಿವೃದ್ಧಿಯಾಗಿದೆ ಎಂಬುದನ್ನು ನಾವು ಅವರಿಗೆ ಹೇಳುತ್ತೇವೆ. ಇವರು ಸಚಿವರಾದ ಮೇಲೆ ಜಿಲ್ಲೆಯಲ್ಲಿ ಒಂದು ರಸ್ತೆಯೂ ಆಗಿಲ್ಲ. ಬೇಕಾದರೆ ಏನು ಅಭಿವೃದ್ಧಿಯಾಗಿದೆ ಎಂದು ಶ್ವೇತಪತ್ರ ಹೊರಡಿಸಲಿ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ, #CM Siddaramaiah ಸಚಿವರಾದ ಪ್ರಿಯಾಂಕಖರ್ಗೆ, ಸಂತೋಷ್ ಲಾಡ್, ಮಧುಬಂಗಾರಪ್ಪ ಇವರಿಗೆ ಆರ್‍ಎಸ್‍ಎಸ್ ಬಗ್ಗೆ, ಪ್ರಧಾನಿ ಮೋದಿಯ ಬಗ್ಗೆ ಮಾತನಾಡುವುದು ಮಾತ್ರ ಗೊತ್ತು. ಅದರಲ್ಲೂ ಏಕವಚನದ ಮಾತುಗಳು. ಕೇಂದ್ರಕ್ಕೆ ಬೈಯ್ದರೆ ಇವರಿಗೆ ಹೇಗೆ ಅನುದಾನ ಸಿಕ್ಕುತ್ತದೆ. ಪ್ರಾಮಾಣಿಕವಾಗಿ ಕೇಳಿದರೆ ಕೇಂದ್ರ ಸರ್ಕಾರ ಹಣ ಕೊಟ್ಟೇ ಕೊಡುತ್ತದೆ. ಆದರೆ ಅದನ್ನು ಬಿಟ್ಟು ಹೀಯಾಳಿಸುವುದು, ಗೇಲಿಮಾಡುವುದು, ಪ್ರಧಾನಿ ಹಾಗೂ ಗೃಹಮಂತ್ರಿ ಎಂಬ ಅರಿವಿಲ್ಲದೆ ಮಾತನಾಡುವುದು ಮಾಡಿದರೆ ಕೇಂದ್ರ ಸರ್ಕಾರಕ್ಕೆ ರಾಜ್ಯಕ್ಕೆ ಹಣಕೊಡಲು ಮನಸ್ಸಾದರೂ ಹೇಗೆ ಬಂದೀತು ? ಅದಕ್ಕಾಗಿಯೇ ಹೇಳುವುದು ಡಬಲ್ ಇಂಜಿನ್ ಸರ್ಕಾರ ಬೇಕು ಎಂದು ಎಂದರು.
ಜಿಎಸ್‍ಟಿ ಬಗ್ಗೆ ಇವರು ಮಾತನಾಡುತ್ತಾರೆ. ಇವರಿಗೆ ಜಿಎಸ್‍ಟಿ ಕಡಿಮೆಯಾಗಿದ್ದು, ಅರಿವಿಗೆ ಬಂದಿರಲಿಕ್ಕಿಲ್ಲ. ಅದರಲ್ಲು ಮಧುಬಂಗಾರಪ್ಪ ಅವರಿಗೆ ಜಿಎಸ್‍ಟಿ ಬಗ್ಗೆ ಗೊತ್ತೇ ಇಲ್ಲ, ಒಬ್ಬ ಬಿ.ಕಾಂ. ವಿದ್ಯಾರ್ಥಿಯ ಜೊತೆ ಮಾತನಾಡಿ ತಿಳಿದುಕೊಳ್ಳಲಿ ಎಂದು ವ್ಯಂಗ್ಯವಾಡಿದ ಅವರು, ಜಿಎಸ್‍ಟಿ, ಫುಡ್ ಸೆಕ್ಯುರಿಟಿ ಆ್ಯಕ್ಟ್, ಆಧಾರ್‍ಕಾರ್ಡ್ ಇವೆಲ್ಲವೂ ಕಾಂಗ್ರೆಸ್‍ನವೇ ಅವರೇ ಇವುಗಳನ್ನು ಜಾರಿಗೆ ತರಲು ಹೇಳಿದ್ದು. ಆದರೆ ಅವರು ಮಾಡಲಿಲ್ಲ. ಅವರ ಕೈಯಲ್ಲಿ ಆಗದಿದ್ದದ್ದನ್ನು ನಾವು ಮಾಡಿ ತೋರಿಸಿದ್ದೇವೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಕುರಿತಂತೆ ನೇರವಾಗಿ ಸಂಸದರಾದ ಆಯ್ಕೆಯಾಗಿದ್ದಾರೆ ಎಂಬ ಟೀಕೆಯನ್ನು ಮಧುಬಂಗಾರಪ್ಪ ಮಾಡುತ್ತಾರೆ. ಆದರೆ ಅವರಿಗೆ ನೆನಪಿರಲಿ ರಾಘವೇಂದ್ರ ಅವರು ಒಬ್ಬ ಪುರಸಭೆಯ ಮೆಂಬರ್ ಆಗಿ ಈ ಮಟ್ಟಕ್ಕೆ ಬಂದಿದ್ದಾರೆ. ಬಿಜೆಪಿಯ ಮತ್ತೊಬ್ಬ ಮುಖಂಡ ಕೋಟಾ ಶ್ರೀನಿವಾಸ ಪೂಜಾರಿಯವರು ಗ್ರಾ.ಪಂ.ಯಿಂದ ಬಂದವರು. ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶವಿದೆ ಎಂಬ ಸರಳ ಸತ್ಯವೂ ಮಧು ಬಂಗಾರಪ್ಪನವರಿಗೆ ಗೊತ್ತಿಲ್ಲ ಎಂದರು.
ಚುನಾವಣೆಯ ಸಂದರ್ಭದಲ್ಲಿ ಪೊಲೀಸ್ ಜೀಪಿನಲ್ಲಿ ಆ್ಯಂಬುಲೆನ್ಸ್‍ನಲ್ಲಿ ಹಣ ಸಾಗಿಸಿದ್ದಾರೆ ಎಂದು ಆರೋಪ ಮಾಡುವ ಮುನ್ನ ಇವರು ಸರಿಯಾಗಿ ತಿಳಿದುಕೊಳ್ಳಲಿ. ಅವರು ಗೆದ್ದಾಗ ಇವರದೇ ಆಡಳಿತ ಇತ್ತಲ್ಲವೇ ? ಆಗ ಏಕೆ ಸುಮ್ಮನಿದ್ದರು. ಈಗ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇಂತಹ ಮಾತುಗಳನ್ನೆಲ್ಲಾ ಬಿಡಬೇಕು. ಎಲ್ಲರೂ ಒಟ್ಟಾಗಿ ಅಭಿವೃದ್ಧಿಯತ್ತ ಸಾಗಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ವಿ. ಅಣ್ಣಪ್ಪ, ಚಂದ್ರಶೇಖರ್, ಮಾಲತೇಶ್, ಪ್ರಶಾಂತ್ ಪಂಡಿತ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post