ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯುವ ಸಮೂಹ ಶಿಕ್ಷಣದ ಜೊತೆಗೆ ಮೌಲ್ಯಯುತ ಚಿಂತನೆಗಳನ್ನು ಗಟ್ಟಿಗೊಳಿಸಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣ ರಾವ್ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿ ಕಛೇರಿಯ ಸಭಾಂಗಣದಲ್ಲಿ ಎನ್‌ಇಎಸ್ ಎಜುಕೇಷನ್ ಅಸಿಸ್ಟೆಂಟ್ ಟ್ರಸ್ಟ್ ವತಿಯಿಂದ ಬುಧವಾರ ಸಂಜೆ ಏರ್ಪಡಿಸಿದ್ದ ವಿವಿಧ ವಿದ್ಯಾಸಂಸ್ಥೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದುಕಿನ ಉನ್ನತಿಗೆ ಲಭ್ಯವಾಗುವ ಎಲ್ಲಾ ಉನ್ನತ ಅವಕಾಶಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಿ. ಇದರ ಜೊತೆಯಲ್ಲಿ ಸಮಾಜದ ಸಹಕಾರವನ್ನು ಸದಾ ನೆನಪಿನಲ್ಲಿಡಿ. ಸಮಾಜದ ಋಣವನ್ನು ತೀರಿಸುವ ಮನೋಭಾವ ಯುವ ಸಮೂಹ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಕೈಗೆಟುಕುವ ದರದಲ್ಲಿ ಶಿಕ್ಷಣ ಸಿಗಬೇಕು ಎಂಬ ಮೂಲ ಉದ್ದೇಶದೊಂದಿಗೆ ಎನ್ಇಎಸ್ ಸಂಸ್ಥೆ ಸ್ಥಾಪಿಸಲಾಗಿದೆ. ಕಲಿಕೆಯ ಸಂದರ್ಭದಲ್ಲಿ ಎದುರಾಗುವ ಆರ್ಥಿಕ ಸಂಕಷ್ಟಗಳು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕಾಗಬಾರದೆಂಬ ಕಾಳಜಿಯಿಂದ ಎನ್ಇಎಸ್ ಎಜುಕೇಷನ್ ಅಸಿಸ್ಟೆಂಟ್ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ.
ಸಂಸ್ಥೆಗೆ ದಾಖಲಾತಿಯ ವೇಳೆಯಲ್ಲಿ ಪೋಷಕರಿಗಿರುವ ಆರ್ಥಿಕ ಅನಾನುಕೂಲತೆಗಳನ್ನು ಅರಿತು ಪ್ರಾಂಶುಪಾಲರೊಂದಿಗೆ ಚರ್ಚಿಸಿ ಅಗತ್ಯ ಸಹಾಯಧನ ನೀಡಲಾಗುತ್ತಿದೆ. ಈ ಮೂಲಕ ಉತ್ತಮ ಅಧ್ಯಯನ, ಫಲಿತಾಂಶ ಮತ್ತು ಸಾಧನೆಗೆ ಪೂರಕ ವೇದಿಕೆಯಾಗಿ ನಿಂತಿದೆ. ಇದರ ಲಾಭಾಂಶ ಪಡೆದ ವಿದ್ಯಾರ್ಥಿಗಳು, ಉನ್ನತ ಸ್ಥಾನ ತಲುಪಿದ ನಂತರ ಭವಿಷ್ಯದಲ್ಲಿ ತಮ್ಮಂತಹ ಇತರೆ ವಿದ್ಯಾರ್ಥಿಗಳಿಗೂ ಸಹಾಯ ಮಾಡುವಂತಹ ಸಮಾಜಮುಖಿ ಕಾಳಜಿ ಬೆಳೆಸಿಕೊಳ್ಳಿ ಎಂದು ಹೇಳಿದರು.
ಎನ್‌ಇಎಸ್ ಎಜುಕೇಷನ್ ಅಸಿಸ್ಟೆಂಟ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮಾತನಾಡಿ, ಸಂಸ್ಥೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲಕರವಾಗುವಂತೆ, ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಈ ಸಾಲಿನಲ್ಲಿ 462 ವಿದ್ಯಾರ್ಥಿಗಳಿಗೆ ಸುಮಾರು 26 ಲಕ್ಷ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಆಶಯ ನಮ್ಮದಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಹೆಚ್.ಸಿ.ಶಿವಕುಮಾರ್, ಮಧುರಾವ್, ಡಿ.ಎಸ್.ಅರುಣ್, ಅನಂತದತ್ತ, ಎಂ.ಆರ್.ಸೀತಾಲಕ್ಷ್ಮೀ, ಜಿ.ಎನ್.ಸುಧೀರ್, ಕುಲಸಚಿವರಾದ ಪ್ರೊ.ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ, ಲೆಕ್ಕಪತ್ರ ವಿಭಾಗದ ವ್ಯವಸ್ಥಾಪಕ ಕಿಶನ್.ಎನ್, ಸಂಜಯ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















