ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಮಾಜಿಕ ಜಾಲತಾಣವೆಂಬ ಅಂಧತ್ವಕ್ಕೆ ಸಿಲುಕಿ ಅಮೂಲ್ಯವಾದ ಬದುಕಿನ ವ್ಯರ್ಥ ಕಾಲಹರಣ ಮಾಡದಿರಿ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ವಿ.ಗೀತಾ ಹೇಳಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ವತಿಯಿಂದ ಸೋಮವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಮಗ್ರ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ನಮ್ಮ ನಡುವೆ ಇರುವ ಧೀಮಂತ ವ್ಯಕ್ತಿತ್ವಗಳಿಂದ ಪ್ರೇರಣೆ ಪಡೆಯಿರಿ. ಲಭ್ಯವಿರುವ ಸೌಲಭ್ಯ ಮತ್ತು ವ್ಯವಸ್ಥೆಗಳನ್ನು ಜವಾಬ್ದಾರಿಯುತವಾಗಿ ಬಳಸಿ. ಬದುಕೆಂಬುದು ಸವಾಲುಗಳ ದುರ್ಗಮ ಹಾದಿ. ಅಂತಹ ಹಾದಿಯಲ್ಲಿ ಕ್ರಮಿಸುವ ಜೀವನಾಧಾರಿತ ಕೌಶಲ್ಯತೆಗಳನ್ನು ಪಡೆಯಲು ಪ್ರಯತ್ನಿಸಿ. ಅಂಧತ್ವದ ಆಕರ್ಷಣೆಗಳು ಎಂದಿಗೂ ನಿಮ್ಮನ್ನು ಭಾದಿಸದಿರಲಿ. ಪ್ರತಿ ದಿನ ಪತ್ರಿಕೆಗಳನ್ನು ಓದುವುದನ್ನು ರೂಡಿಸಿಕೊಳ್ಳಿ. ಅದು ನಿಮಗೆ ವಾಸ್ತವತೆಯ ಅರಿವನ್ನು ಪಡೆಯಲು ಸಾಧ್ಯ ಮಾಡಿಕೊಡಲಿದೆ ಎಂದು ಹೇಳಿದರು.

ಇಂದು ಕಾಲೇಜು ಮತ್ತು ಮನೆಯ ವಾತಾವರಣವನ್ನು ಸಂಪೂರ್ಣವಾಗಿ ಮೊಬೈಲ್ ಆವರಿಸಿದೆ. ಕೇವಲ ವಿದ್ಯೆಯಿಂದ ಯಶಸ್ಸು ಸಾಧ್ಯವಿಲ್ಲ. ವ್ಯಕ್ತಿತ್ವ ವಿಕಸನಗೊಂಡಾಗ ಮಾತ್ರ ಯಶಸ್ಸು ಸಿದ್ದಿ. ಎಲ್ಲರಲ್ಲೂ ಕ್ರಿಯಾಶೀಲ ಪ್ರತಿಭೆಗಳಿವೆ. ಅಂತಹ ಕ್ರಿಯಾಶೀಲತೆಯ ಬೆಳವಣಿಗೆ ಸಾಧ್ಯವಾಗುವುದು ಪಠ್ಯೇತರ ಚಟುವಟಿಕೆಯಿಂದ. ಸರ್ವಾಂಗೀಣ ಅಭಿವೃದ್ಧಿಗಾಗಿ ಸಮಗ್ರ ಸೃಜನಶೀಲತೆಯನ್ನು ಬಳಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮಮತಾ.ಪಿ.ಆರ್ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಮಂಜುನಾಥ. ಎನ್, ನಿರ್ವಹಣಾಶಾಸ್ತ್ರ ವಿಭಾಗ ಮುಖ್ಯಸ್ಥ ಶ್ರೀಲಲಿತ, ಬಿ.ಎನ್.ಪ್ರವೀಣ್, ಸೌಪರ್ಣಿಕಾ, ಡಾ.ಫ್ರಾನ್ಸಿಸ್, ಸಂತೋಷ್ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
 
	    	




 Loading ...
 Loading ... 
							



 
                
Discussion about this post