ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ಭ್ರಷ್ಟಾಚಾರ, ಸ್ವಜನಪಕ್ಷಪಾತ, ವರ್ಗ-ಜಾತಿಗಳ ತಾರತಮ್ಯ ಮತ್ತು ಪಾಕೃತಿಕ ವಿಕೋಪಗಳ ಸಂದಿಗ್ಧಗಳನ್ನು ಎದುರಿಸಲು ಯುವಸಮುದಾಯದಿಂದ ಮಾತ್ರ ಸಾಧ್ಯ ಎಂದು ವಿವಿಯ ಸಿಂಡಿಕೇಟ್ ಸದಸ್ಯ ಜಿ. ಧರ್ಮಪ್ರಸಾದ್ ಆಭಿಪ್ರಾಯಪಟ್ಟರು.
ಕುವೆಂಪು ವಿವಿಯ ಆವರಣದಲಿ ರಂಭಾಪುರಿ ಕಲಾ ಮತ್ತು ವಾಣಿಜ್ಯ ಕಾಲೇಜು ವಿವಿಯ ಬಸವ ಸಭಾ ಭವನದಲ್ಲಿ ಆಯೋಜಿಸಿದ್ದ 2020-21ನೇ ಸಾಲಿನ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ, ಯುವ ರೆಡ್ ಕ್ರಾಸ್ ಘಟಕ, ಕ್ರೀಡಾ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಇಂದಿನ ಘಟನಾವಳಿಗಳೇ ನಾಳಿನ ಇತಿಹಾಸವಾಗಿರುತ್ತದೆ. ರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಪ್ರಸ್ತುತ ದಿನಮಾನಗಳ ಘಟನಾವಳಿಗಳ ಅರಿವಿರುವ ಇಂದಿನ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ. ಇದಕ್ಕಾಗಿ ವಿಭಿನ್ನ ಆಲೋಚನೆ, ವಿವೇಕ ಮತ್ತು ವಿವೇಚನೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಈ ಮೂಲಕ ಇಂದಿನ ವಿದ್ಯಾರ್ಥಿಗಳೇ ಇಂದಿನ ನೈಜ ಪ್ರಜೆಗಳು ಎಂಬುದನ್ನು ನಿರೂಪಿಸಬೇಕು ಎಂದು ಅವರು ಸಲಹೆ ನೀಡಿದರು.
ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ಕೇವಲ ಸಮಾಜದ ಅಭಿವೃದ್ಧಿಗಾಗಿ ಇರುವ ಯೋಜನೆಯಲ್ಲ. ಅದರಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗೆ ಶ್ರಮದಾನ, ರಾಷ್ಟ್ರೀಯ ಐಕ್ಯತೆ, ವಿವಿಧ ಸಂಸ್ಕೃತಿ, ಕಲಾ ಚಟುವಟಿಕೆಗಳನ್ನು ಪರಿಚಯಿಸುತ್ತದೆ. ವಿದ್ಯಾರ್ಥಿಯೊಬ್ಬನ ಸರ್ವತೋಮುಖ ಅಭಿವೃದ್ಧಿಗೆ ಈ ಯೋಜನೆ ಸಹಕಾರಿ. ಕಾಲೇಜಿನ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಪ್ರತಿಯೊಬ್ಬರು ಸರ್ವಾಂಗೀಣ ಮುನ್ನಡೆ ಪಡೆಯಬೇಕು ಆ ಮೂಲಕ ದೇಶದ ಅಭಿವೃದ್ಧಿಗೆ ಕಾರಣವಾಗಬೇಕು ಎಂದರು.
ವಿವಿಯ ಸಿಂಡಿಕೇಟ್ ಸದಸ್ಯರಾದ ಡಾ. ಕಿರಣ ದೇಸಾಯಿ, ರಾಮಲಿಂಗಪ್ಪ, ನಾಗರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಡಾ. ಜಿ.ಕೆ. ನಾಗರಾಜ ರಾವ್, ವಿವಿಯ ಎನ್‌ಎಸ್‌ಎಸ್‌ನ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ, ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post