ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾನಸ ಶಿಕ್ಷಣ ಸಂಸ್ಥೆಗಳು ಬಹಳ ಪ್ರಮುಖ ಕೆಲಸ ಕಾರ್ಯಗಳನ್ನು ನಡೆಸುತ್ತಿವೆ. ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿ ರೂಪಿಸುತ್ತಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯವಾದುದು ಎಂದು ಪ್ರಿಯದರ್ಶಿನಿ ಶಿಕ್ಷಣ ಸಂಸ್ಥೆ ಹಾಗೂ ಆರ್ಯ ಪದವಿ ಪೂರ್ವ ಕಾಲೇಜಿನ ನಿರ್ದೇಶಕರಾದ ರಮೇಶ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಾನಸ ಟ್ರಸ್ಟ್ ನ ಕಟೀಲ ಅಶೋಕ್ ಪೈ ಸ್ಮಾರಕ ಸಮೂಹ ಸಂಸ್ಥೆಗಳ ವಾರ್ಷಿಕೋತ್ಸವ ಹಾಗೂ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಶಿವಮೊಗ್ಗ ನಗರಕ್ಕೆ ಕೀರ್ತಿ ತಂದಿರುವ ಆದಿಚುಂಚನಗಿರಿ ಪ್ರೌಢಶಾಲೆಯ ಸಹಿಷ್ಣು ಹಾಗೂ ಪ್ರಾಂಶುಪಾಲರಾದ ದಿವ್ಯ, ರಾಮಕೃಷ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ನಿತ್ಯ ಹಾಗೂ ಪ್ರಾಂಶುಪಾಲರಾದ ರೀತೇಶ್ ಮತ್ತು ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾದ ನಮನ ಹಾಗೂ ಪ್ರಾಂಶುಪಾಲರಾದ ಶ್ರೀಮತಿ ಸುನಿತಾ ದೇವಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಪೂರಕ ಆರೋಗ್ಯ ಸಂಸ್ಥೆಯ ವಿದ್ಯಾರ್ಥಿನಿಯರಾದ ಮಯೂರಿ ಮೇಟಿ, ಸಂಧಿಯ , ನಸುರೀನ್. ಹರ್ಷಿತ ಹಾಗೂ ರಾಜಲಕ್ಷ್ಮಿ ಎಂಬ ಐವರು ವಿದ್ಯಾರ್ಥಿಗಳನ್ನು ರಾಜ್ಯಮಟ್ಟದ ರಾಂಕ್ ಪಡೆದಿರುವುದಕ್ಕೆ ಸನ್ಮಾನಿಸಲಾಯಿತು.
ಕಾಲೇಜಿಗೆ ರಾಜ್ಯಮಟ್ಟದಲ್ಲಿ ಎಂಎಸ್‌ಸಿ ಕ್ಲಿನಿಕಲ್ ಸೈಕಾಲಜಿಯಲ್ಲಿ ಪ್ರಥಮ ರ್‍ಯಾಂಕ್ ಬಂದಿರುವುದಲ್ಲದೆ ಒಟ್ಟು ಐದು ರ್‍ಯಾಂಕ್‌ಗಳು ಬಂದಿದೆ ಎಂಬುದನ್ನು ಪ್ರಾಂಶುಪಾಲರು ತಿಳಿಸಿದರು.

ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಶುಭ ಮರವಂತೆ ಅವರು ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪುಸ್ತಕ ಪ್ರೀತಿ ಮತ್ತು ಜನಸೇವೆಯ ಅಭಿಮಾನ ಇವೆರಡನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂಬ ಕಿವಿ ಮಾತನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾನಸ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರು ನಿರ್ದೇಶಕರು ಆಗಿರುವ ಡಾ. ರಾಜೇಂದ್ರ ಚೆನ್ನಿ ಉಪಸ್ಥಿತರಿದ್ದರು.
ಕಟೀಲ್ ಅಶೋಕ್ ಪೈ ಸ್ಮಾರಕ ನರ್ಸಿಂಗ್ ಸಂಸ್ಥೆಯ ಪ್ರಾಂಶುಪಾಲರಾದ ಡಾಕ್ಟರ್ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಸಂಧ್ಯಾ ಹಾಗೂ ಅಜಯ್ ನಿರ್ವಹಿಸಿದರು. ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನು ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ನಡೆಸಿದರು. ಅವರು ಕಾಲೇಜು 2017ರಲ್ಲಿ ಪ್ರಾರಂಭವಾಗಿ ಶೈಕ್ಷಣಿಕವಾಗಿ ಹಾಗೂ ಪಠ್ಯೇತರವಾಗಿ ಗುರುತಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಉತ್ತಮ ಗುಣಮಟ್ಟದ ಶಿಕ್ಷಣಗಳನ್ನು ನೀಡುತ್ತಿರುವ ಈ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಬಿಎ ,ಬಿಎಸ್ಸಿ, ಬಿ ಎಸ್ ಡಬ್ಲ್ಯೂ, ಬಿಕಾಂ, ಎಂ ಎಸ್ ಸಿ ಸೈಕಾಲಜಿ ,ಕ್ಲೀನಿಕಲ್ ಸೈಕಾಲಜಿ ,ಬಿ ಎಸ್ ಸಿ ನರ್ಸಿಂಗ್ ಇತ್ಯಾದಿ ಕೋರ್ಸ್ಗಳು ಲಭ್ಯವಿದೆ .ಇದಲ್ಲದೆ ಈ ವರ್ಷ 2024_ 25 ನೇ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾಲಯ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿಗೆ ಮನ: ಶಾಸ್ತ್ರದಲ್ಲಿ ಸಂಶೋಧನಾ ಕೇಂದ್ರವೆಂಬ ಮಾನ್ಯತೆಯನ್ನು ನೀಡಿರುವುದಾಗಿ ಅವರು ತಿಳಿಸಿದರು. ಕಾಲೇಜು ನಡೆದು ಬಂದ ದಾರಿಯಲ್ಲಿ ಈ ಒಂಬತ್ತನೇ ವರ್ಷದ ವಾರ್ಷಿಕೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೇವೆ.ಎಂದು ಅವರು ತಿಳಿಸಿದರು.
ವೇದಿಕೆಯ ಕಾರ್ಯಕ್ರಮದ ನಂತರ ವಿವಿಧ ಮನೋರಂಜನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಚೆಂಡೆ ವಾದನ,ಜನಪದ ನೃತ್ಯ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನೀಡಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಐಕ್ಯುಎಸಿ ಸಂಯೋಜಕರಾದ ಡಾಕ್ಟರ್ ಅರ್ಚನಾ ಭಟ್ ನೆರವೇರಿಸಿದರು.
ಪ್ರಶಸ್ತಿ ಪ್ರದಾನ ಮತ್ತು ಬಹುಮಾನ ವಿತರಣೆ ಯನ್ನು ಉಪನ್ಯಾಸಕರಾದ ರೇಷ್ಮಾ, ಮಂಜುನಾಥ ಸ್ವಾಮಿ ಹಾಗೂ ರಾಯಪ್ಪ ನಿರ್ವಹಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹನಿ ಕುರುವರಿಯವರು ನಿರ್ವಹಿಸಿದರು.

ಅವರು ಶೈಕ್ಷಣಿಕವಾಗಿ ಪಠ್ಯೇತರವಾಗಿ ಇಂದು ಮಾನಸ ಸಂಸ್ಥೆಯ ಹೆಸರನ್ನು ಪ್ರಸಿದ್ಧಿಗೆ ತಂದಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ ಈ ಸಂಸ್ಥೆಗಳಿಗೆ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡುತ್ತಿರುವ ಎಲ್ಲಾ ಪೋಷಕರನ್ನು ಕೃತಜ್ಞತೆಯಿಂದ ಸ್ಮರಿಸಿದರು. ಅವರು ಡಾ ಅಶೋಕ ಪೈರವರ ದೃಷ್ಟಿಕೋನ ದಂತೆ ಎಲ್ಲ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದು ಸಂತೋಷ ತಂದಿದೆ ಹಾಗೂ ಸಾರ್ಥಕ ಭಾವವನ್ನು ಮೂಡಿಸುತ್ತಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಂಡು ತಮ್ಮ ಭವಿಷ್ಯದಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post