ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾವು ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಸಚಿವರಾಗಿ ಅಧಿಕಾರ ವಹಿಸಿಕೊಂಡ 2ವರ್ಷ 4 ತಿಂಗಳಲ್ಲಿ ಶಿಕ್ಷಣದಲ್ಲಿ ಸಮಾನತೆ ಮತ್ತು ಗುಣಮಟ್ಟ ಸಾಧಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಎಸ್. ಮಧುಬಂಗಾರಪ್ಪ ತಿಳಿಸಿದರು.
ಅವರು ಇಂದು ಪತ್ರಿಕಾ ಭವನದಲ್ಲಿ ಮಾಧ್ಯಮದವರೊಡನೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದ ಸಂದರ್ಭದಲ್ಲಿ ಎಲ್ಲಾ ಇಲಾಖೆಗಳಿಗಿಂತ ಹೆಚ್ಚು ಸಮಸ್ಯೆಗಳುಳ್ಳ ಇಲಾಖೆಯನ್ನೇ ಪಕ್ಷದ ಮುಖಂಡರು ನನಗೆ ನೀಡಿ ದೊಡ್ಡ ಜವಾಬ್ದಾರಿ ವಹಿಸಿದ್ದರು. ಅದನ್ನು ಅತ್ಯಂತ ನಿಷ್ಠೆ ಮತ್ತು ಗೌರವದಿಂದ ನಿಭಾಯಿಸಿದ್ದೇನೆ. ನಮ್ಮ ತಂದೆ ಎಸ್. ಬಂಗಾರಪ್ಪನವರೇ ನನಗೆ ಗುರುವಾಗಿದ್ದರು. ಅವರ ಜೊತೆಯಲ್ಲಿ ಬಹಳ ಕಾಲ ರಾಜಕೀಯದಲ್ಲಿ ಕೆಲಸ ಮಾಡಿದ್ದರಿಂದ ಸ್ವಾಭಾವಿಕವಾಗಿಯೇ ಯಾವುದೇ ಸವಾಲನ್ನು ಸ್ವೀಕರಿಸುವ ಗುಣ ನನ್ನಲ್ಲಿ ಬಂದಿದೆ. ಇದರ ಪರಿಣಾಮ ಸಮಸ್ಯೆಗಳ ಗೂಡಾಗಿರುವ ಶಿಕ್ಷಣ ಇಲಾಖೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ತಾವು ಇಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇನೆಂಬ ನಿರೀಕ್ಷೆಯನ್ನು ಜನರಾಗಲಿ, ಪಕ್ಷದಲ್ಲಿ ಕೆಲವು ಮುಖಂಡರಾಗಲಿ ಮಾಡಿರಲಿಲ್ಲ. ಇದೊಂದು ದೊಡ್ಡ ಇಲಾಖೆ, ಸವಾಲಿನ ಮತ್ತು ಜವಾಬ್ದಾರಿಯ ಇಲಾಖೆ. ಈ ಇಲಾಖೆಯಡಿ ರಾಜ್ಯದಲ್ಲಿ 46 ಸಾವಿರ ಶಾಲೆಗಳು ಬರುತ್ತವೆ. ಇಲಾಖೆಯಲ್ಲಿನ ಶೇ.70ರಷ್ಟು ಸಮಸ್ಯೆಗಳನ್ನು ಬಗೆಹರಿಸಿದ ತೃಪ್ತಿ ನನಗಿದೆ. ಇಂದಿನ ಜಾತಿ, ಧರ್ಮ, ವ್ಯವಸ್ಥೆಯನ್ನು ಮೀರಿ ಇಲಾಖೆಯಲ್ಲಿ ಸುಧಾರಣೆಗಳನ್ನು ತಂದಿದ್ದೇನೆ. ಮಕ್ಕಳು ಹೂಗಳಿದ್ದಂತೆ ಅವುಗಳನ್ನು ಬಾಡದೇ ಇರುವಂತೆ ನೋಡಿಕೊಳ್ಳುವುದು ನನ್ನ ಇಲಾಖೆಯ ಜವಾಬ್ದಾರಿಯಾಗಿದೆ ಎಂದರು.
ತಾವು ಅಧಿಕಾರಿವಹಿಸಿಕೊಂಡ ಕೇವಲ 11 ತಿಂಗಳಲ್ಲಿ 13,500 ಶಿಕ್ಷಕರ ನೇಮಕಾತಿ ಮಾಡಿದ್ದೇನೆ. ಇನ್ನೂ 18,000 ಶಿಕ್ಷಕರ ನೇಮಕಾತಿಗೆ ಪ್ರಕ್ರಿಯೆಗಳು ಆರಂಭವಾಗಿವೆ. ಒಂದು ಸರ್ಕಾರಿ ಶಾಲೆಯಲ್ಲಿ ಕೇವಲ 1 ಮಗುವಿದ್ದರೂ ಅದನ್ನು ಮುಚ್ಚುವ ಪ್ರಸ್ತಾಪವನ್ನು ನಾನು ಮಾಡಿಲ್ಲ. ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುವುದೇ ನನ್ನ ಇಲಾಖೆಯ ಪ್ರಮುಖ ಉದ್ದೇಶ ಎಂದು ಭಾವಿಸಿದ್ದೇನೆ. ಮಕ್ಕಳಲ್ಲಿ ಸಾಮರ್ಥ್ಯ ವೃದ್ಧಿಸಲು ಮೂರು ಪರೀಕ್ಷಾ ಪದ್ಧತಿಯನ್ನು ಜಾರಿಗೆ ತಂದಿದ್ದಲ್ಲದೆ ವೆಬ್‍ಕಾಸ್ಟ್ ಮೂಲಕ ನಕಲು ತಡೆಗೆ ಮುಂದಾಗಿದ್ದೇನೆ. ಇದು ಶಾಲಾ ಶಿಕ್ಷಣ ಪದ್ಧತಿಯಲ್ಲಿ ಮಹತ್ವಪೂರ್ಣ ಬದಲಾವಣೆಗೆ ಮುನ್ನುಡಿ ಬರೆದಿದೆ ಎಂದರು.
ಬರುವ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ವಾರಕ್ಕೆ ಒಂದು ಅವಧಿ ನೈತಿಕ ಶಿಕ್ಷಣ ಜಾರಿಗೆ ತರುವ ಆಲೋಚನೆ ಇದೆ. ಮುಂದಿನ ವರ್ಷದೊಳಗೆ ತೀರ್ಥಹಳ್ಳಿಯಲ್ಲಿ ವಿಶೇಷ ಚೇತನರಿಗೆ ವಸತಿಶಾಲೆ ಸ್ಥಾಪಿಸುವ ಯೋಜನೆ ಇದೆ. ಅಲ್ಲದೆ ಇಲಾಖೆಯ ಮೂಲಕ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಬೆಂಗಳೂರಿನಲ್ಲಿ ಕಿದ್ವಾಯ್ ಆಸ್ಪತ್ರೆ ಸಮೀಪ ಉಚಿತ ಚಿಕಿತ್ಸೆ ಸಹಿತ 1 ರಿಂದ 10ನೇ ತರಗತಿ ಮಕ್ಕಳಿಗೆ ವಸತಿ ಶಾಲೆ ಸ್ಥಾಪಿಸುವ ಯೋಜನೆ ಇದೆ. ಇದಕ್ಕೆ ಸಂಬಂಧಿಸಿದಂತೆ ಇನ್‍ಫೋಸೀಸ್ ಮುಖ್ಯಸ್ಥೆ ಸುಧಾಮೂರ್ತಿಯವರೊಡನೆ ಚರ್ಚಿಸಲಾಗಿದೆ.
ಇಲ್ಲಿಯವರೆಗೆ ರಾಜ್ಯದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಇದ್ದ 500 ಕೆಪಿಎಸ್ ಶಾಲೆಗಳ ಜೊತೆಯಲ್ಲಿ ಇನ್ನೂ 300 ಕೆಪಿಎಸ್ ಶಾಲೆ ಆರಂಭಿಸಲಾಗುವುದು. ಶಿವಮೊಗ್ಗ ಜಿಲ್ಲೆಯಲ್ಲಿಯೇ ಇನ್ನೂ ಹೆಚ್ಚುವರಿಯಾಗಿ 13 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು ಎಂದ ಅವರು, ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
1995ರ ವರೆಗೆ ಆರಂಭಿಸಲಾದ ಶಾಲೆಗಳಿಗೆ ಸರ್ಕಾರ ಅನುದಾನ ನೀಡಿದ್ದು, ಇದನ್ನು 2005ರ ವರೆಗೆ ಆರಂಭಿಸಲಾದ ಶಾಲೆಗಳಿಗೂ ವಿಸ್ತರಿಸಲಾಗುವುದು. ವೃಕ್ಷೋತ್ಥಾನ ಹೆರಿಟೇಜ್ ರನ್ ಎಂಬ ಸಂಸ್ಥೆಗೆ ಪಿಯು ಕಾಲೇಜಿನ ಪ್ರತೀ ವಿದ್ಯಾರ್ಥಿಯಿಂದ 500 ರೂ. ಶುಲ್ಕ ತೆಗೆದುಕೊಳ್ಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪಕಾರ್ಯದರ್ಶಿ ಹೊರಡಿಸಿರುವ ಆದೇಶದ ಬಗ್ಗೆ ತಮಗೆ ಇನ್ನೂ ಮಾಹಿತಿ ಇಲ್ಲ. ಸಂಬಂಧಪಟ್ಟವರನ್ನು ಸಂಪರ್ಕಿಸಿ ಸ್ಪಷ್ಟೀಕರಣ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಪ್ರೆಸ್‍ಟ್ರಸ್ಟ್ ಅಧ್ಯಕ್ಷರಾದ ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ, ಹೊನ್ನಾಳಿ ಚಂದ್ರಶೇಖರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















