ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆಪಿಸಿಗೆ #KPC ನೀಡಿರುವ ಅಪಾರ ಪ್ರಮಾಣದ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ಹಿಂಪಡೆಯಬೇಕು ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತಹೆಗಡೆ ಅಶಿಸರ #Anantha Hegade Ashisara ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ #Minister Eshwar Khandre ಒತ್ತಾಯಿಸಿದ್ದಾರೆ.
ಶರಾವತಿ ಕಣಿವೆಯಲ್ಲಿ ಸರ್ಕಾರ ಕೆಪಿಸಿಗೆ ನೀಡಿರುವ 20 ಸಾವಿರ ಎಕರೆ ಅರಣ್ಯ ಭೂಮಿಯನ್ನು ಕೆಪಿಸಿ ಉಪಯೋಗಿಸಿಲ್ಲ. ಹೀಗಿದ್ದು ಶರಾವತಿ ಪಂಪ್ ಸ್ಟೋರೇಜ್ #Sharavathi Pumped Storage ಪ್ರಾಜೆಕ್ಟ್‌ಗೆ ಮತ್ತೆ ಅರಣ್ಯ ಭೂಮಿ ಮಂಜೂರು ಮಾಡಿರುವುದು ಕಾನೂನು ಬಾಹಿರ, ಹಾಗಾಗಿ ಈಗ ಕೆಪಿಸಿ ಬಳಸದಿರುವ ಅರಣ್ಯ ಭೂಮಿಯನ್ನು ಕೂಡಲೆ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಸಾಗರ, ಹೊಸನಗರ ತಾಲೂಕಿನ ಎರಡು ಲಕ್ಷ ಎಕರೆ ಅರಣ್ಯ ಭೂಮಿಯನ್ನು 60 ಅಪಾರ ಪ್ರಮಾಣದ ಅರಣ್ಯ ಭೂಮಿ ಮುಳುಗಡೆಯಾಗಿದೆ. ಜಲಾಶಯದ ಅಂಚಿನ 20 ಸಾವಿರ ಎಕರೆ ಅರಣ್ಯ ಭೂಮಿ 50 ವರ್ಷದಿಂದ ಅನಾಥವಾಗಿದೆ. ಈ ಅರಣ್ಯ ಭೂಮಿ ಮಾಲೀಕತ್ವ ಕೆಪಿಸಿ ಎಂದು ದಾಖಲೆಗಳಲ್ಲಿ ನಮೂದಾಗಿದೆ. ಕಾರ್ಗಲ್, ಲಿಂಗನಮಕ್ಕಿ, ಇಡುವಾಣಿಯಿಂದ, ಹಕ್ರೆ, ಕಳಸವಳ್ಳಿ, ಹೊಸನಗರ ತಾಲೂಕಿನ ನಗರದವರೆಗೆ 40 ಕಿ.ಮೀ. ಉದ್ದದ ಎಡದಂಡೆಯ ಕೆಪಿಸಿ ಅರಣ್ಯ ಭೂಮಿಗೆ ರಕ್ಷಕರೇ ಇಲ್ಲ. ಮುಪ್ಪಾನೆಯಿಂದ ಹೊಸನಗರ ತಾಲೂಕಿನ ನಿಟ್ಟೂರುವರೆಗಿನ ಜಲಾಶಯದ ಬಲದಂಡೆ ಅಂಚಿನಲ್ಲಿ 50 ಕಿ.ಮೀ. ಉದ್ದ ಅರಣ್ಯ ಭೂಮಿ ಕೆಪಿಸಿ ಬಳಿ ಇದೆ. ಈ ಅರಣ್ಯ ಭೂಮಿ ನಾಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಾನೂನು ಉಲ್ಲಂಘನೆ: ಕೆಪಿಸಿಯಿಂದ ಅರಣ್ಯ ಕಾನೂನುಗಳ ಉಲ್ಲಂಘನೆ ಆಗಿದೆ. 1980ರ ಅರಣ್ಯ ಸಂರಕ್ಷಣಾ ಕಾನೂನು, ವನ್ಯಜೀವಿ ಕಾನೂನು, ಜೀವ ವೈವಿಧ್ಯ ಕಾಯ್ದೆ, ಪರಿಸರ ಕಾಯ್ದೆಗಳನ್ನು ಕೆಪಿಸಿ ಗಾಳಿಗೆ ತೂರಿದೆ. ಬಳಕೆಯಾಗದ 20 ಸಾವಿರ ಎಕರೆ ಅರಣ್ಯ ಭೂಮಿಯನ್ನು ಕೆಪಿಸಿ ಸರ್ಕಾರಕ್ಕೆ ಮರಳಿಸಬೇಕಿತ್ತು. ಈಗ ಶರಾವತಿ ಕಣಿವೆಯಲ್ಲಿ ಇನ್ನಷ್ಟು ಅರಣ್ಯ ಭೂಮಿ ಕೆಪಿಸಿಗೆ ನೀಡಿ ಸರ್ಕಾರ ತಪ್ಪು ಮಾಡುತ್ತಿದೆ. ಇನ್ನಷ್ಟು ಕೆಪಿಸಿ ಅರಣ್ಯ ಭೂಮಿ ಪರಿಸರ ಸೂಕ್ಷ್ಮ ವಲಯದಲ್ಲಿದೆ. ಅರಣ್ಯ ಪ್ರದೇಶದಲ್ಲಿ ಮೂರು ವರ್ಷದ ಹಿಂದೆ ಭಾರಿ ಭೂಕುಸಿತ ಆಗಿದೆ. ಸಾವಿರಾರು ಎಕರೆ ಅರಣ್ಯ ನಾಶವಾದರೂ ಕೆಪಿಸಿ ಹೆಸರಿನಲ್ಲಿ ಇರುವುದರಿಂದ ಯಾರೂ ವಿಚಾರಣೆ ಮಾಡುತ್ತಿಲ್ಲ. ಈ ಪ್ರದೇಶದಲ್ಲಿ ಕಾವಲುಗಾರರಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಅತಿಕ್ರಮಣ ಮಾಡುತ್ತಿವೆ ಎಂದು ದೂರಿದ್ದಾರೆ.
ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆಗೆ ನೀಡಿರುವ ಪರವಾನಗಿ ರದ್ದು ಮಾಡಬೇಕು. ಕೆಪಿಸಿ ಹೆಸರಿನಲ್ಲಿರುವ ಅರಣ್ಯ ಭೂಮಿ ಸಂರಕ್ಷಿಸಬೇಕು. ಅರಣ್ಯ ರಕ್ಷಣೆಗೆ ಕೆಪಿಸಿ 100 ಕೋಟಿ ರೂ. ಅನುದಾನ ನೀಡಬೇಕು. ಕೇಂದ್ರ ರಾಜ್ಯ ಅರಣ್ಯ ಇಲಾಖೆ ತನಿಖಾ ತಂಡಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಡಾ. ಟಿ. ವಿ ರಾಮಚಂದ್ರ, ಪಶ್ಚಿಮ ಘಟ್ಟದ ಭೂಕುಸಿತ ಅಧ್ಯಯನ ಸಮಿತಿ ಸಂಚಾಲಕರಾಗಿದ್ದ ಡಾ. ಕೇಶವ ಕೊರ್ಸೆ, ವನ್ಯ ಜೀವಿ ತಜ್ಞ ಡಾ. ಬಾಲಚಂದ್ರ ಸಾಯಿಮನೆ ಪರ್ಯಾವರಣ ಸಂಸ್ಥೆ ಶಿವಮೊಗ್ಗಾ ಇದರ ಅಧ್ಯಕ್ಷ ಪ್ರೊ. ಬಿ. ಎಂ. ಕುಮಾರಸ್ವಾಮಿ, ಜೀವ ವೈವಿಧ್ಯ ಮಂಡಳಿ ಮಾಜಿ ಸದಸ್ಯ ಕೆ. ವೆಂಕಟೇಶ, ಸಹ್ಯಾದ್ರಿ ಪರಂಪರ ಪ್ರಾಧಿಕಾರದ ಸದಸ್ಯರಾಗಿದ್ದ ಶ್ರೀಪಾದ ಬಿಚ್ಚುಗತ್ತಿ ಇವರು ಈ ಮೇಲಿನ ಶರಾವತಿ ಕಣಿವೆ ಮುಳುಗಡೆ ಅಂಚಿನ ಅರಣ್ಯ ಉಳಿಸಿ, ಶರಾವತಿ ಭೂಗತ ಯೋಜನೆಗೆ ನೀಡಿರುವ ಅರಣ್ಯ ಪರವಾನಿಗೆ ರದ್ದುಮಾಡಿ ಎಂಬ ಹಕ್ಕೊತ್ತಾಯವನ್ನು ರಾಜ್ಯ ಮತ್ತು ಕೇಂದ್ರ ಅರಣ್ಯ ಪರಿಸರ ಮಂತ್ರಾಲಯಕ್ಕೆ ಸಲ್ಲಿಸಿದ್ದಾರೆ. ವನ್ಯ ಜೀವಿ ಮಂಡಳಿ ಗಮನ ಸೆಳೆದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post