ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಶಿಕ್ಷಕ ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ನಿರ್ವಹಿಸುವವರು ಕೇವಲ ಶಿಕ್ಷಕರಾಗುತ್ತಾರೆ. ಆದರೆ, ವೃತ್ತಿಯೊಂದಿಗೆ ವಿದ್ಯಾರ್ಥಿಗಳಿಗೆ ತಾಯಿಯ ಮಮತೆ, ತಂದೆಯ ರಕ್ಷೆ, ವಿದ್ಯೆಯ ಧಾರೆಯನ್ನು ಎರೆಯುವವರು ಅತ್ಯುತ್ತಮ ಶಿಕ್ಷಕರಾಗುತ್ತಾರೆ. ಅವರನ್ನು ಸಮಾಜ ಕೂಡ ಗಮನಿಸಿ, ಗೌರವಿಸುತ್ತದೆ ಎಂದು ಇನ್ನರ್ ವ್ಹೀಲ್ ಕ್ಲಬ್ ಶಿವಮೊಗ್ಗ ಮಾಜಿ ಅಧ್ಯಕ್ಷೆ ಶ್ರೀರಂಜಿನಿ ದತ್ತಾತ್ರಿ ಅಭಿಪ್ರಾಯಪಟ್ಟರು.
ರೋಟರಿ ಯೂತ್‌ಸೆಂಟರ್‌ನಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಕ ವೃತ್ತಿ ಒಂದು ತಪಸ್ಸಿದ್ದಂತೆ. ನಿತ್ಯ ಅನುಷ್ಟಾನವೇ ಅವರ ಕಾಯಕ. ತನ್ನಲ್ಲಿರುವ ವಿದ್ಯೆಯನ್ನು ಧಾರೆ ಎರೆಯುವ ತುಡಿತ, ಸಿದ್ಧತೆಯಲ್ಲಿಯೇ ಅವರು ನಿತ್ಯ ಶಾಲೆ-ಕಾಲೇಜಿಗೆ ಆಗಮಿಸುತಾರೆ. ಇಂತಹ ಉದಾತ್ತ ಗುಣದ ಶಿಕ್ಷಕರಿಂದ ಸುಶಿಕ್ಷಿತ ವಿದ್ಯಾರ್ಥಿಗಳು ಸಮಾಜಕ್ಕೆ ಅರ್ಪಣೆ ಆಗುತ್ತಾರೆ ಎಂದರು.
ಲಕ್ಷೆಪಲಕ್ಷ ಸಂಖ್ಯೆಯಲ್ಲಿ ಈ ಮನೋಭಾವದ ಶಿಕ್ಷಕರು ಇರುವುದರಿಂದಲೇ ಇಂದು ಸಮಾಜ ಸುಶಿಕ್ಷಿತವಾಗಿದೆ. ಯಥಾ ಶಿಕ್ಷಕ ತಥಾ ಶಿಷ್ಯ/ಪ್ರಜೆ ಎಂಬುದು ಎಲ್ಲರೂ ಕೇಳಿದ್ದೇವೆ. ನಾವೆಲ್ಲರೂ ಬಾಲ್ಯದ 6-7ನೇ ವರುಷದಿಂದ 18-20 ವರುಷಗಳ ವರೆಗಿನ ಅಮೂಲ್ಯ ಸಮಯವನ್ನು ಶಾಲೆ/ಕಾಲೇಜು ಎಂಬ ಆಲಯದಲ್ಲಿಯೇ ಕಳೆಯುತ್ತಾ ಬೆಳೆಯುತ್ತೇವೆ ಎಂದು ಹೇಳಿದರು.
ವಿದ್ಯೆಯೊಂದಿಗೆ ದಯೆ, ಕಾರುಣ್ಯ, ಸಮರ್ಪಣೆ, ಹರ್ಷ, ಸಮಚಿತ್ತ, ಸೌಹಾದ, ಸಹಿಷ್ಣುತೆ, ಪ್ರಾಮಾಣಿಕತೆ, ಹಾಸ್ಯಪ್ರಜ್ಞೆ, ಉತ್ಸಾಹ, ಜವಾಬ್ದಾರಿ, ನಾಯಕತ್ವಗುಣ ಹೀಗೆ ಜೀವನದ ಎಲ್ಲ ಸಾರಗಳನ್ನು ಕಲಿಯುವ ಆಲಯ ಶಾಲೆ. ಇವೆಲ್ಲವನ್ನೂ ಧಾರೆ ಎರೆಯುವವರು ಶಿಕ್ಷಕರು. ಹಾಗಾಗಿ ಶಿಕ್ಷಕ ವೃತ್ತಿ ಅತೀ ಗೌರವಯುತವೂ, ಜವಾಬ್ದಾರಿಯುತವೂ ಆಗಿರುವಂತದ್ದು. ಈ ಎಲ್ಲ ಮೌಲ್ಯಗಳನ್ನು ಕಲಿಸುವ ಲಕ್ಷೆಪ ಲಕ್ಷ ಸಂಖ್ಯೆಯ ಶಿಕ್ಷಕರಿಗೆ ನಮ್ಮೆಲ್ಲರ ಶ್ರದ್ಧೆಯ ನಮನಗಳು ಎಂದು ಹೇಳಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ 32 ವರುಷಗಳಿಂದ ಹಿಂದಿ ಶಿಕ್ಷಕಿಯಾಗಿ ಶರಾವತಿ ಹಿ.ಪ್ರಾ.ಶಾಲೆ ಹಾಗೂ ಪ್ರಿಯದರ್ಶಿನಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಶಾಂತಲಕ್ಷಿ ಹಾಗೂ 12 ವರುಷಗಳಿಂದ ಸಹ್ಯಾದ್ರಿ ಆಂಗ್ಲ ಪ್ರೌಢ ಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಉಷಾರಾವ್ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು. ತಮ್ಮ ಶಿಕ್ಷಕ ವೃತ್ತಿಯ ಅನೇಕ ವಿಶೇಷ ಘಟನೆಗಳನ್ನು ಅವರು ಹಂಚಿಕೊಂಡರು.
ಎನ್. ಜಿ.ಉಷಾ, ಗಾಯತ್ರೀ ಸುಮತೀಂದ್ರ, ಗಾಯತ್ರೀ ಪಾಟೀಲ್, ಮೇರಿ ಡಿಸೋಜಾ..ಇವರಿಗೆ ಪುಷ್ಪ ಗುಚ್ಚ ನೀಡಲಾಯಿತು.
ಈ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಶಿವಮೊಗ್ಗದ ಅಧ್ಯಕ್ಷರಾದ ಛಾಯಾ ವೀರಣ್ಣ, ಕಾರ್ಯದರ್ಶಿ ದೀಪಾ ಚಂದ್ರನ್, ಹಿರಿಯರಾದ ಶ್ರೀದೇವಿ ವೇಣುಗೋಪಾಲ್, ಪ್ರತಿಮಾನಾಯಕ್, ಪ್ರಭಾ ಅಶ್ವಥ್, ರಮಾಗೋಪಾಲ್, ವಿಜಯಾಮೂರ್ತಿ, ಪೂರ್ಣಿಮಾಮೋಹನ್, ಅನುಶಾಸ್ತ್ರಿಮ, ಜ್ಯೋತಿ ಪವಾರ್, ಯಶೋಧಾಶೇಖರ್, ಸುನಿತಾ ಮೋಹನ್, ಸುನಿತಾಶ್ರೀಧರ್ ಸೇರಿದಂತೆ, ಸುಪ್ರಿಯಾ, ಸಚಿತಾರವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post