ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಪುತ್ರರಾದ ಪ್ರಶಾಂತ್ ಮಾಡಾಳ್ ಸೇರಿ ಐವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದು, ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿ 7.62 ಕೋಟಿ ರೂ. ವಶಪಡಿಸಿಕೊಂಡಿರುವ ಹಿನ್ನಲೆಯಲ್ಲಿ ಕೂಡಲೆ ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ ಹಾಗೂ ಮುಖ್ಯಮಂತ್ರಿ ಮೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಶಿವಪ್ಪ ನಾಯಕ ವೃತ್ತದಿಂದ ಗೋಪಿವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮಧುಬಂಗಾರಪ್ಪ Madhu Bangarappa ಮಾತನಾಡಿ, ಬಿಜೆಪಿ ಎಂದರೆ ಭ್ರಷ್ಟ ಜನತಾ ಪಾರ್ಟಿ ಎಂದು ಸಾಬೀತಾಗಿದೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಬಣ್ಣ ಬಯಲಾಗಿದ್ದು, ಇನ್ನು ಏನೀದ್ದರೂ ಕೇವಲ 10 ದಿನವಷ್ಟೆ ಬಿಜೆಪಿ ಮುಖ್ಯಮಂತ್ರಿ ಇರುತ್ತಾರೆ. ಪ್ರತಿ ಕ್ಷೇತ್ರದಲ್ಲೂ ಮತದಾರರಿಗೆ ಹಂಚಲು ಕಳ್ಳತನದ ದುಡ್ಡು ಶೇಖರಿಸಿಟ್ಟಿದ್ದು, ನಿನ್ನೆ ಮಾಡಾಳ್ ಪುತ್ರನ ಮನೆಯಲ್ಲಿ ಸಿಕ್ಕಿದ್ದು, ಕೇವಲ ಸ್ಯಾಂಪಲ್ ಅಷ್ಟೆ. ಬಿಜೆಪಿಯ ಭ್ರಷ್ಟತನವನ್ನು ಮನೆ ಮನೆ ಬಾಗಿಲಿಗೆ ಕಾಂಗ್ರೆಸ್ ಕಾರ್ಯಕರ್ತರು ಕೊಂಡೊಯ್ದು ಮತದಾರರಿಗೆ ತಿಳಿಸಬೇಕಾಗಿದೆ. ಕಾಂಗ್ರೆಸ್‌ಗೆ ಈ ಬಾರಿ ದೇವರೆ ವರ ಕೊಟ್ಟಿದ್ದಾನೆ. ರಾಮರಾಜ್ಯ ಆಗಬೇಕಾದರೆ ಬದಲಾವಣೆ ಅಗತ್ಯ ಎಂದರು.

ಕೊಳ್ಳೆ ಹೊಡೆದವರ ಆಸ್ತಿಯನ್ನು ಬುಲ್ಡೋಜರ್‌ನಿಂದ ನಾಶ ಮಾಡುವ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದು ಬಿಜೆಪಿಯ ಭ್ರಷ್ಟರ ಮನೆಗೆ ಬುಲ್ಡೋಜರ್ ನುಗ್ಗಿಸಲಿ. ಅಮಿತ್ ಶಾ, ಮೋದಿ, ಆದಿತ್ಯನಾಥ್ ಅವರಿಗೆ ಭ್ರಷ್ಟರ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದರು.
ಕಳ್ಳತನ ಮಾಡಿದವರಿಗೆ ಜನ ತಕ್ಕ ಶಿಕ್ಷೆ ಕೊಡುತ್ತಾರೆ. ಬರಿ ಸೋಪ್ ಫ್ಯಾಕ್ಟರಿಯ ಅಧ್ಯಕ್ಷನೇ ಇಷ್ಟೊಂದು ಲೂಟಿ ಮಾಡಿದ್ದಾರೆ ಎಂದರೆ ಇನ್ನು ಮಂತ್ರಿ ಮಹನೀಯರುಗಳು ಕರ್ನಾಟಕವನ್ನು ಏಷ್ಟೊಂದು ಪ್ರಮಾಣದಲ್ಲಿ ಲೂಟಿ ಮಾಡಿರಬಹುದು. ಕಾಂಗ್ರೆಸ್ ಕಾರ್ಯಕರ್ತರು ಎದೆಯೊಡ್ಡಿ ನಿಂತರೆ ಬಿಜೆಪಿಯ ಬುಲೆಟ್‌ಗಳೆಲ್ಲ ಖಾಲಿಯಾಗಲಿದೆ. ಇದು ಜನರ ದುಡ್ಡು ಲೂಟಿ ಮಾಡಿದ್ದಾರೆ. ಮನೆ ಬಾಗಿಲಿಗೆ ಬಂದರೆ ಬಿಜೆಪಿಯವರನ್ನು ಬಿಡಬೇಡಿ ಎಂದರು.

ಬಡವರ ತೆರಿಗೆ ಹಣವನ್ನೆಲ್ಲ ಬಿಜೆಪಿಯ ಭ್ರಷ್ಟರು ಲೂಟಿ ಮಾಡಿದ್ದಾರೆ. ಗೃಹ ಸಚಿವರ ಊರಲ್ಲಿ ಯುವಕರ ಮೇಲೆ ವಿನಾಕಾರಣ ಕೊಲೆಕೇಸ್ ದಾಖಲೆ ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಎಂಬುದು ಮರಿಚಿಕೆಯಾಗಿದೆ. ಬಿಜೆಪಿಯವರು ಶಾಶ್ವತವಾಗಿ ಮನೆ ಸೇರಲಿದ್ದಾರೆ ಎಂದರು.











Discussion about this post