ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಡಾ. ಜಿ.ಎಸ್. ಶಿವರುದ್ರಪ್ಪ ಅವರು ಕನ್ನಡ ಸಾಹಿತ್ಯದಲ್ಲಿನ ಸೌಂದರ್ಯವನ್ನು ದೈವತ್ವಕ್ಕೆ ಏರಿಸಿದ ಮೇರುಕವಿ ಎಂದು ಕವಿ, ಪತ್ರಕರ್ತ ಎನ್.ರವಿಕುಮಾರ್ (ಟೆಲೆಕ್ಸ್) ಹೇಳಿದರು.
ರಾಸ್ತ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ(ರಿ), ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಘಟಕದ ಆಶ್ರಯದಲ್ಲಿ ಪತ್ರಿಕಾ ಭವನದಲ್ಲಿ ನಡೆದ ‘ಜಿಎಸ್‍ಎಸ್ ಒಂದು ನೆನಪು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಜನಪದರಿಂದ ಆರಂಭಗೊಂಡು ಪಂಪ, ನವೋದಯ ಕಾಲಘಟ್ಟದವರೆಗೂ ಕನ್ನಡ ಸಾಹಿತ್ಯದ ಕಾವ್ಯದೊಳಗಿನ ಸೌಂದರ್ಯವನ್ನು ವಿಮರ್ಶಾತ್ಮಕ ನೆಲೆಯಲ್ಲಿ ವಿಶ್ಲೇಷಿಸಿರುವ ಜಿ.ಎಸ್ ಎಸ್ ಅವರು ಕಾವ್ಯದೊಳಗಿನ ಸೌಂದರ್ಯವನ್ನು ಶಿವತ್ವಕ್ಕೆ ಸಮೀಕರಿಸಿದ್ದಾರೆ. ತಮ್ಮ ಗುರುಗಳಾದ ಕುವೆಂಪು ಅವರ ಮಾರ್ಗದರ್ಶನದಲ್ಲಿ ಸಂಪಾದಿಸಿರುವ ಸಂಶೋಧನಾ ಗ್ರಂಥ ‘ಸೌಂದರ್ಯ ಸಮೀಕ್ಷೆ’ ಕನ್ನಡ ವಿಮರ್ಶಾ ಲೋಕದ ಅಮೂಲ್ಯ ಗ್ರಂಥವಾಗಿದೆ ಎಂದರು.
ಜಿ.ಎಸ್ ಎಸ್ ಅವರು ಜಾತಿ, ಧರ್ಮ, ವರ್ಗ ಬೇಧವಿಲ್ಲದೆ ಮನುಷ್ಯಜಗತ್ತಿನ ಎಲ್ಲವನ್ನೂ ತಮ್ಮ ಕಾವ್ಯದ ಮೂಲಕ ಸ್ಪರ್ಶಿಸಿದ್ದಾರೆ. ಸಂಕ್ರಾಂತಿ, ಮೊಹರಂ, ಕ್ರಿಸ್ತ ಕುರಿತು ಬರೆಯುವ ಮೂಲಕ ಜಾತ್ಯಾತೀತ, ಧರ್ಮಾತೀತ ಭಾವನೆಯನ್ನು ಬಿತ್ತುವ ಕೆಲಸ ಮಾಡಿದವರು, ಜೀವಸಮೃದ್ದಿಯ ಪ್ರಕೃತಿಯನ್ನು ತಮ್ಮ ಕವಿತೆಗಳ ನೆಲೆಯಾಗಿಸಿಕೊಂಡಿದ್ದರು. ಸಾಮಗಾನದಿಂದ-ಪ್ರಾರ್ಥನೆಯ ವರೆಗೂ ತಮ್ಮ ಕವಿತೆಗಳಲ್ಲಿ ಜೀವಸಾಂದ್ರತೆಯನ್ನು ಕಾಣಿಸಿದ ದಾರ್ಶನಿಕ ಜಿ.ಎಸ್. ಶಿವರುದ್ರಪ್ಪನವರು ಎಂದು ಸ್ಮರಿಸಿದರು.
ಕಮಲಾ ನೆಹರೂ ಮಹಿಳಾ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಬಸವರಾಜ್ ಟಿ.ಎನ್. ಮಾತನಾಡಿ, ಮನುಷ್ಯತ್ವವೇ ಕಳೆದುಹೋಗುತ್ತಿರುವ ಈ ಸಂದರ್ಭದಲ್ಲಿ ಜಿ.ಎಸ್.ಎಸ್. ನೆನಪಾಗುತ್ತಾರೆ. ಕುವೆಂಪು ಅವರಂತೆ ವಿಶ್ವಮಾನವ ಪ್ರಜ್ಞೆಯನ್ನು ಬೆಳೆಸಿದ ಕವಿ ಅವರು. ವಚನಗಳ ಸಾರವೇ ಅವರ ಬರಹದಲ್ಲಿ ಅಡಿಗಿದೆ. ಯಾವ ಪಂಥಕ್ಕೂ ಸೇರದೆ ಮನುಷ್ಯ ಪಂಥವನ್ನು ಮೆರೆದ ಕವಿ ಎಂದು ಬಣ್ಣಿಸಿದರು.
ಶಿರಾಳಕೊಪ್ಪದ ಕದಂ ಪ್ರಥಮದರ್ಜೆ ಕಾಲೇಜಿನ ಡಾ.ರಾಜೇಂದ್ರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷೆ ಪ್ರೊ.ಕಿರಣ್‍ದೇಸಾಯಿ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಎಸ್. ಈಶ್ವರಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















