ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದೂಗಳು ಸಂಘಟಿತರಾದ ಕಡೆಗಳಲ್ಲಿ ಅನಗತ್ಯ ಸಂಗತಿಗಳನ್ನು ತುರುಕಿ ಆಕ್ರಮಣ ಘಟನಾವಳಿಗಳು ನಡೆಯುತ್ತಿದೆ. ರಕ್ಷಾಬಂಧನ #Raksha Bandhana ಸ್ನೇಹದ, ಪ್ರೀತಿಯ ಭಾತೃತ್ವದ, ಶಕ್ತಿಯ ಸಂಕೇತವಾಗಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ #MLA Channabasappa ಹೇಳಿದರು.
ಅವರು ಇಂದು ನಗರದ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಬಿಜೆಪಿ ನಗರ ಮಹಿಳಾ ಮೋರ್ಚಾವತಿಯಿಂದ ಹಮ್ಮಿಕೊಂಡಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಕ್ಷಾ ಬಂಧನದ ನೂಲಿನಲ್ಲಿ ಸಂಘಟನೆಯ ಶಕ್ತಿಯಿದೆ. ನಮ್ಮ ಸಂಸ್ಕೃತಿ ದೇಶದ ನಡೆಗಟ್ಟು, ಭಾವೈಕ್ಯತೆ ಅಡಗಿದೆ. ಪ್ರಪಂಚ ಒಂದು ಕುಟುಂಬ ಎನ್ನುವ ಸಂಸ್ಕೃತಿಯ ರಾಷ್ಟ್ರೀಯ ಹರಿಕಾರರು ನಾವು. ದೇಶವನ್ನು ಸಂಕ್ಷರಣೆ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ರಕ್ಷಾಬಂಧನ ಬರೀ ಅಣ್ಣತಂಗಿಯ ಸಂಬಂಧ ಮಾತ್ರವಲ್ಲ, ಅದರಲ್ಲಿ ಉದಾತ್ತ ಧ್ಯೇಯೋದ್ದೇಶಗಳಿವೆ ಎಂದರು.
ಪ್ರತಿ ಮನೆಮನೆಗಳಲ್ಲಿ ರಕ್ಷಾಬಂಧನದ ಕಾರ್ಯಕ್ರಮ ನಡೆಯಬೇಕಿದೆ. ಹಿರಿಯರು ಸುಮ್ಮನೆ ಇದನ್ನೆಲ್ಲಾ ಮಾಡಿಲ್ಲ. ಅದರ ಹಿಂದೆ ಒಳ್ಳೆಯ ಉದ್ದೇಶವಿದೆ. ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ನಡೆದಾಗ ಅವರು ಭಯೋತ್ಪಾದಕರೇ ಎಂದು ಪ್ರಶ್ನೆ ಕೇಳಿದವರು ನಮ್ಮ ನಡುವೆ ಇದ್ದಾರೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ. ನಾಳೆ ಅವರು ಸುಬ್ರಹ್ಮಣ್ಯಕ್ಕೂ ಬರುತ್ತಾರೆ. ತಿರುಪತಿಯಿಂದ ವಿವಾದ ಹುಟ್ಟುಹಾಕಿ, ಶಬರಿಮಲೈಗೆ ಕೈಹಾಕಿದರು. ಗೋಕರ್ಣದಲ್ಲೂ ಪ್ರಯತ್ನ ನಡೆದಿತ್ತು. ಒಳ್ಳೆಯವರು ಸುಮ್ಮನಿದ್ದಾಗ ಇಂತಹ ಘಟನೆಗಳು ನಡೆಯುತ್ತವೆ. ಗೊಂದಲ ಸೃಷ್ಟಿಮಾಡುವ ಕಾರ್ಯಮಾಡುತ್ತಾರೆ. ಎಸ್‌ಐಟಿ ಬ್ರಹ್ಮನಿಂದ ಹುಟ್ಟಿದ್ದಲ್ಲ, ಸಿಎಂ ಮೂಗಿನ ಕೆಳಗೆ ಇರುವ ಒಂದು ಸಂಸ್ಥೆ ಅವರು ಹೇಳಿದ್ದನ್ನೇ ಇವರು ಮಾಡುತ್ತಾರೆ ಎಂದರು.
ವೀರೇಂದ್ರ ಹೆಗಡೆಯವರು ಸರ್ಕಾರ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಇಂದಲ್ಲಾ ನಾಳೆ ಧರ್ಮಸ್ಥಳದ ಸತ್ಯ ಹೊರಬರುತ್ತದೆ. ಯಾವ ಎಸ್‌ಐಟಿ ಕೂಡ ಏನೂ ಮಾಡಲಾಗುವುದಿಲ್ಲ ಎಂದರು.
ಶಾಸಕ ಡಿ.ಎಸ್. ಅರುಣ್ ಮಾತನಾಡಿ, ಪ್ರಧಾನಿ ಮೋದಿಯವರು ಆಪರೇಷನ್ ಸಿಂಧೂರದ ಮೂಲಕ ನಮ್ಮ ದೇಶದ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಿದರೆ, ಏನಾಗುತ್ತದೆ ಎಂಬುದನ್ನು ವಿಶ್ವಕ್ಕೆ ತೋರಿಸಿದ್ದಾರೆ. ಸಂಸ್ಕೃತಿಯ ಚಿಂತನೆಯನ್ನು ಎತ್ತಿಹಿಡಿಯುವ ಪಕ್ಷ ಬಿಜೆಪಿಯಾಗಿದೆ. ಅದನ್ನು ಕಾರ್ಯಕರ್ತರು ಮುಂದುವರೆಸಿ, ಜಾಗೃತಿ ಮೂಡಿಸಬೇಕಿದೆ ಎಂದರು.
ನಗರಾಧ್ಯಕ್ಷ ಮೋಹನ್ ರೆಡ್ಡಿ ಮಾತನಾಡಿ, ಶ್ರಾವಣಮಾಸದ ಮತ್ತು ಸ್ವಾತಂತ್ರೋತ್ಸವದ ಅಂಗವಾಗಿ ಬಿಜೆಪಿ ನಗರ ಸಮಿತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಂದು ಸಂಜೆ 4.30ಕ್ಕೆ ಬೈಕ್ರ‍್ಯಾಲಿ ಇರುತ್ತದೆ. ಆ.11ರಂದು ನಗರದ ಎಲ್ಲಾ ಪುತ್ಥಳಿಗಳನ್ನು ಸ್ವಚ್ಛತೆಮಾಡಿ ಅರ್ಚನೆ ಮಾಡುವ ಕಾರ್ಯವಿದ್ದು, ಬೆಳಿಗ್ಗೆ 9 ಗಂಟೆಗೆ ಗಾಂಧಿಪಾರ್ಕ್‌ನಿಂದ ಪ್ರಾರಂಭವಾಗುತ್ತದೆ. ಆ.14ರ ಸಂಜೆ 5 ಗಂಟೆಗೆ ಲಕ್ಷ್ಮಿ ಚಿತ್ರಮಂದಿರದಿಂದ ಗೋಪಿವೃತ್ತದವರೆಗೆ ಮೌನ ಮೆರವಣಿಗೆ ಇದೆ. ಆ.15ರಂದು ಎಲ್ಲಾ ಕಾರ್ಯಕರ್ತರ ಮನೆಯ ಮೇಲೆ ರಾಷ್ಟ್ರಧ್ವಜಾರೋಹಣ ಇರುತ್ತದೆ ಎಂದರು.
ಮಹಿಳಾಮೋರ್ಚಾದಿಂದ ಬಿಜೆಪಿಯ ಎಲ್ಲಾ ಕಾರ್ಯಕರ್ತರು ಮತ್ತು ಶಾಸಕರಿಗೂ ತಿಲಕವಿಟ್ಟು, ರಕ್ಷಾಬಂಧನವನ್ನು ಕಟ್ಟಿ ಸಿಹಿಹಂಚಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾದ ಅಧ್ಯಕ್ಷೆ ರಶ್ಮಿ ಶ್ರೀನಿವಾಸ್, ಶಾಸಕರಾದ ಧನಂಜಯ ಸರ್ಜಿ, ಮಾಜಿ ಶಾಸಕರಾದ ಅಶೋಕ್ ನಾಯ್ಕ, ಪ್ರಮುಖರಾದ ಸುರೇಖಾ ಮುರುಳೀಧರ್, ಮಂಗಳಾ ನಾಗೇಂದ್ರ, ಜ್ಞಾನೇಶ್ವರ್, ನಾಗರಾಜ್, ದೀನ್‌ದಯಾಳ್, ಮಂಜುನಾಥ್, ಅನಿತಾ ರವಿಶಂಕರ್, ಯಶೋಧ, ಚೈತಾ ಪೈ, ಶಾಂತಾ ಸುರೇಂದ್ರ, ಪ್ರಭಾಕರ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post