ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ರಾತ್ರಿ ವೇಳೆ ಮಾತ್ರ ಕಾರ್ಯಾಚರಣೆ ಮಾಡುವ ಬಾವಲಿಗಳ ಚಟುವಟಿಕೆಗಳು ಕೃಷಿಯ ಮೇಲೆ ನೇರ ಪರಿಣಾಮ ಬೀರುವುದಲ್ಲದೇ, ಒಟ್ಟಾರೆ ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭಾರತೀಯ ಬಾವಲಿ ಸಂರಕ್ಷಣಾ ಟ್ರಸ್ಟ್‌ನ ತಜ್ಞ ಮತ್ತು ಟ್ರಸ್ಟಿ ರಾಜೇಶ್ ಪುಟ್ಟಸ್ವಾಮಿ ಆಭಿಪ್ರಾಯಪಟ್ಟರು.
ಕುವೆಂಪು ವಿವಿಯ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗವು ಆಯೋಜಿಸಿದ್ದ ಬಾವಲಿಗಳ ಕುರಿತ ಒಳನೋಟಗಳು ಎಂಬ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಣಿಸಂಕುಲದ ಕುರಿತ ಅಧ್ಯಯನವೇ ಸವಾಲಿನದ್ದಾಗಿರುತ್ತದೆ. ಅದರೆ ನಿಶಾಚರಿ ಪ್ರಾಣಿ ಪ್ರಪಂಚವನ್ನು ಅರ್ಥೈಸಿಕೊಳ್ಳಲು, ಅಧ್ಯಯನಿಸಲು ಸಾಕಷ್ಟು ಶ್ರದ್ಧೆ ಮತ್ತು ಶ್ರಮ ಅವಶ್ಯ. ಬಾವಲಿಗಳ ಅಧ್ಯಯನದಲ್ಲಿ ಬೆಳಗಿನ ಕಾಲ ಸಂಪೂರ್ಣ ಅವುಗಳ ಕುರಿತು ಪ್ರಕಟವಾದ ಗ್ರಂಥಗಳ ಪರಾಮರ್ಶನಕ್ಕೆ ಮೀಸಲಾದರೆ, ಸಂಜೆಯ ನಂತರ ನೈಜ ಪ್ರಾಯೋಗಿಕ ಅಧ್ಯಯನಕ್ಕೆ ಇಳಿಯಬೇಕಾಗುತ್ತದೆ. ಅಧ್ಯಯನ ಆಕಾಂಕ್ಷಿಗಳು ಸಂಕೀರ್ಣ ವಿಷಯದ ಅಭ್ಯಾಸಕ್ಕೆ ವಿಶೇಷ ಆಸಕ್ತಿ ಮತ್ತು ಸವಾಲು ಎದುರಿಸುವ ತಯಾರಿಯೊಂದಿಗೆ ಮುಂದಾಗಬೇಕು. ಕೋವಿಡ್-19 ಸಾಂಕ್ರಾಮಿಕದ ನಂತರ ಬಾವಲಿಗಳ ಕುರಿತು ಅಧ್ಯಯನಗಳು ದ್ವಿಗುಣಗೊಂಡಿದ್ದು, ಉತ್ತಮ ಅವಕಾಶಗಳಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕುಲಸಚಿವ ಪ್ರೊ. ಎಸ್.ಎಸ್. ಪಾಟೀಲ್, ಅರಣ್ಯವು ಅಪಾರ ಸಂಪತ್ತು ಹೊಂದಿರುವ ಜೀವವೈವಿಧ್ಯದ ತಾಣವಾಗಿರುತ್ತದೆ. ಮಾನವನ ದುರಾಸೆಯಿಂದ ಇಂದು ವನ್ಯಜೀವಿಗಳ ಆವಾಸ ಸ್ಥಾನಕ್ಕೆ ಕುತ್ತು ಬಂದಿದ್ದು, ಮನುಷ್ಯ-ವನ್ಯಜೀವಿ ಸಂಘರ್ಷ ದಿನೇದಿನೆ ಹೆಚ್ಚುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜೀವವಿಜ್ಞಾನ ವಿಷಯಗಳನ್ನು ಅಧ್ಯಯನಿಸುತ್ತಿರುವ ವಿದ್ಯಾರ್ಥಿಗಳು ಕಾಡು, ವನ್ಯಜೀವಿಗಳು, ಪರಿಸರ ಸಂರಕ್ಷಣೆಯ ಮಹತ್ವವನ್ನು ತಮ್ಮ ಪೋಷಕರು, ನೆರೆಹೊರೆಯವರು ಮತ್ತು ಗ್ರಾಮದವರಿಗೆ ತಿಳಿಸಿಕೊಡುವ ಮೂಲಕ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಮಾನವ ಪರಿಸರದೊಂದಿಗೆ ನಿಕಟಸಂಬಂಧ ಹೊಂದಿರುವ ಬಾವಲಿ ಸೇರಿದಂತೆ ಇನ್ನಿತರ ಸಸ್ಯ-ಪ್ರಾಣಿ ಸಂಕುಲದ ಬಗ್ಗೆ ಆಳವಾದ ಅಧ್ಯಯನ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಭಾರತೀಯ ಬಾವಲಿ ಸಂರಕ್ಷಣಾ ಟ್ರಸ್ಟ್‌ನೊಂದಿಗೆ ವಿವಿಯ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗವು ಹೆಚ್ಚಿನ ಸಂಶೋಧನಾ ಸಂಬಂಧಿ ಒಡಂಬಡಿಕೆಯೊಂದನ್ನು ಮಾಡಿಕೊಳ್ಳುತ್ತಿರುವುದಾಗಿ ವಿಭಾಗದ ಅಧ್ಯಕ್ಷ ಡಾ. ವಿಜಯ್‌ಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ನಾಗರಾಜ್, ಡಾ. ವೆಂಕಟೇಶ್ವರುಲು, ಡಾ. ತಿಪ್ಪೇಸ್ವಾಮಿ ಸೇರಿದಂತೆ ಎಲ್ಲ ಜೀವವಿಜ್ಞಾನ ವಿಭಾಗಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post