ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇತ್ತೀಚಿನ ದಿನಗಳಲ್ಲಿ ಪದವಿಗಳನ್ನು ಉತ್ತಮ ಅಂಕಗಳ ಮೂಲಕ ಗಳಿಸಿದ ಮಾತ್ರಕ್ಕೆ ಉದ್ಯೋಗಗಳು ದೊರೆಯುತ್ತಿಲ್ಲ. ಇಂದಿನ ಕಾರ್ಪೊರೇಟ್ ವಲಯ ಹಾಗೂ ಇಂದಿನ ಕಾಲಮಾನಕ್ಕೆ ಅನುಗುಣವಾದ ಕೌಶಲ್ಯಗಳನ್ನು ಕೂಡ ಪಡೆಯುವ ಅಗತ್ಯವಿದೆ ಎಂದು ಬೆಂಗಳೂರಿನ ಕಾರ್ಪೊರೇಟ್ ಟ್ರೈನರ್ ಹಾಗೂ ಮೋಟಿವೇಷನ್ ಗುರು ಬ್ರಜ್ ಕಿಶೋರ್ ಗುಪ್ತಾ ತಿಳಿಸಿದರು.
ನಗರದ ಪಿಇಎಸ್‌ಐಎಎಮ್‌ಎಸ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಓರಿಯೆಂಟೇಶನ್ ಕಾರ್ಯಕ್ರಮದ ಎರಡನೆಯ ದಿನದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇತ್ತೀಚಿಗೆ ನೀತಿ ಆಯೋಗವು ನೀಡಿದ ವರದಿಯ ಪ್ರಕಾರ ಶೇ 50% ರಷ್ಟು ಪದವಿ ವಿದ್ಯಾರ್ಥಿಗಳು ಉದ್ಯೋಗಗಳನ್ನು ಪಡೆಯಲು ಅನರ್ಹರಾಗಿದ್ದಾರೆ ಎಂದು ವರದಿಯನ್ನು ನೀಡಿದೆ. ಇದಕ್ಕೆ ಕಾರಣ ಆಯಾ ಹುದ್ದೆಗಳಿಗೆ ತಕ್ಕಂತೆ ಇರಬೇಕಾದ ಕೌಶಲ್ಯಗಳ ಕೊರತೆಯು ಪ್ರಮುಖ ಕಾರಣವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಏನಾದರೂ ಮಹತ್ವವಾದುದನ್ನು ಸಾಧಿಸುವ ಸಂಕಲ್ಪವನ್ನು ಮಾಡಿಕೊಳ್ಳಬೇಕು ಅಲ್ಲದೆ ಇದನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಸ್ವಯಂ ಶಿಸ್ತನ್ನು ರೂಢಿಸಿಕೊಳ್ಳಬೇಕು ಎಂದರು.
ಇಂದು ದೇಶದ ಶಿಕ್ಷಣದಲ್ಲಿ ಕೌಶಲ್ಯವನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಪರಿಸ್ಥಿತಿಯು ನಿರ್ಮಾಣ ಮಾಡಿದ್ದು ಕೇಂದ್ರ ಸರ್ಕಾರವು ಸ್ಕಿಲ್ ಇಂಡಿಯಾದಂತಹ ಕಾರ್ಯಕ್ರಮಗಳನ್ನು ರೂಪಿಸಿದೆ. ಕೌಶಲ್ಯ ಎನ್ನುವುದು ಹುಟ್ಟುತ್ತಲೇ ಬರುವಂತಹುದಲ್ಲ. ಇದು ವ್ಯಕ್ತಿಯು ತನ್ನ ಪರಿಶ್ರಮದ ಮೂಲಕ ಕರಗತ ಮಾಡಿಕೊಳ್ಳಬೇಕು. ಹಾಗೆಯೇ ಬದುಕಿನಲ್ಲಿ ಸೋಲು ಗೆಲುವುಗಳು ಸರ್ವೇ ಸಾಮಾನ್ಯ. ಸೋಲನ್ನು ಸವಾಲಾಗಿ ಸ್ವೀಕರಿಸಿ ಮತ್ತೆ ಪುಟಿದೇಳುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲಿಯೂ ಶಕ್ತಿ ಸಾಮರ್ಥ್ಯಗಳಿದ್ದು ನಿಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಇವುಗಳನ್ನು ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ಎಂ. ಸುದರ್ಶನ್, ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥ ಮೋಹನ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್, ಕಂಪ್ಯೂಟರ್‌ಸೈನ್ಸ್ ವಿಭಾಗದ ಪ್ರಭಾರ ಮುಖ್ಯಸ್ಥ ಸಚ್ಚಿದಾನಂದ ಹಾಗೂ ಪ್ರಥಮ ವರ್ಷದ ಬಿಕಾಂ, ಬಿಬಿಎ, ಬಿಬಿಎ ಹೆಚ್‌ಇಎಂ, ಬಿಬಿಎ ಟಿ&ಟಿ, ಬಿಸಿಎ, ಬಿಎಸ್ಸಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ವಾಣಿಜ್ಯಶಾಸ್ತ್ರವಿಭಾಗದ ಸಹಾಯಕ ಪ್ರಾಧ್ಯಾಪಕರಾದಕು. ವಿಲ್ಮಾ ಮಿರಾಂಡಅವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕು.ಉಮ್ಮೆಆಸ್ಮಾ ಅವರು ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post