ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅ.ಪ. ರಾಮಭಟ್ಟರ ಅಪೇಕ್ಷೆಯಂತೆ ದಲಿತ ಮತ್ತು ಹಿಂದುಳಿದ ಅರ್ಚಕರಿಗೆ ತರಬೇತಿ ಕೇಂದ್ರವನ್ನು ಆರಂಭಿಸಲು ಯೋಜಿಸಲಾಗಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಹೇಳಿದರು.
ನಗರದ ಗಾಯತ್ರೀ ಮಾಂಗಲ್ಯ ಮಂದಿರದಲ್ಲಿ ಇಂದು ಅ.ಪ. ರಾಮಭಟ್ಟರಿಗೆ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರವೀಂದ್ರ ನಗರದ ಪ್ರಸನ್ನ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಅ.ಪ. ರಾಮಭಟ್ಟರಲ್ಲಿ ಶ್ರದ್ಧೆ ಇತ್ತು. ದೇವರ ಪೂಜೆ ಹೇಗೆ ಮಾಡಬೇಕೆಂಬ ಸಂಸ್ಕಾರ ಇತ್ತು. ಯಾರೋ ದೇವಸ್ಥಾನಕ್ಕೆ ಬಂದರೆಂದು ಯಾವುದೋ ಬಟ್ಟೆ ಉಟ್ಟು ಪೂಜೆ ಮಾಡುತ್ತಿರಲಿಲ್ಲ. ಪೂಜೆ ಮಾಡುವಾಗ ಮಾತ್ರ ಶುದ್ಧತೆ ಅಲ್ಲ, ಜೀವನ ಪೂರ್ತಿ ಶುದ್ಧರಾಗಿರಬೇಕೆಂದು ಅವರು ಅಪೇಕ್ಷೆ ಪಡುತ್ತಿದ್ದರು ಎಂದರು.
ಇಂತಹ ಸಂಸ್ಕಾರವನ್ನು ದಲಿತ ಮತ್ತು ಹಿಂದುಳಿದ ವರ್ಗದಲ್ಲಿ ಪೂಜೆ ಮಾಡುವ ಅರ್ಚಕರಿಗೂ ಕಲಿಸಿಕೊಡುವಂತೆ ಮನವಿ ಮಾಡಿದ್ದೆ. ಅದಕ್ಕೊಂದು ತರಬೇತಿ ಕೇಂದ್ರ ಆರಂಭಿಸಿದರೆ ಉತ್ತಮ ಎಂದು ರಾಮಭಟ್ಟರು ಹೇಳಿದ್ದರು. ಅವರ ಅಪೇಕ್ಷೆಯಂತೆ ಕೇಂದ್ರ ಆರಂಭಿಸುವ ಯೋಜನೆ ಇದೆ ಎಂದರು.
ರಾಮಭಟ್ಟರ ಹೆಸರಿನಲ್ಲಿ ಟ್ರಸ್ಟ್ ಮಾಡಿ ಆ ಮೂಲಕ ತರಬೇತಿ ನೀಡುವ ಬಗ್ಗೆಯೂ ಚಿಂತನೆ ಇದೆ. ರಾಜ್ಯದ ಎಲ್ಲಾ ದಲಿತ ಮತ್ತು ಹಿಂದುಳಿದ ಅರ್ಚಕರಿಗೆ ತರಬೇತಿ ಕೊಡುವ ಬಗ್ಗೆ ಆಲೋಚನೆ ಇದೆ. ಮುಂದಿನ ದಿನಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗುವುದು. ಪೂಜಾ ವಿಧಾನ, ಶ್ಲೋಕ ಇತ್ಯಾದಿಗಳನ್ನು ಕಲಿಸಲಾಗುವುದು ಎಂದರು.
Also read: ಶಿವಮೊಗ್ಗದ ಇಂದಿನ ಸುದ್ಧಿ | ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ: ಎಎಪಿ ಆಗ್ರಹ
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಅ.ಪ. ರಾಮಭಟ್ಟರ ಅಪೇಕ್ಷೆ ಅವರ ಜನ್ಮ ಸ್ಥಳವಾದ ಅಂಬುತೀರ್ಥವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅಂಬುತೀರ್ಥ ಅಭಿವೃದ್ಧಿ ಬಗ್ಗೆ ರಾಮಭಟ್ಟರು ತಮ್ಮದೇ ನೀಲ ನಕ್ಷೆಯನ್ನು ಹೊಂದಿದ್ದರು. ಅದರ ಪ್ರಕಾರವೇ ಎಲ್ಲಾ ಕಾಮಗಾರಿಗಳು ನಡೆದಿವೆ. ಇನ್ನೂ ಅಲ್ಪ ಸ್ವಲ್ಪ ಕಾಮಗಾರಿಗಳು ಬಾಕಿ ಇದ್ದು, ಶೀಘ್ರದಲ್ಲೇ ಅದನ್ನೂ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ ಭಾಗವತ್, ಪರಿಷತ್ ಸದಸ್ಯ ಆಯನೂರು ಮಂಜುನಾಥ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪ್ರಮುಖರಾದ ಎಸ್.ಚಂದ್ರಕಾಂತ್, ಎ.ಜೆ.ರಾಮಚಂದ್ರ, ಡಾ. ರಕ್ಷಾ ರಾವ್, ಹೊಸಹಳ್ಳಿ ವೆಂಕಟರಾಮ್, ಡಾ.ಪಿ.ನಾರಾಯಣ, ಜಿ.ಎಸ್.ನಟೇಶ್, ಶೇಷಾದ್ರಿ, ಸ.ನ.ಮೂರ್ತಿ, ಭಾಸ್ಕರ ಕಾಮತ್, ಅಶ್ವತ್ಥ ನಾರಾಯಣ ಶೆಟ್ಟಿ, ಶಬರೀಶ ಕಣ್ಣನ್ ಇನ್ನಿತರರು ಹಾಜರಿದ್ದರು. ಸಭೆಗೂ ಮುನ್ನ ರುದ್ರ ಪಠಣ, ಲಲಿತಾ ಸಹಸ್ರನಾಮ, ಭಜನೆ ಕಾರ್ಯಕ್ರಮಗಳು ನಡೆದವು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post