ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ ಅವರನ್ನು ಸೋಲಿಸುವುದೇ ಕೆ.ಎಸ್. ಈಶ್ವರಪ್ಪನವರ ಮೊದಲ ಆದ್ಯತೆಯಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ Ayanuru Manjunath ಹೊಸ ಬಾಂಬ್ ಸಿಡಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಶ್ವರಪ್ಪನವರು Eshwarappa ತಮಗೆ ಸೀಟು ಸಿಗಬೇಕೆಂದು ಪ್ರಯತ್ನಿಸಿದರು. ಅದು ಆಗದಿದ್ದ ಕಾಲಕ್ಕೆ ತಮ್ಮ ಮಗನಿಗಾದರೂ ಸಿಗಲಿ ಎಂದು ಹಂಬಲಿಸಿದರು. ಆದರೆ ಅದೂ ಸಾಧ್ಯವಾಗದಿದ್ದಾಗ ತಮ್ಮ ಮಾನಸ ಪುತ್ರನಂತಿರುವ ಚನ್ನಬಸಪ್ಪನವರಿಗೆ ಟಿಕೆಟ್ ಕೊಡಿಸಿದ್ದಾರೆ. ಹಾಗೆ ಕೊಡಿಸಿದ ಮೇಲೂ ಅವರನ್ನು ಗೆಲ್ಲಿಸಬೇಕೆಂಬ ಮನಸ್ಸು ಅವರಿಗಿಲ್ಲ. ಏಕೆಂದರೆ ಅಕಸ್ಮಾತ್ ಚನ್ನಬಸಪ್ಪ ಗೆದ್ದರೆ ತಮ್ಮ ಮಗನ ರಾಜಕೀಯ ಜೀವನವೇ ಮುಗಿದುಹೋಗುತ್ತದೆ ಎನ್ನುವ ಆತಂಕ ಅವರನ್ನು ಕಾಡುತ್ತಿದೆ. ಹಾಗಾಗಿ ಅವರು ಮೇಲುನೋಟಕ್ಕೆ ಬಿಜೆಪಿಯಲ್ಲಿದ್ದರೂ ಕೂಡ ಶಿವಮೊಗ್ಗ ಕ್ಷೇತ್ರದ ಮಟ್ಟಿಗೆ ಚನ್ನಬಸಪ್ಪ ಅವರನ್ನು ಸೋಲಿಸಲು ಪ್ರಯತ್ನ ಪಡುತ್ತಾರೆ. ಇದು ನನ್ನ ಮಾತಲ್ಲ. ಸಾರ್ವಜನಿಕರ ಮಾತನ್ನೇ ನಾನು ಹೇಳಿದ್ದೇನೆ ಎಂದು ಆಯನೂರು ತಿಳಿಸಿದರು.
ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹೆಚ್.ಸಿ ಯೋಗೇಶ್ ಕೂಡ ಈಶ್ವರಪ್ಪನವರ ನೆರಳೇ ಆಗಿದ್ದಾರೆ. ಅವರದೇ ವಾರ್ಡಿನಲ್ಲಿ ಹೆಚ್.ಸಿ. ಯೋಗೇಶ್ ಅವರನ್ನು ಮೂರು ಬಾರಿ ಗೆಲ್ಲಿಸಿದ್ದಾರೆ. ಮತ್ತು ದೆಹಲಿ ಮಟ್ಟದಲ್ಲಿ ಪ್ರಯತ್ನಿಸಿ ಯೋಗೇಶ್ ಅವರಿಗೆ ಟಿಕೆಟ್ ಸಿಗುವಂತೆ ಮಾಡಿದ್ದಾರೆ. ಇದೊಂದು ರಾಜಕೀಯ ತಂತ್ರವೂ ಆಗಿದೆ. ಕುತಂತ್ರವೂ ಆಗಿದೆ ಎಂದು ನೇರ ಆರೋಪ ಮಾಡಿದರು.
ಕಾಂಗ್ರೆಸ್‌ನವರು ಲಿಂಗಾಯತ ಮತಗಳು ಕ್ರೋಡೀಕರಣವಾಗಬೇಕೆಂದುಕೊಂಡಿದ್ದಾರೆ. ಆದರೆ ಅದು ಸಾಧ್ಯವಿಲ್ಲ ನಮ್ಮದು ಜಾತ್ಯತೀತ ಪಕ್ಷ. ಶಾಂತಿಯನ್ನು ಬಯಸುವುದೇ ನಮ್ಮ ಗುರಿ. ಶಾತಿ ನೆಮ್ಮದಿಯನ್ನು ಬಯಸುವ ಎಲ್ಲರೂ ನಮ್ಮನ್ನು ಬೆಂಬಲಿಸುತ್ತಾರೆ. ಒಂದು ರೀತಿಯಲ್ಲಿ ಈಶ್ವರಪ್ಪನವರು ನಮ್ಮ ಪರವಾಗಿ ಇರುವುದರಿಂದ ಗೆಲುವು ನಮಗೆ ಖಚಿತ ಎಂದರು.
ಜೆಡಿಎಸ್ ಕಾನೂನು ವಿಭಾಗದ ರಾಜ್ಯಾಧ್ಯಕ್ಷ ಎ.ಪಿ. ರಂಗನಾಥ್ ಮಾತನಾಡಿ, ವಕೀಲರು ಈ ಬಾರಿ ಆಯನೂರು ಮಂಜುನಾಥ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಆಡಳಿತ ಸರ್ಕಾರ ವಕೀಲರ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ. ಸಮಸ್ಯೆಗಳನ್ನು ಬಗೆಹರಿಸಲಿಲ್ಲ. ಆದ್ದರಿಂದ ನಾವು ಈ ಬಾರಿ ನಮ್ಮ ಪರವಾಗಿ ಧ್ವನಿ ಎತ್ತಿರುವ ಆಯನೂರು ಮಂಜುನಾಥ್ ಅವರನ್ನು ಗೆಲ್ಲಿಸಲು ನಿರ್ಧರಿಸಿದ್ದೇವೆ ಎಂದರು.
Also read: ಡಿ.ಕೆ. ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ರಣಹದ್ದು ಡಿಕ್ಕಿ: ವಿಂಡೋ ಗ್ಲಾಸ್ ಪುಡಿಪುಡಿ
ಶಿವಮೊಗ್ಗದಲ್ಲಿ ಶಾಂತಿ ನೆಲೆಸಬೇಕು. ಧರ್ಮಗಳ ಮಧ್ಯೆ ಸಾಮರಸ್ಯವಿರಬೇಕು. ನಮ್ಮ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಮತ್ತು ಆಯನೂರು ಮಂಜುನಾಥ್ ಅಂತಹವರ ಹಾಜರಾತಿ ಶಾಸನಸಭೆಯಲ್ಲಿ ಇರಬೇಕು. ಹಾಗಾಗಿಯೇ ನಾವು ಜೆಡಿಎಸ್ ಅನ್ನು ಗೆಲ್ಲಿಸುತ್ತೇವೆ. ಶಿವಮೊಗ್ಗ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕು ಸ್ಥಾನಗಳನ್ನು ಪಡೆಯುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಮುಖಂಡ ಕೆ.ಬಿ. ಪ್ರಸನ್ನಕುಮಾರ್ ಪ್ರಮುಖರಾದ ಅನಿಲ್, ರಮೇಶ್, ನಿರಂಜನ, ಸತ್ಯನಾರಾಯಣ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post