ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಅವಿರತ ಪ್ರಯತ್ನದ ಫಲವಾಗಿ ಅನೇಕ ನೂತನ ರೈಲು ಸೇವೆಗಳು ಶಿವಮೊಗ್ಗ ಭಾಗಕ್ಕೆ ಇತ್ತೀಚಿನ ದಿನಗಳಲ್ಲಿ ಪರಿಚಯಿಸಲ್ಪಟ್ಟಿವೆ. ಮಾತ್ರವಲ್ಲ ಶಿವಮೊಗ್ಗ ಭಾಗದ ಜನರ ಅನುಕೂಲಕ್ಕೆ ರೈಲು ಸೇವೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮುಂದುವರೆದಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ತೀರ ಇತ್ತೀಚಿನವರೆಗೆ ಶಿವಮೊಗ್ಗದಿಂದ ಕೇವಲ ಬೆಂಗಳೂರು ಮತ್ತು ಮೈಸೂರಿಗೆ ಮಾತ್ರ ರೈಲು ಸಂಪರ್ಕ ಲಭ್ಯವಿದ್ದು, ನಿರಂತರ ಪ್ರಯತ್ನದ ಫಲವಾಗಿ 2019ರ ನವೆಂಬರ್ 1 ರಿಂದ ಶಿವಮೊಗ್ಗದಿಂದ ತಿರುಪತಿಗೆ ಹಾಗೂ ಶಿವಮೊಗ್ಗದಿಂದ ದೇಶದ ಮಹಾನಗರಗಳಲ್ಲಿ ಒಂದಾದ ಚೆನ್ನೈಗೆ ವಾರಕ್ಕೊಮ್ಮೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಆರಂಭಿಸಲಾಗಿದೆ. ವಾರಕ್ಕೊಮ್ಮೆ ಸಂಚರಿಸುತ್ತಿದ್ದ ಶಿವಮೊಗ್ಗ-ತಿರುಪತಿ (ರೇಣಿಗುಂಟ) ಎಕ್ಸ್’ಪ್ರೆಸ್ ರೈಲನ್ನು ವಾರಕ್ಕೆ ಎರಡು ಬಾರಿ ಸಂಚರಿಸುವಂತೆ ರೈಲು ಸೇವೆಯನ್ನು ಹೆಚ್ಚಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ಜನ್ಮ ದಿನವಾದ ಫೆ.27ರಿಂದ, ಈಗ ವಾರದಲ್ಲಿ ಒಮ್ಮೆ ಸಂಚರಿಸುತ್ತಿರುವ ಶಿವಮೊಗ್ಗ-ಚೆನ್ನೈ ತತ್ಕಾಲ್ ಸ್ಪೆಷಲ್ ಎಕ್ಸ್’ಪ್ರೆಸ್ ವಾರದಲ್ಲಿ ಎರಡು ದಿನ ಸಂಚಾರ ಆರಂಭಿಸಲಿದೆ.
ಈ ರೈಲಿನ ಉದ್ಘಾಟನಾ ವಿಶೇಷ (Inaugural Special) ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಫೆ.27ರಂದು ಗುರುವಾರ ಮದ್ಯಾಹ್ನ 12.00 ಗಂಟೆಗೆ ಚಾಲನೆ ನೀಡಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸರ್ಕಾರದ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿರವರು ಈ ರೈಲು ಸೇವೆಗೆ ಬೆಂಗಳೂರಿನ ರೈಲ್ವೆ ವಿಭಾಗೀಯ ಕಚೇರಿಯಿಂದ ಮಧ್ಯಾಹ್ನ 12.00 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಈ ಸಮಾರಂಭದಲ್ಲಿ ಖುದ್ದು ತಾವು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಭಾಗವಹಿಸಲಿರುವುದಾಗಿ ಅವರು ತಿಳಿಸಿದ್ದಾರೆ.
ಈ ರೈಲು ಸೇವೆ ಫೆ.28ರಿಂದ ವಾರದಲ್ಲಿ 2 ದಿನ ಸಂಚರಿಸಲಿದೆ. ಈ ರೈಲು ಶಿವಮೊಗ್ಗದಿಂದ ಪ್ರತಿ ಸೋಮವಾರ ಮತ್ತು ಶುಕ್ರವಾರ ರಾತ್ರಿ 11.55ಕ್ಕೆ ಹೊರಟು ಮರುದಿನ ಅಂದರೆ ಮಂಗಳವಾರ ಮತ್ತು ಶನಿವಾರ ಬೆಳಗ್ಗೆ 11.45ಕ್ಕೆ ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣವನ್ನು ತಲುಪಲಿದೆ. ಚೆನ್ನೈ ಸೆಂಟ್ರಲ್‌ನಿಂದ ಅದೇ ದಿನ ಅಂದರೆ ಮಂಗಳವಾರ ಮತ್ತು ಶನಿವಾರ ಮದ್ಯಾಹ್ನ 3.00 ಗಂಟೆಗೆ ಹೊರಟು ಬುಧವಾರ ಮತ್ತು ಭಾನುವಾರ ಬೆಳಿಗ್ಗೆ 3.55ಕ್ಕೆ ಶಿವಮೊಗ್ಗ ರೈಲು ನಿಲ್ದಾಣವನ್ನು ತಲುಪಲಿದೆ ಎಂದಿದ್ದಾರೆ.
ಈ ರೈಲಿಗೆ ಮಾರ್ಗ ಮಧ್ಯದಲ್ಲಿ ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣಾವರ, ಬಾಣಸವಾಡಿ, ಕೃಷ್ಣರಾಜಪುರ, ಬಂಗಾರಪೇಟೆ ಜೋಲಾರಪೇಟೆ, ಕಾಟ್ಪಾಡಿ, ಅರಕೋಣಂ ಮತ್ತು ಪೆರಂಬೂರುಗಳಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರ ಈ ರೈಲು ಸೇವೆಗಳ ಸದುಪಯೋಗ ಪಡೆದುಕೊಳ್ಳುವಂತೆ ಸಂಸದರು ಮನವಿ ಮಾಡಿದ್ದಾರೆ.
ಈ ನೂತನ ರೈಲು ಸೇವೆಗಳ ಆರಂಭಕ್ಕೆ ಕಾರಣೀಭೂತರಾದ ಪ್ರಧಾನಿ ನರೇಂದ್ರ ಮೋದಿ, ಮುಖ್ಯ ಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಹಾಗೂ ಕೇಂದ್ರ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಅವರುಗಳಿಗೆ ಕ್ಷೇತ್ರದ ಜನತೆಯ ಪರವಾಗಿ ಹಾಗೂ ವೈಯಕ್ತಿಕವಾಗಿ ಧನ್ಯವಾದಗಳನ್ನು ಅವರು ಅರ್ಪಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post