ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋಲ್ಕತ್ತಾದ ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಳೆದ ತಿಂಗಳು ನಡೆದ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ #Tainee Doctor Rape and Murder Case ನ್ಯಾಯಕ್ಕಾಗಿ ಒತ್ತಾಯಿಸಿ ಸುಬ್ಬಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಐಎಂಎ ಶಿವಮೊಗ್ಗ ವತಿಯಿಂದ ಪ್ರತಿಭಟನೆ ನಡೆಸಿ, ನೈತಿಕ ಬೆಂಬಲ ಘೋಷಿಸಲಾಯಿತು.
ಈ ವೇಳೆ ಮಾತನಾಡಿದ ಡಾ. ಹರೀಶ್ ದೆಲಂತಬೆಟ್ಟು, ಯಾವುದೇ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸತ್ಯ ಗೊತ್ತಿದ್ದರೂ, ಸಾಕ್ಷಿ ಹಾಗೂ ಆಧಾರ ಸರಿಯಾಗಿ ಇಲ್ಲದೇ ಇದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಸಾಕ್ಷಿಗಳನ್ನು ನಾಶ ಮಾಡಲಾಗಿದೆ. ಹೀಗಿರುವಾಗ ನ್ಯಾಯ ಹೇಗೆ ಸಿಗುತ್ತದೆ ಎಂದು ಪ್ರಶ್ನಿಸಿದರು.
ಘಟನೆ ನಡೆದ ದಿನ ಅಲ್ಲಿ ಏನಾಯಿತು ಎಂಬುದು ಯಾರಿಗೂ ತಿಳಿದಿಲ್ಲ. ಯಾರನ್ನೋ ಅಪರಾಧಿಯನ್ನಾಗಿ ಮಾಡಲಾಗಿದ್ದು, ಸಿಸಿಟಿವಿ ಸೇರಿದಂತೆ ಹಲವು ಸಾಕ್ಷಿಗಳನ್ನು ನಾಶ ಮಾಡಲಾಗಿದೆ. ಇಂತಹ ಘಟನೆಗಳಲ್ಲಿ ಸಿಸಿಟಿವಿ ದೃಶ್ಯಗಳೇ ಪ್ರಮುಖ ಆಧಾರವಾಗುತ್ತವೆ. ಆದರೆ, ಇಲ್ಲಿ ಇಂತಹ ಸಾಕ್ಷಿಗಳನ್ನೇ ನಾಶ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.
Also read: ‘ಪಂಚಮಿ ಪುರಸ್ಕಾರ-2025’ ಪ್ರಶಸ್ತಿಗೆ ನಟ ಮಂಡ್ಯ ರಮೇಶ್ ಆಯ್ಕೆ
ಅಲ್ಲಿ ನಡೆದ ಘಟನೆ ಬಗ್ಗೆ ಇಲ್ಲಿ ನಮಗೇ ನೋವಾಗಿದೆ. ಹೀಗಿರುವಾಗ ಆಕೆಯ ಜೊತೆಯಲ್ಲಿ ಕೆಲಸ ಮಾಡಿದವರಿಗೆ ಎಷ್ಟು ನೋವಾಗಿರುತ್ತದೆ. ಹೀಗಾಗಿಯೇ ಅವರು ನ್ಯಾಯಕ್ಕಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಾ, ಬಲಿದಾನಕ್ಕೂ ಸಹ ಸಿದ್ದರಾಗಿದ್ದಾರೆ. ಇದರಿಂದ ಕೆಲವರ ಆರೋಗ್ಯದಲ್ಲೂ ಸಹ ವ್ಯತ್ಯಾಸವಾಗಿದೆ. ಇದಕ್ಕೆ ಪೂರಕವಾಗಿ ನ್ಯಾಯ ದೊರೆಯಬೇಕು, ಮಹಿಳಾ ವೈದ್ಯೆಯರಿಗೆ, ಮಹಿಳಾ ಸಿಬ್ಬಂದಿಗಳಿಗೆ ರಕ್ಷಣೆ ನೀಡುವ ಕಠಿಣ ನಿಯಮ ಜಾರಿಗಬೇಕು ಎಂದು ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ನಾವೂ ಸಹ ನೈತಿಕ ಬೆಂಬಲ ನೀಡುತ್ತಿದ್ದೇವೆ ಎಂದರು.
ಕಾಲೇಜಿನ ಡೀನ್ ಡಾ.ವಿನಾಯಕ್ ಮಾತನಾಡಿ, ಇಂತಹ ಅಮಾನುಷ ಕೃತ್ಯವನ್ನು ಖಂಡಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಈ ರೀತಿಯ ಪೈಶಾಚಿಕ ಕೃತ್ಯಗಳು ಭವಿಷ್ಯದಲ್ಲಿ ನಡೆಯದಂತೆ, ಮಹಿಳಾ ವೈದ್ಯೆಯರು ಹಾಗೂ ಸಿಬ್ಬಂದಿಗಳಿಗೆ ಸರ್ಕಾರ ಸುರಕ್ಷತೆಯನ್ನು ಖಾತ್ರಿ ಪಡಿಸಬೇಕು. ಇದಕ್ಕಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಶ್ರೀಧರ್ ಮಾತನಾಡಿ, ಟ್ರೈನಿ ವೈದ್ಯೆ ಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ದೇಶದಾದ್ಯಂತ ತಿಂಗಳುಗಳಿಂದ ನಡೆಯುತ್ತಿದ್ದರೂ ಸರ್ಕಾರ ಸರಿಯಾಗಿ ಸ್ಪಂದನೆ ನೀಡಿಲ್ಲ. ಹೀಗಾಗಿ, ಆಮರಣಾಂತ ಉಪವಾಸ ಸತ್ಯಾಗ್ರಹ ದೇಶದಾದ್ಯಂತ ನಡೆಯುತ್ತಿದೆ. ಈ ರೀತಿಯ ನಡೆಯುತ್ತಿರುವ ಪ್ರತಿಭಟನೆಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ನಾವೂ ಸಹ ಪ್ರತಿಭಟನೆ ನಡೆಸುತ್ತಿದ್ದು, ಹಲವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಮಹಿಳಾ ವೈದ್ಯೆಯರ ಹಾಗೂ ಸಿಬ್ಬಂದಿಗಳ ಸುರಕ್ಷತೆಗಾಗಿ ಸರ್ಕಾರ ಕಠಿಣ ನಿಯಮ ರೂಪಿಸಿ ಜಾರಿಗೆ ತರಬೇಕು ಎಂಬ ಬೇಡಿ ಈಡೇರುವವರೆಗೂ ನಮ್ಮ ಪ್ರತಿಭಟನೆ ಹಾಗೂ ನೈತಿಕ ಬೆಂಬಲ ಮುಂದುವರೆಯುತ್ತದೆ ಎಂದರು.
ಇನ್ನು, ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ಬೆಳಗ್ಗೆ 6ರಿಂದ ಸಂಜೆ 6 ರವರೆಗೆ ಹತ್ತಕ್ಕೂ ಹೆಚ್ಚು ವೈದ್ಯರು ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದಾರೆ. ಸತ್ಯಾಗ್ರಹ ನಿರತ ವೈದ್ಯರಿಗೆ ಸುಬ್ಬಯ್ಯ ವೈದ್ಯಕೀಯ ಕಾಲೇಜು,ಆಸ್ಪತ್ರೆಯ ವೈದ್ಯರು ಹಾಗೂ ಐಎಂಎ ವೈದ್ಯರು ನೈತಿಕ ಬೆಂಬಲ ಘೋಷಿಸಿದ್ದಾರೆ.
ಆಗಸ್ಟ್ 9 ರಂದು 31 ವರ್ಷದ ಟ್ರೈನಿ ಡಾಕ್ಟರ್ ಮೇಲೆ ಅತ್ಯಾಚಾರವೆಸಗಿ, ಕೊಂದ ನಂತರ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿದೆ. ಈ ಸಂಬಂಧ ಸಂತ್ರಸ್ತೆ ವ್ಯಾಸಂಗ ಮಾಡುತ್ತಿದ್ದ ಕಾಲೇಜಿನ ಮಾಜಿ ಪ್ರಾಂಶುಪಾಲರೊಂದಿಗೆ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ. ಕರ್ತವ್ಯದಲ್ಲಿದ್ದ ಯುವ ಟ್ರೈನಿ ಡಾಕ್ಟರ್ ಮೇಲೆ ಮಾಡಿದ ಈ ಘೋರ ಅಪರಾಧದ ಸುದ್ದಿಯು ನಮ್ಮಲ್ಲಿ ಪ್ರತಿಯೊಬ್ಬರನ್ನು ಮಾನವ ಜೀವನದ ಕಡೆಗಣನೆಯಿಂದ ಬೆಚ್ಚಿ ಬೀಳಿಸಿದೆ.
ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರೂ, ಶಿವಮೊಗ್ಗ ಐಎಂಎ ಕಾರ್ಯದರ್ಶಿಗಳು ಆದ ಡಾ. ವಿನಯ ಶ್ರೀನಿವಾಸ್, ಪ್ರೊಫೆಸರ್ ಡಾ.ಶುಭ್ರತಾ ಸೇರಿದಂತೆ ಹಲವರು ಇದ್ದರು.
ಡಾ. ದಯಾನಂದ ಸಾಗರ್, ಡಾ.ಎಂ.ಆರ್. ರಾಗಶ್ರೀ, ಡಾ. ಸ್ವಾತಿ, ಡಾ. ಲಾವಣ್ಯ ಎಸ್. ಪೂಜಾರ್, ಡಾ.ಜೆಯೀನ್, ಡಾ. ಅರ್ಶಾನಾ, ಡಾ. ರಿಯಾಜ್ ಅಹ್ಮದ್, ಡಾ. ಶ್ರೇಯಸ್ ಹರೀಶ್, ಅನೀಶ್ ಫಾತಿಮಾ ಅವರುಗಳು ಇಂದು ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ದೇಶವ್ಯಾಪಿ ನಡೆಯುತ್ತಿರುವ ಪ್ರತಿಭಟನೆ ನೈತಿಕ ಬೆಂಬಲ ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post