ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಇರುವ ಯೋಜನೆಗಳನ್ನು ವಿಪ್ರ ವಿದ್ಯಾರ್ಥಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದ ಯುವಕ-ಯುವತಿಯರು ಉಪಯೋಗಿಸಿಕೊಳ್ಳಬೇಕು ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪಿ.ಎಂ. ಮಾಲತೇಶ್, ಮನವಿ ಮಾಡಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದಿಂದ ಸಾಂದೀಪಿನಿ ಶಿಷ್ಯವೇತನ ಯೋಜನೆ ಜಾರಿಯಲ್ಲಿದ್ದು, ಪಿಯುಸಿಯಿಂದ ಡಿಗ್ರಿ ಓದುವವರೆಗೆ ಪ್ರತಿವರ್ಷ ಒಬ್ಬ ವಿದ್ಯಾರ್ಥಿಗೆ 15 ಸಾವಿರ ನಿರ್ವಹಣಾ ವೆಚ್ಚ ನೀಡುತ್ತಿದ್ದು, ಈ ಸೌಲಭ್ಯ ಪಡೆಯಲು ನ.30 ಕೊನೆಯದಿನವಾಗಿದೆ. ಇದಕ್ಕಾಗಿ ಅರ್ಜಿ ಜೊತೆಗೆ ಆಧಾರ್‍ಕಾರ್ಡ್ ಹಾಗೂ ಇಡಬ್ಲ್ಯೂಎಸ್ ಅಂದರೆ ಚಾಲ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಹಾಗೂ ಮೆಡಿಕಲ್ ಮತ್ತು ಇಂಜಿನೀಯರ್ ವಿದ್ಯಾರ್ಥಿಗಳಿಗೆ ಸರ್ಕಾರದ ಶುಲ್ಕದ ಮೂರನೇ 2ರಷ್ಟು ಧನಸಹಾಯವನ್ನು ನೀಡಲಾಗುವುದು ಎಂದರು.
ಬ್ರಾಹ್ಮಣ ಸಮುದಾಯದ ಬಡವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯಬೇಕು. ಈ ಯೋಜನೆ ಕಾಮೇಡ್ ಕೆ ಮತ್ತು ಮ್ಯಾನೇಜ್‍ಮೆಂಟ್ ಕೋಟಾ ಹೊರತುಪಡಿಸಿ ಇರುತ್ತದೆ. ಈಗಾಗಲೇ 450 ಅರ್ಜಿಗಳು ಬಂದಿದ್ದು, 6.5 ಕೋಟಿ ಹಣವನ್ನು ವಿದ್ಯಾರ್ಥಿಗಳ ಖಾತೆಗೆ ಜಮಾಮಾಡಲಾಗುವುದು. ಅಲ್ಲದೆ ಚಾಣುಕ್ಯ ಆಡಳಿತ ತರಬೇತಿ ಯೋಜನೆಯಡಿಯಲ್ಲಿ ಯುಪಿಎಸ್‍ಸಿ ಮತ್ತು ಐಎಎಸ್ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುವುದು ಎಂದರು.
ಇದಲ್ಲದೆ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದ ಯುವಕ-ಯುವತಿಯರಿಗಾಗಿ ಸಣ್ಣಪ್ರಮಾಣದ ಉದ್ಯೋಗಗಳನ್ನು ಪ್ರಾರಂಭಿಸಲು ವಿಪ್ರ ಸ್ವ-ಉದ್ಯಮ ನೆರಸಾಲ ಯೋಜನೆಯಡಿಯಲ್ಲಿ ಮಂಡಳಿಯಿಂದ 2ಲಕ್ಷ ರೂ.ಗಳವರೆಗೆ ಶೇ.4ರ ಬಡ್ಡಿದರದಲ್ಲಿ ಸಾಲ ನೀಡಲಾಗುವುದು. ಹಾಗೂ ಸಾಲದ ಶೇ.20ರಷ್ಟು ಸಹಾಯಧನವನ್ನು ಮಂಡಳಿಯಿಂದಲೇ ಭರಿಸಲಾಗುವುದು. ಈ ಯೋಜನೆಗೆ ಅ.30ರ ಒಳಗೆ ಸಲ್ಲಿಸಬೇಕು. ಇದಕ್ಕೆ 18 ರಿಂದ 65 ವರ್ಷದ ವಯೋಮಿತಿಯನ್ನು ನಿಗಧಿಪಡಿಸಲಾಗಿದೆ. ಸಮಯ ಕಡಿಮೆ ಇರುವುದರಿಂದ ವಿಪ್ರಬಾಂಧವರು ಇದರ ಸದುಪಯೋಗವನ್ನು ಪಡೆಯಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೀಶ್ ಮಾತನಾಡಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಪಿ.ಎಂ. ಮಾಲತೇಶ್ ಅವರನ್ನು ನಿರ್ದೇಶಕರನ್ನಾಗಿ ಸರ್ಕಾರ ನೇಮಕಮಾಡಿದೆ. ಮಾಲತೇಶ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡವರು. ಯುವ ಮುಖಂಡರಾಗಿದ್ದಾರೆ. ಬೆಂಗಳೂರಿನಿಂದ ಬಳ್ಳಾರಿಯವರೆಗೆ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ನಿರ್ದೇಶಕರಾಗಿ ನೇಮಕ ಮಾಡಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆಗಳು. ಇವರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸುರೇಶ್, ಸಂತೋಷ್‍ಕುಮಾರ್, ವೆಂಕಟೇಶ್, ಅಕ್ಷಯ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















