ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನ ಸೋಂಕಿನಿಂದ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ೬೦ವರ್ಷ ಮೇಲ್ಪಟ್ಟ ಮಹಿಳೆಯರು ಸ್ವಯಂ ಪ್ರೇರಿತರಾಗಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ ಹೇಳಿದರು.
ಅವರು ಇಂದು ತುಂಗಾನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ 60ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ಏರ್ಪಡಿಸಲಾಗಿರುವ ಕೋವಿಡ್-19 ವಿಶೇಷ ಲಸಿಕಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರತಿ ಕುಟುಂಬದಲ್ಲಿ ಪ್ರಧಾನ ಪಾತ್ರ ವಹಿಸುವ ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು. ಅದರಲ್ಲೂ 60ವರ್ಷ ಮೇಲ್ಪಟ್ಟವರು ಹಾಗೂ 45ವರ್ಷ ಮೇಲ್ಪಟ್ಟು ಆರೋಗ್ಯ ಇಲಾಖೆಯಿಂದ ಗುರುತಿಸಲಾಗಿರುವ ಕೆಲವು ಕಾಯಿಲೆಗಳಿಂದ ಬಾಧಿತರಾದವರು ತಕ್ಷಣವೇ ತಮ್ಮ ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಸೂಚಿಸಿದ ಅವರು, ಆರೋಗ್ಯ ಕೇಂದ್ರಕ್ಕೆ ತೆರಳುವ ಮುನ್ನ ತಮಗಿರುವ ಕಾಯಿಲೆಗಳ ಕುರಿತು ತಮ್ಮ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡಿರುವ ಚೀಟಿಯನ್ನು ಹೊಂದಿರಬೇಕು. ಜೊತೆಗೆ ತಮ್ಮ ಆಧಾರ್, ಮತದಾರರ ಗುರುತಿನ ಚೀಟಿ ಇತ್ಯಾದಿ ಯಾವುದೇ ಗುರುತಿನ ಚೀಟಿಯನ್ನು ಹೊಂದಿರುವಂತೆ ಅವರು ಸಲಹೆ ನೀಡಿದರು.
ಕೊರೋನ ಸೋಂಕಿನ ಕುರಿತು ಭಯ ಬೇಡ, ಆದರೆ ಎಚ್ಚರಿಕೆ ಹೊಂದಿರಲೇಬೇಕು. ಲಸಿಕೆ ಪಡೆಯಲಿಚ್ಚಿಸುವವರು ಯಾವುದೇ ಆತಂಕವಿಲ್ಲದೆ ಲಸಿಕೆ ಪಡೆಯಬಹುದಾಗಿದೆ. ಮೊದಲ ಲಸಿಕೆಯ ನಂತರದಲ್ಲಿ 28 ದಿನಗಳ ಅಂತರದಲ್ಲಿ ಮತ್ತೊಂದು ಲಸಿಕೆಯನ್ನು ಪಡೆಯಬೇಕಾಗುವುದು. ಈ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ ಎಂದ ಅವರು, ಮೊದಲ ಹಂತದಲ್ಲಿ ಕೊರೋನ ನಿಯಂತ್ರಿಸುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಘಟಕಗಳ ಸಿಬ್ಬಂಧಿಗಳಿಗೆ, ಆಶಾ, ಅಂಗನವಾಡಿ ಕಾರ್ಯಕರ್ತರಿಗೆ, ಕಂದಾಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂಧಿಗಳಿಗೆ ಲಸಿಕೆ ಒದಗಿಸಲಾಗಿತ್ತು. ನಂತರದ ಹಂತದಲ್ಲಿ ೬೦ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಆರಂಭದ ಹಂತವಾಗಿ ಮೂರು ಖಾಸಗಿ ಆಸ್ಪತ್ರೆಗಲ್ಲಿ ಲಸಿಕೆ ಹಾಕಲಾಗುತ್ತಿತ್ತು. ಇಂದಿನಿಂದ 41 ಸರ್ಕಾರಿ ಮತ್ತು 8 ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಲು ಕ್ರಮ ವಹಿಸಲಾಗುವುದು ಎಂದರು.
ಲಸಿಕೆ ಪಡೆಯುವವರು ಆನ್‌ಲೈನ್ ಮೂಲಕ ನೋಂದಾಯಿಸಿ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸದೆಯೂ ನೇರವಾಗಿ ಆರೋಗ್ಯ ಕೇಂದ್ರಕ್ಕೆ ತೆರಳಿ ಸ್ಥಳದಲ್ಲಿಯೇ ಹೆಸರು ನೋಂದಾಯಿಸಿಕೊಂಡು ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಉಚಿತವಾಗಿ ಖಾಸಗಿ ಆಸ್ಪತ್ರೆಗಳಲ್ಲಿ 250ರೂ. ಶುಲ್ಕ ಪಾವತಿಸಿ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ ಅವರು 2ನೇ ಹಂತದ ಲಸಿಕೆಯನ್ನು ಪಡೆದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿ ಡಾ. ನಾಗರಾಜನಾಯ್ಕ್, ಜಿಲ್ಲಾ ಕುಷ್ಟರೋಗ ಮತ್ತು ಮಾನಸಿಕ ವೈದ್ಯಾಧಿಕಾರಿ ಡಾ. ಶಮಾ, ತಾಲೂಕು ಆರೋಗ್ಯಾಧಿಕಾರಿ ಚಂದ್ರಶೇಖರ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭೀಮಪ್ಪ ಸೇರಿದಂತೆ ಆರೋಗ್ಯ ಇಲಾಖೆಯ ವೈದ್ಯರು, ಆಶಾ ಕಾರ್ಯಕರ್ತರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post