ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಹುತೇಕ ಹೊಸ ಪ್ರತಿಭೆಗಳು ಸೇರಿ ನಿರ್ಮಿಸಿರುವ `ವಿಕಲ್ಪ’ #Vikalpa ಕನ್ನಡ ಚಲನಚಿತ್ರ ಜ.30ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಆ ಚಿತ್ರದ ನಾಟಕನಟ ಮತ್ತು ನಿರ್ದೇಶಕ ಪೃಥ್ವಿರಾಜ್ ಪಾಟೀಲ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಚಲನಚಿತ್ರ ಒಂದು ಸೈಕಾಲಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿದ ಚಿತ್ರವಾಗಿದೆ. ಮನುಷ್ಯನ ಮನಸ್ಸಿನಲ್ಲಿರುವ ಸುಪ್ತ ಭಾವನೆಗಳು ತುಮುಲ ತಲ್ಲಣಗಳನ್ನು ಈ ಚಿತ್ರದ ಮೂಲಕ ತೆರೆಯ ಮೇಲೆ ತರಲಾಗಿದೆ ಎಂದ ಅವರು, `ವಿಕಲ್ಪ’ ಎಂದರೆ ವಾಸ್ತವ ಮತ್ತು ಕಲ್ಪನೆಗಳ ನಡುವಿನ ಒಂದು ಸ್ಥಿತಿ ಎಂದರ್ಥ. ಚಿತ್ರದ ಶೀರ್ಷಿಕೆಯ ಪ್ರಕಾರ ಇದೊಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥೆಯಾಗಿದೆ ಎಂದು ಅನಿಸಿದರೂ ಇದೊಂದು ಸಂಪೂರ್ಣ ಥ್ರಿಲ್ಲರ್‍ಚಿತ್ರ ಎನ್ನುವುದು ವಿಶೇಷವಾಗಿದೆ. ಇದರ ಜೊತೆಗೆ ನವಿರಾದ ಹಾಸ್ಯ ಮತ್ತು ಮನೋರಂಜನೆಗೆ ಹೆಚ್ಚಿನ ಒತ್ತು ಕೊಟ್ಟು ಇಡೀ ಚಿತ್ರಕಥೆಯನ್ನು ಹೆಣೆಯಲಾಗಿದೆ. ಈ ಚಿತ್ರಕ್ಕೆ ಚಿತ್ರದ ಕಥೆಯೇ ಹೀರೋ ಆಗಿದ್ದು ನೋಡುಗರ ಮನಮುಟ್ಟುತ್ತವೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ಅನೇಕ ನುರಿತ ಮಾನಸಿಕ ವೈದ್ಯರ ಸಲಹೆ ಮೇರೆಗೆ ಈ ಚಿತ್ರದ ಹಲವು ಸನ್ನಿವೇಶಗಳನ್ನು ಚಿತ್ರಿಸಲಾಗಿದೆ. ಬೆಂಗಳೂರು, ಶಿವಮೊಗ್ಗ ತೀರ್ಥಹಳ್ಳಿ, ಸಾಗರ, ಶಿರಸಿ, ಕುಂದಾಪುರ, ಯಲ್ಲಾಪುರ ಮೊದಲಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಲ್ಲದೆ ಸಿಂಗಾಪುರ, ನೆದರ್‍ಲ್ಯಾಂಡ್ ಸೇರಿದಂತೆ ವಿದೇಶಗಳಲ್ಲಿಯೂ ಚಿತ್ರೀಕರಣ ಮಾಡಲಾಗಿದೆ ಎಂದರು.
ಚಿತ್ರಕ್ಕೆ ಮಿಥುನ್ ತೀರ್ಥಹಳ್ಳಿ ಸಹನಿರ್ದೇಶನ, ಅಭಿರಾಮ್‍ಗೌಡ ಅವರ ಕ್ಯಾಮೇರಾದಲ್ಲಿ ಸುಂದರ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಖ್ಯಾತ ಸಂಕಲನಾಕಾರ ಸುರೇಶ್ ಆರ್ಮುಗಂ ಚಿತ್ರದ ಸಂಕಲನ ಮಾಡಿದ್ದಾರೆ. ವಿಭಿನ್ನ ಹಾಡುಗಳಿಗೆ ಸಂವತ್ಸರ ಸಂಗೀತ ಸಂಯೋಜಿಸಿದ್ದು, ಪೃಥ್ವಿರಾಜ್ ಪಾಟೀಲ್ ಮತ್ತು ಕೌಂಡಿನ್ಯ ಕುಡ್ಲುತೋಟ ಅವರು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಸಿದ್ಧಾರ್ಥ ಬೆಳ್ಮಣ್ಣು, ಸಂವತ್ಸರ, ಶ್ರೀರಂಜಿನಿ, ಇಂಚರ ಮೊದಲಾದ ಗಾಯಕರ ಧ್ವನಿಯಲ್ಲಿ ಹಾಡುಗಳು ಮೂಡಿಬಂದಿವೆ. ಈಗಾಗಲೇ ಚಿತ್ರದ ಟೀಸರ್, ಹಾಡುಗಳು ಮತ್ತು ಟ್ರೈಲರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಮೆಚ್ಚುಗೆ ಪಡೆದುಕೊಂಡಿದೆ ಎಂದು ತಿಳಿಸಿದರು.
ತಾರಾಗಣದಲ್ಲಿ ನಾಗಶ್ರೀ ಹೆಬ್ಬಾರ್, ಹರಿಣಿಶ್ರೀಕಾಂತ್, ಸಂಧ್ಯಾವಿನಾಯಕ್, ಗಣಪತಿ ವಡ್ಡಿನಗದ್ದೆ, ಪ್ರಜ್ಞಾ ಗಣಪತಿ, ಮಾಧವ್‍ಶರ್ಮಾ, ಸ್ವರೂಪ್ ಬಚ್ಚ, ಪೂಜಾ ಬಚ್ಚ, ಜಯಂತ್ ಡೇವಿಡ್, ಡಾ. ಪ್ರಕೃತಿ, ಮಾಸ್ಟರ್ ಆಯುಷ್, ಸಂತೋಷ್, ಗಿರೀಶ್ ಹೆಗಡೆ, ಗೋಡೆ ನಾರಾಯಣ ಹೆಗಡೆ ಮೊದಲಾದವರಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಯಕಿ ನಟಿ, ನಾಗಶ್ರೀ ಹೆಬ್ಬಾರ್, ಮಾಧವ್‍ಶರ್ಮಾ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 
















