ಕಳೆದ ಒಂದು ತಿಂಗಳಿನಿಂದ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆ ಎಂಬ ಸುದ್ದಿ ಹರಡಿದ್ದು, ಇದಕ್ಕೆ ಪೂರ್ಣವಿರಾಮ ನೀಡಿ ನಿರೀಕ್ಷೆಯಂತೆ ನಾಳೆ ಬೆಳಿಗ್ಗೆ 10:30ಕ್ಕೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ Congress ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಜೆಡಿಎಸ್ ಮುಖಂಡ ಹಾಗೂ ಮಾಜಿ ಸಂಸದ ಆಯನೂರು ಮಂಜುನಾಥ್ Ayanuru Manjunath ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಅವಕಾಶವಿತ್ತು. ಕಾರಣಾಂತರಗಳಿಂದ ಆಗಿರಲಿಲ್ಲ. ಈಗ ಅವಕಾಶ ಸಿಕ್ಕಿದೆ. ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಎಲ್ಲರೂ ಸೇರಿ ಶಕ್ತಿ ಹಾಗೂ ಸಮಯ ನೀಡುತ್ತೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೆ. ಆದರೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ನಿಂದ ಅವಕಾಶ ಸಿಕ್ಕಿದ್ದರಿಂದ ಸ್ಪರ್ಧೆ ಮಾಡಿದ್ದೆ ಎಂದರು.
ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಸೇರ್ಪಡೆಗೆ ಒಳ್ಳೆಯ ಅವಕಾಶವಿದೆ ಹಾಗೂ ಸಹಕಾರ ದೊರೆಯುತ್ತದೆ ಎಂಬ ವಿಶ್ವಾಸದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದು, ಯಾವುದೇ ಷರತ್ತು ಇಲ್ಲದೆ ಸೇರ್ಪಡೆಗೊಳ್ಳುತ್ತಿದ್ದು, ವಿಧಾನ ಪರಿಷತ್‍ನ ಪದವೀಧರರ ಕ್ಷೇತ್ರ ಹಾಗೂ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷ ಅವಕಾಶ ನೀಡಿದರೆ ಸ್ಪರ್ಧೆ ಮಾಡುತ್ತೇನೆ ಎಂದರು.
ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ಕೆಲವರು ವಿರೋಧ ಮಾಡುವುದು ಸಹಜ. ಆದರೆ ಶೇ.99ರಷ್ಟು ಮುಖಂಡರು ಹಾಗೂ ಕಾರ್ಯಕರ್ತರು ಸ್ವಾಗತಿಸಿದ್ದಾರೆ. ಆದರೆ ಪಾಲಿಕೆ ಸದಸ್ಯ ಹೆಚ್.ಸಿ.ಯೋಗೀಶ್, ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುವುದಕ್ಕೆ ವಿರೋಧಿಸಿದ್ದಾರೆ. ಅವರು ನನ್ನ ಚಿಕ್ಕ ಗೆಳೆಯ. ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದ ಅವರು, ನನ್ನ ನೂರಾರು ಬೆಂಬಲಿಗರು ಸಹ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.
Also read: ಆ.25ರಂದು ಬಸವಣ್ಣನವರ 38 ವಚನಗಳ ನೃತ್ಯ ರೂಪಕ
ಕಳೆದ ವಿಧಾನಸಭೆ ಚುನಾವಣೆಯಲ್ಲಿ Assembly Election ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ ಅವಕಾಶ ನೀಡಿತ್ತು. ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನನ್ನ ಗೆಲುವಿಗೆ ಸಾಕಷ್ಟು ಶ್ರಮವಹಿಸಿದ್ದರು. ಆದರೂ ಸೋಲು ಅನುಭವಿಸಬೇಕಾಯಿತು. ಜೆಡಿಎಸ್‍ನಲ್ಲಿ ಯಾವುದೇ ಗೊಂದಲ ಇರಲಿಲ್ಲ. ಆದರೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಸೇರುತ್ತಿದ್ದು, ಜೆಡಿಎಸ್ ತೊರೆಯುತ್ತಿರುವುದು ಬೇಸರವಿಲ್ಲ ಎಂದರು.
ನನ್ನೊಂದಿಗೆ ಜೆಡಿಎಸ್‍ಗೆ ಬಂದ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು, ಕಾಂಗ್ರೆಸ್‍ನಿಂದ 2018ರ ಚುನಾವಣೆಯಲ್ಲಿ ಸ್ಪರ್ಧಿಸಿ 59 ಸಾವಿರಕ್ಕೂ ಹೆಚ್ಚು ಮತ ಪಡೆದು ಸೋಲು ಅನುಭವಿಸಿದ್ದರು. ಆದರೆ ಪಕ್ಷದ ಕೆಲವರ ವರ್ತನೆಯಿಂದಾಗಿ ಬೇಸತ್ತು ಕಾಂಗ್ರೆಸ್ ತೊರೆದು ಜೆಡಿಎಸ್‍ಗೆ ಬಂದರು. ಈಗ ಅವರು ಕಾಂಗ್ರೆಸ್ ಸೇರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಂಬರುವ ದಿನಗಳಲ್ಲಿ ಸೇರಲೂಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ, ಪ್ರಮುಖರಾದ ಪರಂಧಾಮ ರೆಡ್ಡಿ, ಮಹೇಂದ್ರನಾಥ್, ಶಿ.ಜು. ಪಾಶಾ, ಲೋಕೇಶ್, ಐಡಿಯಲ್ ಗೋಪಿ, ಆಯನೂರು ಸಂತೋಷ್, ಎಸ್.ಪಿ. ಪಾಟೀಲ್, ರಿಯಾಜ್ ಅಹ್ಮದ್, ಸಯ್ಯದ್ ಶಫಿವುಲ್ಲಾ, ಹಿರಣ್ಣಯ್ಯ, ಲಕ್ಷ್ಮಣಪ್ಪ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post