ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೃಷಿಯಲ್ಲಿ ಕಡಿಮೆ ಖರ್ಚು ಮಾಡಿ, ಹೆಚ್ಚು ಇಳುವರಿ ತೆಗೆಯುವಂತಾಗಬೇಕಿದ್ದು, ಇದಕ್ಕಾಗಿ ಲ್ಯಾಬ್ ಟು ಲ್ಯಾಂಡ್ ಎಂಬುದು ಸರ್ಕಾರದ ಕಲ್ಪನೆಯಾಗಿದೆ ಎಂದು ಕೃಷಿ ಸಚಿವ ಚೆಲುವನಾರಾಯಣ ಸ್ವಾಮಿ ಹೇಳಿದ್ದಾರೆ.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿ-ತೋಟಗಾರಿಕೆ ಮೇಳೆ -2025 ಉದ್ಘಾಟಿಸಿ ಅವರು ಮಾತನಾಡಿದರು.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ಕಡಿಮೆ ಖರ್ಚು ಮಾಡಿ ಹೆಚ್ಚು ಇಳುವರಿ ನೀಡುವ ಬೆಳೆಗಳನ್ನು ನೀಡುವ ತಳಿಗಳನ್ನು ನೀಡಲು ವಿಶ್ವವಿದ್ಯಾಲಯಗಳು ಶ್ರಮಿಸುತ್ತಿವೆ. ಲ್ಯಾಬ್ ಟು ಲ್ಯಾಂಡ್ ಎಂಬುದು ಸರ್ಕಾರದ ಪರಿಕಲ್ಪನೆಯಾಗಿದ್ದು ವಿಜ್ಞಾನಿಗಳು ಮತ್ತು ರೈತರು ಸಂಪರ್ಕದಲ್ಲಿರಬೇಕು ಎಂದರು.
ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಮತ್ತು ಆದಾಯ ನೀಡುವ ಬೆಳೆಗಳನ್ನು ನೀಡುವ ಉದ್ದೇಶದಿಂದ ಇಂತಹ ಕೃಷಿ ಮೇಳಗಳನ್ನು ಆಯೋಜಿಸಲಾಗಿದ್ದು, ಇದನ್ನು ಬಳಸಿಕೊಂಡು ರೈತರು ಉದ್ಯಮಿಗಳಾಗಿ ಬಲವರ್ಧನೆಗೊಳ್ಳಬೇಕು ಎಂದು ಕರೆ ನೀಡಿದರು.
ಎಂಒ 4 ತಳಿ ನೀಡಲು ಬದ್ದ
ಅತ್ಯುತ್ತಮ ಕೃಷಿ ಮೇಳ ಮತ್ತು ಪ್ರದರ್ಶವನ್ನು ಏರ್ಪಡಿಸಲಾಗಿದ್ದು, ಭತ್ತದ ಮತ್ತು ಇತರೆ ಉತ್ತಮ ತಳಿಗಳನ್ನು ಬಿಡುಗಡೆಗೊಳಿಸಲಾಗಿದೆ. ರೈತರಿಗೆ ವಿಶ್ವವಿದ್ಯಾಲಯ ನೀಡಾಬೇಕಾಗಿರುವುದು ಇದನ್ನೇ. ಕೃಷಿಯನ್ನು ಉದ್ದಿಮೆಯಾಗಿ ಪರಿವರ್ತಿಸಿ ರೈತರಿಗೆ ಉತ್ತಮ ಆದಾಯ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಸೌಲಭ್ಯಗಳು, ಕಾರ್ಯಕ್ರಮಗಳನ್ನು ನೀಡುತ್ತಿವೆ. ಕೆಪೆಕ್ ಸಂಸ್ಥೆಯು ರಾಜ್ಯದಲ್ಲಿ 5 ಸಾವಿರ ಘಟಕಗಳಿಗೆ ಸಬ್ಸಿಡಿ ನೀಡಿದೆ ಎಂದ ಅವರು ರೈತರಿಗೆ ಎಂಒ 4 ತಳಿಯನ್ನು ನೀಡಲು ಕೃಷಿ ಇಲಾಖೆ ಮತ್ತು ವಿಶ್ವವಿದ್ಯಾಲಯಗಳು ಬದ್ದವಾಗಿದೆ.
ಫಿಲಿಫೈನ್ಸ್ ದೇಶದಲ್ಲಿ ಸುಮಾರು 25 ರಿಂದ 30 ದಿನಗಳ ಕಾಲ ಮಳೆ ನಿರಂತರವಾಗಿ ಬಂದರೂ ಹಾನಿಯಾಗದಂತಹ ಭತ್ತದ ತಳಿಯನ್ನು ಕಂಡು ಹಿಡಿದಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ವಿಜ್ಞಾನಿಗಳೂ ರೈತರಿಗೆ ಇಂತಹ ತಳಿಗಳನ್ನು ಸಂಶೋಧಿಸಿ ನೀಡುವರು ಎಂದು ಭರವಸೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರಕ್ಕೆ ಅಭಾವ ಉಂಟಾಗಿಲ್ಲ. ಸಾಕಷ್ಟು ಪೂರೈಕೆ ಮಾಡಲಾಗಿದೆ. ಕೇಂದ್ರದಿಂದ 3.5 ಲಕ್ಷ ಮೆ.ಟನ್ ಗೊಬ್ಬರ ಸರಬರಾಜು ಕೊರತೆಯಾದರೂ ರೈತರಿಗೆ ತೊಂದರೆಯಾಗದಅತೆ ಕ್ರಮ ವಹಿಸಲಾಗಿದೆ. ಕೃಷಿ ಕೃಷಿ ಹೊಂಡ ಯಾರು ಎಷ್ಟು ಬೇಕಾದರೂ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರಯೋಗಾಲಯ ಬಲವರ್ಧನೆ ಮಾಡುವ ಕೆಲಸ ಆಗುತ್ತಿದೆ. ರೈತರು ಮಣ್ಣು ಪರೀಕ್ಷೆ ಮಾಡಿಸಿ ಎಂದ ಅವರು ಇಡೀ ರಾಜ್ಯದಲ್ಲಿ ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಉತ್ಪನ್ನಗಳ ಮೌಲ್ಯವರ್ಧನೆಯಾಗಲಿ
ಮಲೆನಾಡಿನಲ್ಲಿ ಅಡಿಕೆ ಬೆಳೆ ಹೆಚ್ಚಾಗಿದೆ. 20 ರಿಂದ 27 ಲಕ್ಷ ಹೆಕ್ಟೇರ್ ಬೆಳೆ ಹೆಚ್ಚಾಗಿದೆ. ಕೃಷಿಗೆ ಹೆಚ್ಚಿನ ಆದ್ಯತೆ ನೀಡಲು ಮೂಡಿಗೆರೆ, ದಾವಣಗೆರೆ, ಬೆಳಗಾವಿ, ಬೆಂಗಳೂರು ಮತ್ತು ಮಂಡ್ಯದಲ್ಲಿ ಕೃಷಿ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಕಳೆದ ಬಾರಿ ಮಳೆಗೆ 13 ರಿಂದ 16 ಲಕ್ಷ ಹೆ. ಬೆಳೆ ನಷ್ಟ ಸಂಭವಿಸಿದ್ದು ಎನ್’ಡಿಆರ್’ಎಫ್ ಪರಿಹಾರದ ಜೊತೆಗೆ ರಾಜ್ಯ ಸರ್ಕಾರ ರೂ.8.5 ಸಾವಿರ ಪರಿಹಾರ ನೀಡುತ್ತಿದೆ ಎಂದ ಅವರು ರೈತರ ಆದಾಯ ಹೆಚ್ಚಿಸಲು ಸರ್ಕಾರ ಎಲ್ಲ ರೀತಿಯಿಂದ ಸಹಕರಿಸುತ್ತಿದೆ. ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಉತ್ತಮ ಬೆಲೆ ಪಡೆಯಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯಾನಾಯ್ಕ ಮಾತನಾಡಿದರು.
ಇದೇ ವೇಳೆ ಉತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿಯನ್ನು ವಿತರಣೆ ಮಾಡಿ ಗೌರವಿಸಲಾಯಿತು.
ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್ ಕೆ, ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ಕೃಷಿಕ ಸಮಾಜದ ರಾಜ್ಯಾಕ್ಷಧ್ಯಕ್ಷ ಎಸ್.ಆರ್. ಮಜುನಾಥ ಗೌಡ, ಡಾ.ಹನುಮಂತಪ್ಪ, ಆಡಳಿತ ಮಂಡಳಿ ಸದಸ್ಯರಾದ ಬಿ.ಕೆ. ಕುಮಾರಸ್ವಾಮಿ, ಜೆ.ಜೆ. ಕಾವೇರಪ್ಪ, ದೇವಿಕುಮಾರ್, ಹಾಪ್’ಕಾಮ್ಸ್ ಅಧ್ಯಕ್ಷ ವಿಜಯ ಕುಮಾರ್, ರಾಮಕೃಷ್ಣ ಆಶ್ರಮದ ವಿನಯಾನಂದ ಸರಸ್ವತಿ ಸ್ವಾಮೀಜಿ, ವಿವಿಧ ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು, ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು, ವಿಶ್ವವಿದ್ಯಾಲಯದ ಅಧಿಕಾರಿ ವರ್ಗದವರು, ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ರೈತರು ಭಾಗವಹಿಸಿದ್ದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಬಿ.ಸಿ. ಟ್ರಸ್ಟ್ ಇವರ ಸಹಯೋಗದೊಂದಿಗೆ ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ ಶೀರ್ಷಿಕೆ ಅಡಿಯಲ್ಲಿ ಇಂದಿನಿಂದ ಮೇಳವನ್ನು ಆಯೋಜಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















