ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ಪ್ರತಿಯೊಂದು ವಿಷಯಗಳಲ್ಲಿರುವ ವಾಸ್ತವ ಪ್ರಾಮುಖ್ಯತೆಯನ್ನು ಅರಿತು ಕಲಿಕೆ ಮುಂದುವರೆಸಿ ಎಂದು ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಮಿಷನ್ ಯೋಜನಾ ನಿರ್ದೇಶಕಿ ಚೈತ್ರಾ ರಾವ್ ಸಲಹೆ ನೀಡಿದರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪದವಿ ಹಂತದಲ್ಲಿ ಕಲಿಯುವ ಇನ್ಟಿಗ್ರೇಷನ್ ಮತ್ತು ಡಿಫರೆಸ್ನಿಯೇಷನ್ ವಿಷಯಗಳು ರಾಕೆಟ್ ವಿಜ್ಞಾನದಲ್ಲಿ ಬಳಸಲಾಗುತ್ತದೆ. ಅದೇ ರೀತಿ ಯಾವುದೇ ವಿಷಯಗಳನ್ನು ನಾವು ಕಲಿಯುವಾಗ, ಅದರ ವಾಸ್ತವ ಬಳಕೆಯನ್ನು ಅರಿತುಕೊಳ್ಳುವುದು ಅತಿ ಮುಖ್ಯ. ಬದುಕಿನ ಹೊಸ ಜವಾಬ್ದಾರಿಗಳು ಅಂತಹ ಜ್ಞಾನದ ಅವಶ್ಯಕತೆಯನ್ನು ಒತ್ತಿ ಹೇಳುತ್ತದೆ.

ಸಿಗಂದೂರು ಸೇತುವೆಯ ಉಸ್ತುವಾರಿ ಅಧಿಕಾರಿ ಪೀರ್ ಪಾಷಾ ಮಾತನಾಡಿ, ಭವಿಷ್ಯದ ಭಾರತ ನಿರ್ಮಾಣದಲ್ಲಿ ಇಂಜಿನಿಯರ್ ಗಳ ಪಾತ್ರ ಮಹತ್ವದ್ದು. ಸರ್.ಎಂ. ವಿಶ್ವೇಶ್ವರಯ್ಯ ಅವರಂತಹ ಸೃಜನಶೀಲ ಇಂಜಿನಿಯರ್, ಮುಂದಿನ ಪೀಳಿಗೆಗೆ ಎಂದೆಂದಿಗೂ ಸ್ಪೂರ್ತಿದಾಯಕ. ರಸ್ತೆ ಸಂಪರ್ಕ ಅಭಿವೃದ್ಧಿಯಲ್ಲಿ ಅಮೆರಿಕ ದೇಶಕ್ಕೆ ಪೈಪೋಟಿ ನೀಡುವಲ್ಲಿ ಭಾರತ ಯಶಸ್ವಿಯಾಗಿದೆ ಎಂಬುದು ಹೆಮ್ಮೆಯ ವಿಚಾರ. ಇದೆಲ್ಲ ಸಾಧ್ಯವಾಗಿದ್ದು ಕೌಶಲ್ಯಾಧಾರಿತ ಇಂಜಿನಿಯರ್ ಗಳಿಂದ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ರೈತನ ಕೈಯಿಗೆ ಅಂಟಿದ ಮಣ್ಣು, ಸೈನಿಕನ ಕೈಯಿಗೆ ಅಂಟಿದ ರಕ್ತ, ಶಿಕ್ಷಕರ ಕೈಯಿಗೆ ಅಂಟಿದ ಸೀಮೆ ಸುಣ್ಣ ದೇಶವನ್ನೆ ಬದಲಾಯಿಸುವ ಶಕ್ತಿ ಹೊಂದಿದೆ. ಓದು ಬರವಣಿಗೆ ಜೊತೆಗೆ ವಿನಯ ವಿನಮ್ರತೆ ಕಲಿಸುವುದು ನಿಜವಾದ ವಿದ್ಯಾಭ್ಯಾಸ. ಸಂಸ್ಕಾರಯುತ ಶಿಕ್ಷಣದ ಜೊತೆಗೆ ಮಾನವೀಯ ಸಂಪನ್ಮೂಲಗಳನ್ನು ಸೃಷ್ಟಿಸುವತ್ತ ವಿದ್ಯಾಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಒಳ್ಳೆಯ ಸ್ವಭಾವ ಗಣಿತದಲ್ಲಿರುವ ಶೂನ್ಯದಂತೆ, ಏಕೆಂದರೆ ಯಾರ ಜೊತೆ ಇರುತ್ತಾರೆ ಅವರ ಬೆಲೆ ಹೆಚ್ಚುತ್ತಾ ಹೋಗುತ್ತದೆ. ಭಾಷೆಯನ್ನು ಬೆಳೆಸಲು ಕಂಕಣ ಬದ್ದರಾಗಿ, ಎಲ್ಲಿ ಭಾಷೆ ಸೋಲುತ್ತದೆ ಅಲ್ಲಿ ನಮ್ಮ ಸಂಸ್ಕೃತಿ ಸೋಲುತ್ತದೆ ಎಂದು ಹೇಳಿದರು.

ಎನ್ಇಎಸ್ ಸಂಸ್ಥೆಯ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಪಿ.ಮೈಲಾರಪ್ಪ, ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಹೆಚ್.ಸಿ.ಶಿವಕುಮಾರ್, ಎಸ್.ಮಧುರಾವ್, ಎಂ.ಆರ್.ಸೀತಾಲಕ್ಷ್ಮೀ, ಎಂ.ಎಸ್.ಅನಂತದತ್ತ, ಜಿ.ಎನ್.ಸುಧೀರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಂಸಿಎ ವಿದ್ಯಾರ್ಥಿ ಅನುಶ್ರೀ ಪ್ರಾರ್ಥಿಸಿದರು, ಡಾ.ಎಚ್.ಬಿ.ಸುರೇಶ್ ನಿರೂಪಿಸಿ, ದಿವ್ಯ ವಂದಿಸಿದರು. ಇದೇ ವೇಳೆ ಕಾಲೇಜಿನ ಕೈಪಿಡಿ ಬಿಡುಗಡೆಗೊಳಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post