ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗಾಳಿ, ನೀರು, ಬೆಳಕು, ಆಹಾರ, ಚಟುವಟಿಕೆ ಹಾಗೂ ಮನಸ್ಸು ಈ ಆರು ಅಂಶಗಳು ನಮ್ಮನ್ನು ಕಾಪಾಡುವ ಆರೂ ಶ್ರೇಷ್ಠ ವೈದ್ಯರುಗಳು ಎಂದು ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ವಿಭಾಗದ ಅಧ್ಯಕ್ಷ ಡಾ. ಕೆ.ಆರ್. ರವೀಶ್ ಹೇಳಿದರು.
ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಪ್ರಾಣಿಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ವಿಭಾಗ, ಐಕ್ಯೂ ಎಸಿ ಹಾಗೂ ಭಾರತೀಯ ವೈದ್ಯಕೀಯ ಸಂಘ, ಶಿವಮೊಗ್ಗ ಶಾಖೆ ಸಹಯೋಗದಲ್ಲಿ ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ಒಂದು ಆರೋಗ್ಯ ದಿನ 2025 ಆಚರಣೆಯ ಪ್ರಯುಕ್ತ ಹವಾಮಾನ ಬದಲಾವಣೆ ಹಾಗೂ ಆರೋಗ್ಯ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರತಿಯೊಬ್ಬರು ಚಟುವಟಿಕೆಯಿಂದ ಜೀವನ ನಡೆಸುವುದರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರ ಇದ್ದು ಉತ್ತಮ ಆರೋಗ್ಯವನ್ನು ರೂಪಿಸುವ ಗುಟ್ಟು ಅಡಗಿದೆ ಎಂದರು.
ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುತ್ತಿರುವ ಆರು ಮುಖ್ಯ ಹಾಗೂ ಶ್ರೇಷ್ಠ ವೈದ್ಯರುಗಳೆಂದರೆ ಗಾಳಿ, ನೀರು, ಬೆಳಕು, ಆಹಾರ, ಚಟುವಟಿಕೆ ಮತ್ತು ಮನಸ್ಸು. ಇವುಗಳ ಸಮತೋಲನವನ್ನು ಕಾಪಾಡಿಕೊಂಡು ಜೊತೆಯಲ್ಲಿ ಪರಿಸರವನ್ನು ಸಂರಕ್ಷಿಸಿಕೊಟಡು ಜೀವನ ನಡೆಸುವುದು ನಮ್ಮೆಲ್ಲ ಜವಾಬ್ದಾರಿ ಎಂದು ಕರೆ ಕೊಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ರಾಜೇಂದ್ರ ಚೆನ್ನಿ, ಭಾರತೀಯ ಸಾಹಿತ್ಯದ ಅತ್ಯುತ್ತಮ ಶ್ರೇಷ್ಠ ಲೇಖಕರಲ್ಲಿ ಒಬ್ಬರಾದ ಅಮೀತಾವ್ ಘೋಷ್ ಅವರನ್ನು ಉಲ್ಲೇಖಿಸಿ, ಮನುಷ್ಯರು ಇರುವ ಒಂದೇ ಭೂಮಿಯನ್ನು ನಾಶಗೊಳಿಸುತ್ತಿರುವುದು ಸಾಮೂಹಿಕ ಆತ್ಮಹತ್ಯೆಗೆ ಸಮಾನವಾಗಿದೆ. ಅದು ಒಂದು ಮಾನಸಿಕ ಹುಚ್ಚು ಎಂಬುದನ್ನು ನಾವು ಕಂಡುಕೊಳ್ಳಬೇಕಾಗಿದೆ ಎಂದರು.
ಸುಮಾರು 75 ದಶಲಕ್ಷ ಜನ ಭಾರತದಲ್ಲಿ ವಾಯುಮಾಲಿನ್ಯದಿಂದ ಸಾವನ್ನಪ್ಪುತ್ತಿದ್ದಾರೆ. ನಾವು ಭೂಮಿಯನ್ನು ಹೇಗೆ ಬೇಕು ಹಾಗೆ ಭೋಗಿಸಬಹುದು ಎಂಬ ಭ್ರಮೆಯಲ್ಲಿ ಬದುಕುತ್ತಿದ್ದೇವೆ. ಸಾಹಿತಿಗಳು ಸಾಹಿತ್ಯದಲ್ಲಿ ನೇರವಾಗಿ ಹವಾಮಾನ ವೈಪರೀತ್ಯದ ಬಗ್ಗೆ ಬರೆಯುವುದು ಕಲ್ಪನೆ ಎಂದಾಗುತ್ತದೆ. ಇಂತಹ ವಿಚಾರ ಸಂಕಿರಣಗಳು ಅವುಗಳನ್ನು ವಿಸ್ತಾರವಾಗಿ ತಿಳಿಸುವುದರಿಂದ ಜಾಗೃತಿ ಮೂಡಿಸಬಹುದು ಎಂದು ಅಭಿಪ್ರಾಯಪಟ್ಟರು.
ನಾವೀಗ 1.5 ಡಿಗ್ರಿ ತಾಪಮಾನ ಏರಿಕೆಯ ಅಂಚಿನಲ್ಲಿದ್ದೇವೆ. ಇದು ಹೆಚ್ಚಾದಲ್ಲಿ ಹಿಂತಿರುಗಲಾರದ ಸ್ಥಿತಿಗೆ ತಲುಪುತ್ತೇವೆ. ಇದನ್ನು ತಡೆಯಬೇಕಾದರೆ ಪ್ರತಿಯೊಬ್ಬರು ತಮ್ಮ ಮಟ್ಟದಲ್ಲಿ ಪರಿಸರ ರಕ್ಷಣೆಯ ಜೀವನ ಶೈಲಿ ಅಳವಡಿಸಿಕೊಳ್ಳಲೇಬೇಕು ಎಂದು ತಿಳಿಸಿದರು.
ಮಾನಸ ಟ್ರಸ್ಟ್ ನಿರ್ದೇಶಕರಾದ ಡಾ.ರಜನಿ ಎ. ಪೈ ಅವರು ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಆಡಳಿತ ನಿರ್ದೇಶಕರಾದ ಡಾ. ಪ್ರೀತಿ ವಿ. ಶಾನಭಾಗ್ ಅವರು ಹಾಗೂ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಶೈಕ್ಷಣಿಕ ಆಡಳಿತಾಧಿಕಾರಿಗಳಾದ ಪ್ರೊ. ರಾಮಚಂದ್ರ ಬಾಳಿಗ, ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಕೆ ಉಪಸ್ಥಿತರಿದ್ದರು.
ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ರಾಜೇಂದ್ರ ಚೆನ್ನಿ ಅವರನ್ನು ರಸಾಯನ ಶಾಸ್ತ ವಿಭಾಗದ ಮುಖ್ಯಸ್ಥೆ ಮಾಧುರಿಯವರು ಪರಿಚಯಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀಕಾಂತ್ ಅವರನ್ನು ಕು.ಸುಷ್ಮಿತಾ, ತೃತೀಯ ಬಿಎಸ್ಸಿ ಪರಿಚಯಿಸಿದರು. ಭೂಮಿಕಾ ಸ್ವಾಗತಿಸಿ, ಕುಮಾರ ಕಶಿಶ್ ವಂದಿಸಿದರು. ಆಮಿನಾ ಅಫ್ರೀನ್ ನಿರೂಪಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post