ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ರಾಜ್ಯದಲ್ಲಿ ಕೊರೋನಾ ಎರಡನೆಯ ಅಲೆ ಹೆಚ್ಚಾಗುತ್ತಿದ್ದು ಜಿಲ್ಲೆಯಲ್ಲಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಸ್ವಯಂ ಸೇವಾ ಸಂಸ್ಥೆಗಳು ತಮ್ಮ ಪ್ರಯತ್ನ ಮೀರಿ ಶ್ರಮಿಸುತ್ತಿವೆ. ಅದನ್ನು ಗಮನಿಸಿಯೂ ವಿರೋಧ ಪಕ್ಷದ ನಾಯಕರು ಕೇವಲ ಟೀಕೆ ಮಾಡುತ್ತಿರುವ ಬಗ್ಗೆ ಸಂಸದ ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ಧಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳ ನಾಯಕರ ಟೀಕೆಗಳಿಂದ, ಪ್ರತಿಭಟನೆಗಳಿಂದ ಕೊರೋನಾ ನಿಯಂತ್ರಣವಾಗುತ್ತದೆಯೇ ಎಂದು ಪ್ರಶ್ನಿಸಿದರು, ರಚನಾತ್ಮಕ ಸಲಹೆಗಳನ್ನು ನೀಡಿದರೆ ಸ್ವೀಕಾರ ಮಾಡಲಾಗುತ್ತದೆ ಎಂದು ಹೇಳಿದರು.
ಕೋವಿಡ್ ಲಸಿಕೆ ದಾಸ್ತಾನು ಲಸಿಕೆ ಬಂದಿಲ್ಲ ಎಂಬ ಕಾರಣಕ್ಕೆ ವಿರೋಧ ಪಕ್ಷದವರು ತೀರ್ಥಹಳ್ಳಿಯಲ್ಲಿ ಸರ್ಕಾರಿ ಆಸ್ಪತ್ರೆಯ ಬಾಗಿಲು ಹಾಕಿಸುವ ಪ್ರಯತ್ನ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಕೇಂದ್ರದಲ್ಲಿದ್ದುಕೊಂಡೇ ಶ್ರಮ ಪಡುತ್ತಿದ್ದರೂ ಕೂಡ ಅವರ ವಿರುದ್ಧ ಕ್ಷುಲ್ಲಕ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಲಸಿಕೆ ಕೊರತೆ ಇರುವುದು ನಿಜ:
ಲಸಿಕೆ ಕೊರತೆ ಇದೆ ನಿಜ. ಆದ್ಯತೆ ಮೇಲೆ ಲಸಿಕೆ ಬರುತ್ತಿದೆ. ಬೇಡಿಕೆ ಇರುವಷ್ಟು ಲಸಿಕೆ ಒಮ್ಮೆಲೆ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ದಾಸ್ತಾನು ಬಂದಂತೆ ನೀಡಲಾಗುತ್ತಿದೆ. ರೆಮ್‌ಡಿಸಿಯರ್ ಲಸಿಕೆ ಕಳೆದ ವರ್ಷ ಉತ್ಪಾದನೆ ಕಡಿಮೆ ಇತ್ತು. ಈ ವರ್ಷ ಪ್ರಸಕ್ತ ಅವಧಿಗೆ 1 ಕೋಟಿ ಡೋಸ್ ಸಿದ್ಧವಿದೆ. ಬೇಡಿಕೆ ಇರುವಷ್ಟು ಮಾತ್ರ ಉತ್ಪಾದನೆ ಮಾಡಬಹುದು. 3 ತಿಂಗಳ ಬಳಿಕ ಇದನ್ನು ಇಡಲು ಬರುವುದಿಲ್ಲ ಎಂದು ಹೇಳಿದರು.
ಬ್ಲಾಕ್ ಫಂಗಸ್‌ಗೂ ಔಷಧ ಉತ್ಪಾದನೆ:
ಬ್ಲಾಕ್ ಫಂಗಸ್‌ಗೂ ಔಷಧ ಉತ್ಪಾದನೆ ಹೆಚ್ಚು ಮಾಡಲಾಗಿದೆ. 1050 ಎಲ್‌ಎಸ್(ವಾಲ್ಸ್) ಔಷಧ ರಾಜ್ಯಕ್ಕೆ ಈಗಾಗಲೇ ಬಂದಿದೆ. ರಾಜ್ಯದಲ್ಲಿ ಆಕ್ಸಿಜನ್ ಬೆಡ್‌ಗಳ ಸಂಖ್ಯೆ ಹಾಗೂ ಇತರೆ ಸೌಲಭ್ಯಗಳನ್ನು ಹೆಚ್ಚಳ ಮಾಡಲಾಗಿದೆ ಎಂದರು.
ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಪ್ರತಿ ದಿನ 2 ಟ್ಯಾಂಕರ್ ಆಕ್ಸಿಜನ್ ಬರುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲಿಯೂ ಕೋವಿಡ್ ಕೇರ್ ಸೆಂಟರ್ ನಿರ್ಮಿಸಲಾಗಿದ್ದು, ಶಿಕಾರಿಪುರ, ಶಿರಾಳಕೊಪ್ಪದಲ್ಲಿಯೂ ಕೂಡ ಆಕ್ಸಿಜನ್ ಬೆಡ್ ಮಾಡಲಾಗಿದೆ. ಇನ್ನೂ ವ್ಯವಸ್ಥೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತಿದ್ದರೂ ವಿರೋಧ ಪಕ್ಷಗಳು ಅನಾವಶ್ಯಕ ಗೊಂದಲ ಸೃಷ್ಟಿಸುತ್ತಿವೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮೇಯರ್ ಸುನೀತ ಅಣ್ಣಪ್ಪ, ಸೂಡಾ ಅಧ್ಯಕ್ಷ ಎಸ್. ಎಸ್. ಜ್ಯೋತಿ ಪ್ರಕಾಶ್, ಕೆಎಸ್‌ಐಡಿಸಿ ಉಪಾಧ್ಯಕ್ಷ ಎಸ್. ದತ್ತಾತ್ರಿ, ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ಡಿ.ಎಸ್. ಅರುಣ್ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post