ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯ ಮರಳು ಕ್ವಾರಿ ಘಟಕಗಳಲ್ಲಿ ಮರಳು ಎತ್ತಲು ಪರವಾನಿಗೆ ಹೊಂದಿರುವ ಕ್ವಾರಿಗಳ ನಿರ್ವಾಹಕರು ಇಲಾಖಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹಾಗೂ ನಿಯಮಗಳನ್ನು ಧಿಕ್ಕರಿಸುವವರ ವಿರುದ್ಧ ಕಾನೂನು ಕ್ರಮ ಅನಿವಾರ್ಯವಾಗಲಿದೆ ಅಲ್ಲದೇ ನೀಡಿರುವ ಪರವಾನಿಗೆ ರದ್ದುಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಮರಳು ಕ್ವಾರಿಗಳ ನಿರ್ವಹಣೆ ಹಾಗೂ ಗಣಿಗಾರಿಕೆ ಪುನರಾರಂಬಿಸುವ ಕುರಿತು ಏರ್ಪಡಿಸಲಾಗಿದ್ದ ಮರಳು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮರಳು ಕ್ವಾರಿಗಳ ಸಂಪರ್ಕ ರಸ್ತೆಯನ್ನು ಸಂಚಾರಕ್ಕೆ ಅನುಕೂಲವಾಗುವಂತೆ ಸರಿಪಡಿಸಿಕೊಳ್ಳುವುದರ ಜೊತೆಗೆ ಕ್ವಾರಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿಕೊಂಡು ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅವರು ಸೂಚಿಸಿದರು.
ಮರಳು ಸಾಗಾಟ ಮಾಡುವ ಸ್ಥಳಗಳಲ್ಲಿ ಆರಂಭಿಸಲಾಗಿರುವ ಚೆಕ್’ಪೋಸ್ಟ್‌ಗಳಲ್ಲಿ ಇಲಾಖೆಯ ಸಿಬ್ಬಂದಿಗಳು, ಓರ್ವ ಹೋಂಗಾರ್ಡ್‌ನ್ನು ನಿಯೋಜಿಸುವುದರ ಜೊತೆಗೆ ಸಿಸಿ ಕ್ಯಾಮರಾ ಅಳವಡಿಸಬೇಕು. ಕ್ವಾರಿ ಮತ್ತು ಚೆಕ್‌ಪೋಸ್ಟ್‌ಗಳ ಸಿಸಿ ಕ್ಯಾಮೆರಾಗಳ ಚಿತ್ರಿತ ದಾಖಲೆಗಳನ್ನು ವಾರಕ್ಕೊಮ್ಮೆ ಸಮೀಪದ ಪೊಲೀಸ್ ಠಾಣೆಗೆ ತಪಾಸಣೆಗಾಗಿ ತಲುಪಿಸುವಂತೆ ಅವರು ಸೂಚಿಸಿದರು.
ಮರಳು ಕ್ವಾರಿ ಇರುವ ತಾಲೂಕುಗಳಲ್ಲಿ ಆಯಾ ವ್ಯಾಪ್ತಿಯ ಉಪವಿಭಾಗಾಧಿಕಾರಿಗಳು ತಾಲೂಕು ಮಟ್ಟದ ಸಮಿತಿಗಳನ್ನು ರಚಿಸಿ, ಪ್ರತಿ ಮಾಹೆ ಸಭೆಯನ್ನು ಏರ್ಪಡಿಸಿ, ಮರಳು ವಿತರಣೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಬೇಕು. ಪ್ರಸ್ತುತ ಜಿಲ್ಲೆಯ ಕೆಲವು ಕ್ವಾರಿಗಳ ಪರವಾನಿಗೆ ಅವಧಿ ಪೂರ್ಣಗೊಂಡಿದ್ದು, ಅವುಗಳನ್ನು ಪುನರಾರಂಭಿಸಲು ಟೆಂಡರ್ ಕರೆಯುವಂತೆ ಸೂಚಿಸಿದ ಅವರು, ತೀರ್ಥಹಳ್ಳಿಯ ಸಿಬ್ಬಲುಗುಡ್ಡೆ ಕ್ವಾರಿಯ ಆರಂಭಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವರದಿ ನೀಡಿದ ನಂತರ ಕ್ವಾರಿ ಆರಂಭಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದ ಅವರು ಶಿವಮೊಗ್ಗ ತಾಲೂಕಿನ ಕೂಡ್ಲಿಯಲ್ಲಿನ ಮರಳು ಕ್ವಾರಿಗಳನ್ನು ರದ್ದುಪಡಿಸುವಂತೆ ಸ್ಥಳೀಯರು
ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಉಪವಿಭಾಗಾಧಿಕಾರಿಗಳು ಕೂಡಲೇ ವರದಿ ನೀಡುವಂತೆ ಅವರು ಸೂಚಿಸಿದರು.
ಮರಳು ಸಾಗಾಣೆ ಮಾಡುವ ಲಾರಿಗಳಿಗೆ ಕಡ್ಡಾಯವಾಗಿ ಜಿಪಿಎಸ್ ತಂತ್ರಾಂಶ ಅಳವಡಿಸುವಂತೆ ಸೂಚಿಸಲಾಗಿತ್ತು. ಆದರೂ ತಂತ್ರಾಂಶ ಅಳವಡಿಸಿಕೊಳ್ಳದಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಆದ್ದರಿಂದ ಮರಳು ತುಂಬುವ ಮೊದಲು ಅದನ್ನು ಖಚಿತಪಡಿಸಿಕೊಳ್ಳಬೇಕು. ಅಲ್ಲದೆ ಅಕ್ರಮವಾಗಿ ಮರಳು ಸಾಗಿಸುವ ಟ್ರಾಕ್ಟರ್ ಮತ್ತು ಲಾರಿಗಳಿಗೆ ಇಲಾಖೆಯ ನಿಯಮಾನುಸಾರ ಮರಳಿನ ಮೌಲ್ಯದ ಐದು ಪಟ್ಟು ಹೆಚ್ಚಳದ ದಂಡ ವಿಧಿಸುವುದಲ್ಲದೆ ಮೊಕದ್ದಮೆ ದಾಖಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಸ್ತುತ ಸರ್ಕಾರದ ಕಟ್ಟಡ ನಿರ್ಮಾಣ ಹಾಗೂ ದುರಸ್ತಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕ್ವಾರಿಗಳನ್ನು ಗುರುತಿಸಲಾಗಿದ್ದು, ಅಲ್ಲಿಂದಲೆ ಮರಳು ಪಡೆಯಲು ಸೂಚಿಸಲಾಗಿದೆ. ಆದಾಗ್ಯೂ ಯಾವುದೇ ಕಟ್ಟಡ ನಿರ್ಮಾಣಕ್ಕೆ ಮರಳಿನ ಕೊರತೆ ಇರುವ ಬಗ್ಗೆ ಗುತ್ತಿಗೆದಾರರು ಕಾರಣಗಳನ್ನು ಹೇಳುವಂತಿಲ್ಲ ಎಂದರು.
ಮರಳು ಸಾಗಿಸುವವರು ತಮ್ಮ ಸಂಗ್ರಹಣಾ ಸ್ಥಳ, ರಸ್ತೆ ಮಾರ್ಗ, ಪರವಾನಿಗೆ ದಿನಾಂಕ ಮತ್ತು ಸಮಯ ಹಾಗೂ ಕ್ವಾರಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವುದನ್ನು ಖಚಿತಪಡಿಸುವ ದಾಖಲೆಗಳನ್ನು ಸಂಬಂಧಿಸಿದವರು ಹೊಂದಿರಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು, ಉಪವಿಭಾಗಾಧಿಕಾರಿಗಳಾದ ಟಿ.ವಿ. ಪ್ರಕಾಶ್, ನಾಗರಾಜ್, ಹಿರಿಯ ಭೂವಿಜ್ಞಾನಿ ರಷ್ಮಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post