ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕನ್ನಡ ಸಂಸ್ಕೃತಿ ಇಲಾಖೆಯು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾರ್ಚ್ 8ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಮಹಿಳಾ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಗೌರವ ಉಪಸ್ಥಿತಿಯಲ್ಲಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್‌ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಸಂಸದ ಬಿ. ವೈ. ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಕುಮಾರ್ ಬಂಗಾರಪ್ಪ, ಬಿ.ಕೆ. ಸಂಗಮೇಶ್ವರ್, ಕೆ.ಬಿ. ಅಶೋಕ್ ನಾಯ್ಕ್, ಹಾಗೂ ವಿಧಾನ್ ಪರಿಷತ್ ಶಾಸಕರುಗಳು ಹಾಗೂ ನಗರದ ಪ್ರಮುಖ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ, ಮಹಾನಗರಪಾಲಿಕೆ ಆಯುಕ್ತ ಚಿದಾನಂದ ಎಸ್. ವಠಾರೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಎಂ. ಶಾಂತರಾಜು ಉಪಸ್ಥಿತರಿರುತ್ತಾರೆ.
ಅಂದು ಬೆಳಿಗ್ಗೆ 8:30ರಿಂದ ರಂಗೋಲಿ, ರಸಪ್ರಶ್ನೆ, ಆಶು ಅಭಿನಯ, ಚಿತ್ರಕಲೆ, ಅನಿಲ ರಹಿತ ಅಡುಗೆ, ಸಾಂಪ್ರದಾಯಿಕ ಉಡುಗೆ-ತೊಡುಗೆಗಳ ಸ್ಫರ್ಧೆ ನಡೆಯಲಿದೆ ಹಾಗೂ ಸುಗಮ ಸಂಗೀತ, ಗುಮಟೆ ವಾದನ, ಜಾನಪದ ನೃತ್ಯ, ಉಪನ್ಯಾಸ ಕಾರ್ಯಕ್ರಮ, ಡೊಳ್ಳುಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅಂದು ಸಂಜೆ 5:30ಕ್ಕೆ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಸಂಜೆ ಸಂಗೀತ ಸಂಜೆ ಮತ್ತು ನೃತ್ಯ ವೈವಿಧ್ಯ ಕಾರ್ಯಕ್ರಮವಿರಲಿದೆ. ಉತ್ಸವದಲ್ಲಿ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಹಾಗೂ ಆಹಾರ ಮಳಿಗೆಗಳನ್ನು ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹೆಚ್ ತಿಳಿಸಿದ್ದಾರೆ.
ಕೃಷಿ ವಿವಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ:
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಮಹಿಳಾ ದಿನಾಚರಣೆಯ ಪ್ರಯುಕ್ತ ಮಾರ್ಚ್ 8ರ ಮಧ್ಯಾಹ್ನ 2:30ಕ್ಕೆ ಕೃಷಿ ವಿಶ್ವವಿದ್ಯಾಲಯದ ವಿವಿಧೋದ್ದೇಶ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ-2021 ಕಾರ್ಯಕ್ರಮವನ್ನು ಆಯೋಜಿಸಿದೆ.
ಶಿವಮೊಗ್ಗದ ಸರ್ಕಾರಿ ವಸತಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲೆ ಉಮಾ ಬಿ. ನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಧಾರವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಪ್ರಜ್ಞಾ ಮತ್ತಿಹಳ್ಳಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ.
ಅರವಳಿಕೆ ವಿಭಾಗ ಸಿಮ್ಸ್ ಹಾಗೂ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಸಹ ಪ್ರಾಧ್ಯಾಪಕ ಡಾ. ಬಿ.ವಿ. ಚಂಪಾ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕುಲಪತಿ ಡಾ. ಎಂ. ಕೆ. ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಾಧ್ಯಾಪಕಿ ಡಾ. ಜಯಲಕ್ಷ್ಮೀ ನಾರಾಯಣ ಹೆಗಡೆ ಸೇರಿದಂತೆ ಮಹಿಳಾ ಸಿಬ್ಬಂದಿ ವರ್ಗ ಉಪಸ್ಥಿತರಿರಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post