ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬಡಕೂಲಿ ಕಾರ್ಮಿಕರಿಗೆ ನ್ಯಾಯ ಯೋಜನೆ ಅಡಿ 6ತಿಂಗಳ ಸಹಾಯಧನ ನೀಡಿ ಎಂದು ಕೇಂದ್ರ ಸರ್ಕಾರವನ್ನು ಯುವ ಕಾಂಗ್ರೆಸ್ ಒತ್ತಾಯಿಸಿದೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 29ನೆಯ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಗೋಪಿವೃತ್ತದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಪುಷ್ಪನಮನ ಸಲ್ಲಿಸಿದ ನಂತರ ಮುಖಂಡರು ಮಾತನಾಡಿದರು.
ನಗರದ 29 ಜನ ಬಡ ಕೂಲಿ ಕಾರ್ಮಿಕರಿಗೆ ಸಾಂಕೇತಿಕವಾಗಿ ಪ್ರತಿಯೊಬ್ಬರಿಗೆ 200 ರೂ.ಗಳಂತೆ ಯುವ ಕಾಂಗ್ರೆಸ್’ನಿಂದ ನೀಡುತ್ತಿದ್ದು ಇದೇ ರೀತಿಯಲ್ಲಿ ಕೇಂದ್ರ ಸರ್ಕಾರವು 6 ತಿಂಗಳುವರೆಗೆ ಎಲ್ಲಾ ಬಡ ಕೂಲಿ ಕಾರ್ಮಿಕರಿಗೆ ನೀಡಬೇಕೆಂದು ಆಗ್ರಹಿಸಿದೆ.
ಕೊರೋನಾ ಮಹಾಮಾರಿ ಲಾಕ್’ಡೌನ್’ನಿಂದ ತತ್ತರಿಸಿರುವ ನಗರ ಪ್ರದೇಶದ ಬಡ ಕೂಲಿ ಕಾರ್ಮಿಕರಿಗೆ ನ್ಯಾಯಯೋಜನೆಯಲ್ಲಿ ಕೇಂದ್ರ ಸರ್ಕಾರವು ತತಕ್ಷಣವೇ ಸಹಾಯಧನ ವಿತರಿಸಬೇಕು. ಜೊತೆಗೆ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ನರೆಗಾ ಕಾರ್ಯಕ್ರಮದ ಸಂಬಳವನ್ನು ದ್ವಿಗುಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಲಾಕ್ ಡೌನ್’ನಿಂದ ತತ್ತರಿಸಿರುವ ವಲಸೆ ಕಾರ್ಮಿಕರು ಹಾಗೂ ಎಲ್ಲಾ ಸ್ತರದ ಶ್ರೀಸಾಮಾನ್ಯರ ಹಿತವನ್ನು ಕಾಪಾಡಬೇಕು, ಇಪ್ಪತ್ತು ಲಕ್ಷ ಕೋಟಿ ಪ್ಯಾಕೇಜ್ ಬರೀ ಘೋಷಣೆ ಆಗಬಾರದು, ತಕ್ಷಣ ಕಾರ್ಯರೂಪಕ್ಕೆ ತರಬೇಕೆಂದು ಈ ಮೂಲಕ ಯುವ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಇಂದು ಸಾಂಕೇತಿಕವಾಗಿ ನಗರ ಭಾಗದ 29 ಬಡ ಕೂಲಿ ಕಾರ್ಮಿಕರಿಗೆ 200 ರೂಪಾಯಿಗಳಂತೆ ಒಂದು ದಿನದ ಸಹಾಯಧನವನ್ನು ಯುವ ಕಾಂಗ್ರೆಸ್ ನೀಡುತ್ತಿದ್ದು, ಕೇಂದ್ರ ಸರ್ಕಾರ ಬಡ ಕೂಲಿ ಕಾರ್ಮಿಕರ ಪರ ಗಮನಹರಿಸದಿದ್ದಲ್ಲಿ, ಮುಂದಿನ ದಿನದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್ ಶಿವಮೊಗ್ಗ ನಗರಾಧ್ಯಕ್ಷ ಎಚ್.ಪಿ. ಗಿರೀಶ್ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಟಿ.ವಿ. ರಂಜಿತ್ ಪದಾಧಿಕಾರಿಗಳಾದ ಕುಮರೇಶ್, ಡಿ.ಆರ್. ಗಿರೀಶ್, ತಂಗರಾಜ್, ಮಸ್ತಾನ್, ಸತೀಶ್, ಪ್ರವೀಣ್, ವೆಂಕಟೇಶ್, ಶಂಕರ್ ಹಲವಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
Get in Touch With Us info@kalpa.news Whatsapp: 9481252093
Discussion about this post