ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿನಿಮಾಗಳು ಮನಸ್ಸನ್ನು ಹಗುರ ಮಾಡಬೇಕು ಮತ್ತು ಮನರಂಜನೆಯ ಜೊತೆಗೆ ಮಾಹಿತಿಯನ್ನು ನೀಡುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ #Minister Madhu Bangarappa ಹೇಳಿದರು.
ಅವರು ಇಂದು ಮಹಾನಗರಪಾಲಿಕೆ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ `ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ-2025ರ ಚಲನಚಿತ್ರ ದಸರಾ’ #Dasara ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣಕ್ಕೆ ಇಂದು ಆದ್ಯತೆ ನೀಡಲಾಗುತ್ತಿದೆ. ದೇವಸ್ಥಾನದ ಗಂಟೆಗಳ ಜತೆಗೆ ಶಾಲೆಯ ಗಂಟೆಗಳು ಬಾರಿಸಬೇಕಾಗಿದೆ. ಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಸಿನಿಮಾಗಳು ಕೂಡ ಶಿಕ್ಷಣಕ್ಕೆ ಪೂರಕವಾಗಿದ್ದರೆ ಮತ್ತಷ್ಟು ಅನುಕೂಲವಾಗುತ್ತದೆ. ನಾನು ಕೂಡ ಸಿನಿಮಾ ಕ್ಷೇತ್ರದವನೇ. ನಿರ್ಮಾಪಕನಾಗಿ, ನಟನಾಗಿ, ಆಡಿಯೋ ಕಂಪನಿ ಮಾಲೀಕನಾಗಿ ಕೆಲಸ ಮಾಡಿದ ಅನುಭವವಿದೆ. ಉತ್ತಮ ಕತೆ ಸಿಕ್ಕರೆ, ಶರಣ್, ಕಾರುಣ್ಯಾ ರಾಮ್ ನಂತಹ ನಟ, ನಟಿಯರು ಡಿಸ್ಕೌಂಟ್ ನೀಡಿದರೆ ಈಗಲೂ ಸಿನಿಮಾ ನಿರ್ಮಾಣ ಮಾಡುವೆ. ಆ ಆಸೆ ಇನ್ನೂ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಸಿನಿಮಾ ಸಂತೋಷ ಕೊಡುವ ಕ್ಷೇತ್ರ. ದಸರಾದಲ್ಲಿ ಚಲನಚಿತ್ರ ದಸರಾವನ್ನು ಸೇರ್ಪಡೆಗೊಳಿಸಿರುವುದು ಅತ್ಯಂತ ಖುಷಿ ಕೊಟ್ಟಿದೆ. ಹಲವು ವರ್ಷಗಳಿಂದ ಶಿವಮೊಗ್ಗದಲ್ಲಿ ನಗರಸಭೆ ವತಿಯಿಂದ ದಸರಾ ಆಚರಿಸುತ್ತಾ ಬರಲಾಗುತ್ತಿದೆ. ಮೊದ ಮೊದಲು ಚಂದಾ ಎತ್ತಿ ದಸರಾ ಆಚರಣೆ ಮಾಡಲಾಗುತ್ತಿತ್ತು. ಆದರೆ ಈಗ ಪಾಲಿಕೆ ನಂತರ ಶಿವಮೊಗ್ಗ ದಸರಾಕ್ಕೆ ಒಂದು ವಿಶೇಷ ಅರ್ಥ ಬಂದಿದೆ. ಎಲ್ಲಾ ಸರ್ಕಾರಗಳು ಕೂಡ ಶಿವಮೊಗ್ಗ ದಸರಾಕ್ಕೆ ಅನುದಾನ ನೀಡುತ್ತಲೇ ಬಂದಿವೆ. ಈ ಬಾರಿಯೂ ಕೂಡ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 50 ಲಕ್ಷ ರೂ. ಅನುದಾನ ಕೊಟ್ಟಿದ್ದಾರೆ. ಅದರ ಜತೆಗೆ ಪಾಲಿಕೆ ಹಣವೂ ಸೇರಿದಂತೆ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ದಸರಾವನ್ನು ಈ ಬಾರಿ ಅತ್ಯಂತ ವೈಭವದಿಂದ ಆಚರಿಸುತ್ತಿದ್ದೇವೆ. ನಮ್ಮ ಶಿವಮೊಗ್ಗ, ನಮ್ಮ ದಸರಾ ನಮ್ಮ ಹೆಮ್ಮೆ. ಈ ವರ್ಷ 11 ದಿನಗಳ ಕಾಲ ಹಬ್ಬ ಆಚರಿಸುತ್ತಿದ್ದೇವೆ. ಪಾಲಿಕೆಯ ಎಲ್ಲಾ ಸಿಬ್ಬಂದಿಗಳು, ಆಯುಕ್ತರು ನಮಗೆ ಸಹಕಾರ ನೀಡಿದ್ದಾರೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















Discussion about this post