ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪತ್ರಿಕೋದ್ಯಮಕ್ಕೆ ಈಗ ಲಾಭವೇ ಮುಖ್ಯವಾಗಿದ್ದು, ಸಮಾಜಮುಖಿ ಎನ್ನುವುದನ್ನು ಹುಡುಕುವಂತಾಗಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಉಪ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಪಿ. ತ್ಯಾಗರಾಜ್ ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರೆಸ್ ಟ್ರಸ್ಟ್ ವತಿಯಿಂದ ಇಂದು ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪತ್ರಿಭಾ ಪುರಸ್ಕಾರ ಮತ್ತು ವೃತ್ತಿ ಬಾಂಧರವರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕಾ ದಿನಾಚರಣೆ ಎನ್ನುವುದು ಪತ್ರಿಕೋದ್ಯಮ ಸಮಾಜಮುಖಿಯಾಗಿದೆಯಾ, ಪತ್ರಿಕಾ ಧರ್ಮ ಪಾಲಿಸುವ ವಾತಾವರಣ ಇದೀಯಾ ಎನ್ನುವುದನ್ನು ಮನನ ಮಾಡಿಕೊಳ್ಳುವುದಕ್ಕೆ ಒಂದು ನೆಪ. ಈ ನಿಟ್ಟಿನಲ್ಲಿ ಶಿವಮೊಗ್ಗ ಪ್ರೆಸ್‍ಟ್ರಸ್ಟ್ ಆಯೋಜಿಸಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಇದು ಪತ್ರಿಕಾ ದಿನಾಚರಣೆ ಎನ್ನುವುದಕ್ಕಿಂತ ಕುಟುಂಬದ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು.
ಹಿಂದೆ ಪತ್ರಿಕೆಗಳು ಸ್ವಾತಂತ್ರ್ಯಕ್ಕಾಗಿ ದುಡಿದವು. ಆನಂತರ ದೇಶ ಅಭಿವೃದ್ದಿ ಗೆ ತಮ್ಮದೇ ಕೊಡುಗೆ ನೀಡಿದವು. ಇವರೆಡರ ಹಂತಗಳನ್ನು ದಾಟಿ ಇವತ್ತು ಮೂರನೇ ಹಂತದಲ್ಲಿರುವ ಪತ್ರಿಕೋದ್ಯಮ ದೊಡ್ಡ ಸವಾಲುಗಳ ನಡುವೆ ಇದೆ ಎಂದು ವಿಶ್ಲೇಷಿಸಿದ ಅವರು, ಮಾಧ್ಯಮ ಎನ್ನುವುದೀಗ ಉದ್ಯಮವಾಗಿದೆ. ಈ ಪ್ರಭಾವದಲ್ಲಿ ಸಮಾಜಮುಖಿ ಪತ್ರಿಕೋದ್ಯಮ ಎನ್ನುವುದು ಹುಡುಕುವಂತಾಗಿದೆ ಎಂದರು.
ಇವತ್ತಿನ ಪತ್ರಿಕೋದ್ಯಮಕ್ಕೆ ಲಾಭವೇ ಉದ್ದೇಶವಾಗಿದೆ. ಅದರ ಒತ್ತಡದಲ್ಲಿ ಪತ್ರಕರ್ತರ ವೃತ್ತಿಪರತೆ ಮೇಲೆ ಅದು ಗಂಭೀರ ಪರಿಣಾಮ ಬೀರಿದೆ. ಹಿಂದೆ ನಾನು ರಾಜಕೀಯ ವರದಿಗಾರನಾಗಿ ಕೆಲಸ ಮಾಡಿದವನು. ಕಳೆದ ಎಂಟು ವರ್ಷಗಳಿಂದ ಒರ್ವ ರಾಜಕೀಯ ವ್ಯಕ್ತಿಗೆ ಮಾಧ್ಯಮ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿನಾನು ಕಂಡಂತೆ ಪತ್ರಿಕೋದ್ಯಮದಲ್ಲಿ ರಾಜಕೀಯ ತೂರಿಕೊಂಡಿದೆ. ಅದು ಡಾಳಾಗಿಕಾಣುತ್ತಿದೆ. ಇದು ತುಂಬಾ ಬೇಸರ ತರಿಸಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು. ಹಿರಿಯ ವಾರ್ತಾಧಿಕಾರಿ ಆರ್. ಮಾರುತಿ ಇದ್ದರು. ಪ್ರೆಸ್‍ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ ಸ್ವಾಗತಿಸಿದರು.
ಸಭೆಯಲ್ಲಿ ಗಣ್ಯರಾದ ಹೆಚ್.ಎಂ. ಚಂದ್ರಶೇಖರಪ್ಪ, ಹೆಚ್.ಎಸ್. ಸುಂದರೇಶ್, ಎಸ್.ಪಿ. ಶೇಷಾದ್ರಿ, ಕೆ.ಟಿ. ಗಂಗಾಧರ್, ಗುರುಮೂರ್ತಿ, ಹಾಲೇಶಪ್ಪ, ದಯಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಿಕಾರಿಪುರ ಸರ್ವಜ್ಞ ಪತ್ರಿಕೆಯ ಸಂಪಾದಕ ಎಸ್.ಬಿ. ಮಠದ್, ಜೇಂಕಾರ್ ಅಡ್ವೆಟೈಸರ್ಸ್‍ನ ವ್ಯವಸ್ಥಾಪಕ ನಿರ್ದೇಶಕ ನರೇಶ್ ಕುಮಾರ್ ಟಿ.ಎ., ವಿಜಯ ಕರ್ನಾಟಕ ಪತ್ರಿಕೆಯ ಮುದ್ರಣ ವಿಭಾಗದ ವ್ಯವಸ್ಥಾಪಕ ನಾಗಪ್ಪ ಗೌಡ್ರು, ಡಿಸೈಜನರ್ ಎಂ.ಸಿ. ರಾಜು, ಕನ್ನಡ ಪ್ರಭ ಜಾಹೀರಾತು ವಿಭಾಗದ ಕಾರ್ತೀಕ್ ಚಂದ್ರ ಮೌಳಿ, ವಿಜಯವಾಣಿಯ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ಯೋಗರಾಜ್, ರಿಪಬ್ಲಿಕ್ ಕನ್ನಡದ ವೀಡಿಯೋ ಜರ್ನಲಿಸ್ಟ್ ಚಿರಾಗ್, ಹಿರಿಯ ಪತ್ರಿಕಾ ವಿತರಕ ಮಂಜುನಾಥ್ ಬಿ. ಅವರುಗಳನ್ನು ಸನ್ಮಾನಿಸಲಾಯಿತು. ಹಾಗೆಯೇ ಪತ್ರಕರ್ತರ ಮಕ್ಕಳು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದವರನ್ನು ಕೂಡ ಅಭಿನಂದಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















