ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾಲ್ಲೂಕಿನ ಬಾಳೆಕೊಪ್ಪ ಗ್ರಾಮದಲ್ಲಿ ಮಂಗಳವಾರ ಸಂಜೆ ಮಳೆ ಸುರಿದಿದೆ. ಈ ವೇಳೆ ಸಿಡಿಲು ಬಡಿದು 40 ಮೇಕೆ ಹಾಗೂ ಎರಡು ನಾಯಿ ಮರಿಗಳು ಸಾವನ್ನಪ್ಪಿವೆ. ಮೇಕೆ ಕಾಯುತ್ತಿದ್ದ ಬಾಳೆಕೊಪ್ಪ ನಿವಾಸಿ ಹುಚ್ಚಪ್ಪ (58) ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಳೆಕೊಪ್ಪದ ಸಿದ್ದಪ್ಪ ಅವರ ಪುತ್ರರಾದ ಸುಬ್ಬಪ್ಪ ಹಾಗೂ ಹುಚ್ಚಪ್ಪ ಸಹೋದರರಿಗೆ ಸೇರಿದ 70 ಮೇಕೆಗಳು ಇವೆ. ಗ್ರಾಮದ ಸಮೀಪದ ದೊಡ್ಡ ಮರಸದ ಬಳಿಯ ವಾಸಪ್ಪ ಅವರ ಜಮೀನಿಗೆ ಹುಚ್ಚಪ್ಪ ಮೇಕೆಗಳನ್ನು ಮೇಯಲು ಕೊಂಡೊಯ್ದಿದ್ದರು. ಸಂಜೆ ಭಾರೀ ಗಾಳಿಯೊಂದಿಗೆ ಮಳೆ ಆರಂಭವಾಗಿದ್ದು, ಹುಚ್ಚಪ್ಪ ಜಮೀನಿನ ಬಳಿಯ ನಂದಿ ಮರದ ಕೆಳಗೆ ನಿಂತಾಗ ಸಿಡಿಲು ಬಡಿದಿದೆ. ಈ ವೇಳೆ ಮೇಕೆಗಳು ಸಾವನ್ನಪ್ಪಿವೆ. ಗಾಯಗೊಂಡಿದ್ದ ಹುಚ್ಚಪ್ಪ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮುಕ್ಕಾಲು ಎಕರೆ ಜಮೀನು ಹೊಂದಿರುವ ಸಹೋದರರಿಗೆ ಮೇಕೆಗಳೇ ಆಸ್ತಿ ಆಗಿದ್ದವು. ₹5 ಲಕ್ಷದಷ್ಟು ನಷ್ಟ ಆಗಿದ್ದು, ಬದುಕಿಗೆ ಆಧಾರವಾಗಿದ್ದ ಮೇಕೆಗಳ ಕಳೆದುಕೊಂಡ ಕಾರಣ ಕುಟುಂಬದ ಸದಸ್ಯರ ದುಖಃದ ಕಟ್ಟೆಯೊಡೆದಿತ್ತು. ಈ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವರ ವರದಿ ಆಧರಿಸಿ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಮೇಕೆಗಳ ಮಾಲೀಕರಿಗೆ ಪರಿಹಾರ ಕಲ್ಪಿಸಲಾಗುವುದು’ ಎಂದು ಶಿವಮೊಗ್ಗ ತಹಶೀಲ್ದಾರ್ ರಾಜೀವ್ ಪ್ರತಿಕ್ರಿಯಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post